ಭ್ರಷ್ಟಾಚಾರದಲ್ಲೇ ಮುಳುಗಿರುವ ಬಿಜೆಪಿ ಕ್ಷಮಾ ಯಾತ್ರೆ ಮಾಡಬೇಕಿತ್ತು: ಸಲೀಂ ಅಹ್ಮದ್
Karnataka Politics: ಬಿಜೆಪಿ ಮಾಡುತ್ತಿರುವ ಸಂಕಲ್ಪ ಯಾತ್ರೆ ಹಣ ಸಂಗ್ರಹ ಯಾತ್ರೆಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಗಂಭೀರ ಆರೋಪ ಮಾಡಿದರು
ವರದಿ: ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ
ಹಾವೇರಿ( ನ. 7): ಭ್ರಷ್ಟಾಚಾರದಲ್ಲೇ ಮುಳುಗಿರುವ ಬಿಜೆಪಿಯವರು (BJP) ಕ್ಷಮಾ ಯಾತ್ರೆ ಮಾಡಬೇಕಿತ್ತು. ಈಗ ಬಿಜೆಪಿ ಮಾಡುತ್ತಿರುವ ಸಂಕಲ್ಪ ಯಾತ್ರೆ (Jana Sankalpa Yatre) ಹಣ ಸಂಗ್ರಹ ಯಾತ್ರೆಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ (Saleem Ahmed) ಗಂಭೀರ ಆರೋಪ ಮಾಡಿದರು. ನಗರದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಳೆದ 3 ವರ್ಷಗಳಲ್ಲಿ ಬಿಜೆಪಿಯ ಭ್ರಷ್ಟಾಚಾರ ಮಿತಿಮೀರಿದೆ. 40 ಪರ್ಸೆಂಟ್ ಸರ್ಕಾರ ಎಂಬುದು ಜಗಜ್ಜಾಹೀರಾಗಿದೆ. ಬಿಜೆಪಿ ಪಾಪದ ಕೊಡ ತುಂಬಿದೆ. ಎಲ್ಲೆಡೆ ಕಾಂಗ್ರೆಸ್ ಪರವಾದ ಅಲೆ ಎದ್ದಿದೆ ಎಂದು ಹೇಳಿದರು.
ಭ್ರಷ್ಟಾಚಾರದ ಮೂಲವೇ ಕಾಂಗ್ರೆಸ್ (Congress) ಎಂಬ ಸಿಎಂ ಬೊಮ್ಮಾಯಿ (Basavaraj Bommai) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನ ಭ್ರಷ್ಟಾಚಾರದ ಬಗ್ಗೆ ಹೇಳುವ ನೈತಿಕತೆ ಬಿಜೆಪಿಯವರಿಗಿಲ್ಲ. 40 ಪರ್ಸೆಂಟ್ ಕಮಿಷನ್ ಬಗ್ಗೆ ಇನ್ನೂ ಉತ್ತರಿಸುತ್ತಿಲ್ಲ. ಒಂದು ವೇಳೆ ಕಾಂಗ್ರೆಸ್ ಭ್ರಷ್ಟಾಚಾರ ನಡೆಸಿದ್ದರೆ 3 ವರ್ಷ ಯಾಕೆ ಸುಮ್ಮನಿದ್ದಿರಿ. ಬದ್ಧತೆ, ಧೈರ್ಯ ಇದ್ದರೆ ನಮ್ಮ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಬೇಕಿತ್ತು. ಇದು ಗುಂಡಿಗಳ ಸರ್ಕಾರವಾಗಿದೆ. ಬೆಂಗಳೂರು (Bengaluru) ಸೇರಿದಂತೆ ರಾಜ್ಯದೆಲ್ಲೆಡೆ ರಸ್ತೆ ಗುಂಡಿಗಳನ್ನು ನೋಡಿದರೆ ಇವರ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಸಾಮಾಜಿಕ 'ಅನ್ಯಾಯ', ಅಲ್ಪಸಂಖ್ಯಾತರಿಗೆ ಮೋಸ: ಜನಸಂಕಲ್ಪ ಸಮಾವೇಶದಲ್ಲಿ ಸಿದ್ದುಗೆ ಸಿಎಂ ಗುದ್ದು!
ಉಡುಪಿಯಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ: ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಜನಸಂಕಲ್ಪ ಯಾತ್ರೆ ಉಡುಪಿ ಜಿಲ್ಲೆಯ ಕಾಪು ಹಾಗೂ ಬೈಂದೂರು, ಮಂಗಳವಾರ ಗದಗ ಜಿಲ್ಲೆಯ ಶಿರಹಟ್ಟಿ, ಹಾವೇರಿ ಜಿಲ್ಲೆಯ ಬ್ಯಾಡಗಿ ಹಾಗೂ ಬುಧವಾರ ಬೆಳಗಾವಿ ಜಿಲ್ಲೆಯ ಬೆಳಗಾವಿ ಉತ್ತರ, ರಾಯಭಾಗ, ಖಾನಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಇದೇ ತಿಂಗಳ 20 ರಂದು ಬಳ್ಳಾರಿಯಲ್ಲಿ ಎಸ್‌ಟಿ ಮೋರ್ಚಾ ಸಮಾವೇಶ ಹಾಗೂ 30ರಂದು ಮೈಸೂರಿನಲ್ಲಿ ಎಸ್‌ಸಿ ಮೋರ್ಚಾ ಸಮಾವೇಶ ನಡೆಯಲಿದೆ.