ಬಿಜೆಪಿ ಒಂದು ಕುಟುಂಬದ ಪಕ್ಷ ಆಗಬಾರದು: ಶಾಸಕ ಬಸನಗೌಡ ಯತ್ನಾಳ್
ಬಿಜೆಪಿ ಒಂದು ಕುಟುಂಬದ ಪಕ್ಷವಾಗಬಾರದು ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ತೀಕ್ಷ್ಣವಾಗಿ ಹೇಳಿದ್ದಾರೆ.

ಬೆಂಗಳೂರು (ನ.18): ಬಿಜೆಪಿ ಒಂದು ಕುಟುಂಬದ ಪಕ್ಷವಾಗಬಾರದು ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ತೀಕ್ಷ್ಣವಾಗಿ ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಗ ಬಿ.ವೈ.ವಿಜಯೇಂದ್ರ ನೇಮಕದ ಬೆನ್ನಲ್ಲೇ ಈ ಹೇಳಿಕೆ ಬಂದಿದೆ. ಕೆಲವರು ತಮ್ಮ ಮಕ್ಕಳನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸಲು ತಯಾರಿ ನಡೆಸಿದ್ದಾರೆ.
ಅದಕ್ಕಾಗಿ ವಿಜಯೇಂದ್ರನ ಬೆನ್ನಹತ್ತಿದ್ದಾರೆ. ಇದೆಲ್ಲ ಲೋಕಸಭಾ ಚುನಾವಣೆವರೆಗೆ ನಡೆಯುತ್ತದೆ ಎಂದೂ ಅವರು ಗುಡುಗಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಚಿಂದಿ ಚೋರ್‌ಗಳನ್ನು ಆ ಹುಲಿ, ಈ ಹುಲಿ ಎಂದು ಮಾಧ್ಯಮದವರು ಹೇಳುತ್ತಾರೆ. ನಾನು ಜೀ ಹೂಜರ್ ಮಾಡೋದಿಲ್ಲ. ಪಕ್ಷವು ಒಂದು ವರ್ಗದ ಕೇಂದ್ರೀಕೃತವಾಗಿದೆ ಎನ್ನುವ ವಿಷಯವನ್ನು ವರಿಷ್ಠರಿಗೆ ಮನದಟ್ಟಾಗುವಂತೆ ಹೇಳಿದ್ದೇನೆ. ಎಷ್ಟೋ ಸತ್ಯಗಳು ಅವರಿಗೆ ಗೊತ್ತಿರಲಿಲ್ಲ. ಸತ್ಯ ಹೇಳೋದಕ್ಕೆ ಎಲ್ಲರೂ ಭಯ ಪಡುತ್ತಾರೆ.
ರಾಜಕಾರಣದಲ್ಲಿ ನ್ಯಾಯ, ನೀತಿ, ಪಕ್ಷದ ಹಿತ ಇರುವುದರಿಂದ ನಾನು ಗಟ್ಟಿಯಾಗಿ ಅವರ ಎದುರಿಗೆ ಕರ್ನಾಟಕದಲ್ಲಿ ಪಕ್ಷದ ಸ್ಥಿತಿ ಏನಾಗಿದೆ ಎನ್ನುವುದನ್ನು ಹೇಳಿದ್ದೇನೆ ಎಂದರು. ಕೇಂದ್ರ ನಾಯಕರು ಕೆಲ ಚೇಲಾಗಳ ಮಾತು ಕೇಳಬಾರದು. ಹಿಂದೂಗಳು ಉಳಿಯಬೇಕಾದರೆ 2024ಕ್ಕೆ ಮತ್ತೆ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆಗಬೇಕು. ದೇಶಕ್ಕೆ ಮೋದಿ ಅವರ ಅವಶ್ಯಕತೆ ಇದೆ. ಅವರಿಗೆ ಅಧಿಕಾರ ಬೇಕಿಲ್ಲ. ಆದರೆ ಇಸ್ರೇಲ್‌ನಲ್ಲಿ ಹಮಾಸ್ ದಾಳಿ ಎಲ್ಲ ನೋಡಿದ ಮೇಲೆ ದೇಶಕ್ಕೆ ಮೋದಿ ಅವರ ಅಗತ್ಯತೆ ಇದೆ. ಮೋದಿ ಅವರು ಮತ್ತೆ ಬರಲಿಲ್ಲ ಅಂದರೆ ಭಾರತವೇ ಉಳಿಯೋದಿಲ್ಲ. ನಾವು ಬಿಜೆಪಿಗೆ ಪ್ರಾಣ ಕೊಡಲು ಸಿದ್ದ ಎಂದು ಯತ್ನಾಳ ಹೇಳಿದರು.
ಡಿಕೆಶಿ ಆಫರ್ ನಿಜ, ಆದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ: ಜಿ.ಟಿ.ದೇವೇಗೌಡ
ನನ್ನ ಖರೀದಿಗೆ ಒಬ್ಬ ಏಜೆಂಟ್ ಬಂದಿದ್ದ: ಒಬ್ಬ ಏಜೆಂಟ್ ಖರೀದಿ ಮಾಡೋದಕ್ಕೆ ಬಂದಿದ್ದ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಾಂಬ್ ಸಿಡಿಸಿದ್ದಾರೆ. ನಾನು ಯಾರಿಗೂ ಅಂಜುವುದಿಲ್ಲ. ಯಾರ ಮುಲಾಜಿಲ್ಲಿನಲ್ಲಿ ಈ ಯತ್ನಾಳ್ ಇಲ್ಲ. ಯತ್ನಾಳ್‌ನನ್ನು ಯಾರೂ ಖರೀದಿ ಮಾಡೋದಕ್ಕೆ ಆಗಲ್ಲ. ನಿನ್ನಂಥವರನ್ನು ಹತ್ತು ಜನ ಖರೀದಿ ಮಾಡೋ ಶಕ್ತಿ ನನಗಿದೆ ಆತನಿಗೆ ಹೇಳಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.