ಬೆಂಗಳೂರು, (ನ.27): ಕಾಂಗ್ರೆಸ್ ಮತ್ತು ಜೆಡಿಎಸ್ ಅನರ್ಹ ಶಾಸಕರುಗಳನ್ನ  ಬಿಜೆಪಿ ದುಡ್ಡು ಕೊಟ್ಟು ಖರೀದಿಸಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಾಂದರ್ಭಿಕ ಸಾಕ್ಷ್ಯಗಳನ್ನು ನೀಡಿದ್ದಾರೆ.

ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹದಿನೇಳು ಶಾಸಕರನ್ನು ಬಿಜೆಪಿ ದುಡ್ಡು ಕೊಟ್ಟೇ ಖರೀದಿಸಿದ್ದಕ್ಕೆ ಸಾಂದರ್ಭಿಕ ಸಾಕ್ಷ್ಯಗಳಿವೆ. ಈಗಿನ ಡಿಸಿಎಂ ಅಶ್ವಥನಾರಾಯಣ, ಶಾಸಕರಾದ ವಿಶ್ವನಾಥ್, ಲಿಂಬಾವಳಿ ಮತ್ತು ಯೋಗೇಶ್ವರ್ ಮನೆಗೆ ಬಂದು 5 ಕೋಟಿ ರೂ. ನೀಡಿದ್ದರು ಎಂದು ಮಾಜಿ ಸಚಿವ ಶ್ರೀನಿವಾಸಗೌಡ ವಿಧಾನಸಭೆಯಲ್ಲಿಯೇ ಹೇಳಿಲ್ವೆ? ಇನ್ನು ಏನು ಸಾಕ್ಷಿ ಬೇಕು? ಎಂದು ಬರೆದುಕೊಂಡಿದ್ದಾರೆ.

ದೇವದುರ್ಗಕ್ಕೆ ಯಡಿಯೂರಪ್ಪ ಹೋಗಿ ಜೆಡಿಎಸ್ ಶಾಸಕನ ಖರೀದಿಗೆ ಯತ್ನಿಸಿದ್ದು ಅಡಿಯೋ ಟೇಪ್‌ನಲ್ಲಿಲ್ವೇ? ಅದು ತಮ್ಮದೇ ಧ್ವನಿ ಎಂದು ಅವರು ಒಪ್ಪಿಕೊಂಡಿಲ್ವೆ? ಇದರ ಅರ್ಥ ಏನು? ಆತ್ಮಸಾಕ್ಷಿಗಿಂತ ಮಿಗಿಲಾದ ಸಾಕ್ಷಿ ಯಾವುದು? ಎಂದು ಟ್ವೀಟ್ ಬಾಣ ಬಿಟ್ಟಿದ್ದಾರೆ.

ಇದಕ್ಕೆ ಸಚಿವ ಸಿ.ಟಿ.ರವಿ ಟ್ವೀಟ್ ಮಾಡಿದ್ದು, "ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಬಿಜೆಪಿ ನಾಯಕರು ನನಗೆ 5 ಕೋಟಿ ರೂ. ಮುಂಗಡ ನೀಡಿರಲಿಲ್ಲ. ಆಪರೇಷನ್‌ ಕಮಲ ಪ್ರಯತ್ನವನ್ನು ವಿಫಲಗೊಳಿಸಲು ಸುಳ್ಳು ಹೇಳಿದೆ" ಎಂದು ಇದೇ ಶ್ರೀನಿವಾಸಗೌಡ ಉಲ್ಟಾ ಹೊಡೆದಿದ್ದಾರೆ.

ಹಗಲು ರಾತ್ರಿ ನಿರಂತರವಾಗಿ ಸುಳ್ಳು ಹೇಳುವ ಸಿದ್ದರಾಮಯ್ಯನವರೇ, ಬಿಜೆಪಿಯ ಬಗ್ಗೆ ಟೀಕೆ ಮಾಡುವ ನೈತಿಕತೆ ನಿಮಗಿದೆಯೇ? ಎಂದು ತಿರುಗೇಟು ನಿಡಿದ್ದಾರೆ.