200 ಯುನಿಟ್‌ ಉಚಿತ ವಿದ್ಯುತ್‌ ಯೋಜನೆ ಜಾರಿಗೆ ಹಲವು ಷರತ್ತು ವಿಧಿಸುತ್ತಿರುವುದು ಹಾಗೂ ವಿದ್ಯುತ್‌ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿಯಿಂದ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಯಿತು.

ಬೆಂಗಳೂರು (ಜೂ.06): 200 ಯುನಿಟ್‌ ಉಚಿತ ವಿದ್ಯುತ್‌ ಯೋಜನೆ ಜಾರಿಗೆ ಹಲವು ಷರತ್ತು ವಿಧಿಸುತ್ತಿರುವುದು ಹಾಗೂ ವಿದ್ಯುತ್‌ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿಯಿಂದ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಯಿತು. ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದರು. ಕಾಂಗ್ರೆಸ್‌ ಸರ್ಕಾರ ಕೊಟ್ಟಮಾತಿಗೆ ತಪ್ಪಿದೆ. ಚುನಾವಣೆಗೂ ಮುಂಚೆ ಗ್ಯಾರಂಟಿ ಯೋಜನೆಗಳು ಉಚಿತ ಎಂದು ಹೇಳಿ ಇದೀಗ ಷರತ್ತು ವಿಧಿಸಲಾಗುತ್ತಿದೆ. ಜೊತೆಗೆ, ವಿದ್ಯುತ್‌ ದರದಲ್ಲೂ ಹೆಚ್ಚಳ ಮಾಡಿ ಗ್ರಾಹಕರ ಮೇಲೆ ಬರೆ ಎಳೆದಿದೆ ಎಂದು ಆರೋಪಿಸಿದರು.

ವಿಜಯಪುರದಲ್ಲಿ ಸಿದ್ದೇಶ್ವರ ದೇವಸ್ಥಾನದ ಎದುರು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಕೈಗೆ ಬೇಡಿ ಹಾಕಿಕೊಂಡು, ‘ಸಾಲ’ ಎಂಬ ಸಂದೇಶವನ್ನು ಕೊರಳಲ್ಲಿ ಹೊತ್ತು, ಹಣೆಯ ಮೇಲೆ ಮೂರು ನಾಮ ಹಾಕಿಕೊಂಡು ಕಾಂಗ್ರೆಸ್‌ನ ಜನವಿರೋಧಿ ನೀತಿಯನ್ನು ಖಂಡಿಸಿದರು. ಹಾವೇರಿಯಲ್ಲಿ ಸಂಸದ ಶಿವಕುಮಾರ ಉದಾಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಇಂದಿನಿಂದಲೇ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿದ್ದೇವೆ: ಮಾಜಿ ಸಿಎಂ ಬೊಮ್ಮಾಯಿ

ಮಂಗಳೂರಿನಲ್ಲಿ ಶಾಸಕ ವೇದವ್ಯಾಸ ಕಾಮತ್‌ ನೇತೃತ್ವದಲ್ಲಿ ನಗರದ ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಲಾಯಿತು. ಮೈಸೂರಿನಲ್ಲಿ ಶಾಸಕ ಟಿ.ಎಸ್‌. ಶ್ರೀವತ್ಸ ನೇತೃತ್ವದಲ್ಲಿ ನಗರದ ಜಿಲ್ಲಾ ಪಂಚಾಯತ್‌ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಶಿವಮೊಗ್ಗದಲ್ಲಿ ಶಾಸಕ ಎಸ್‌.ಎನ್‌.ಚನ್ನಬಸಪ್ಪ ನೇತೃತ್ವದಲ್ಲಿ ನಗರದ ಖಾಸಗಿ ಬಸ್‌ ನಿಲ್ದಾಣದ ಮುಂಭಾಗ, ಮಂಡ್ಯದಲ್ಲಿ ಸರ್‌ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪ್ರತಿಭಟನೆ ನಡೆಯಿತು. ಇದೇ ವೇಳೆ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಕಾರವಾರ, ಶಿರಸಿ, ಕಲಬುರಗಿ, ರಾಯಚೂರು, ರಾಮನಗರ, ಹೊಸಪೇಟೆ, ಗಂಗಾವತಿ, ಕಾರಟಗಿ, ಹಿರೇಕೆರೂರು ಸೇರಿದಂತೆ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು.

ಖಾತ್ರಿ ಯೋಜನೆಗಳಿಗೆ ಷರತ್ತು ಖಂಡನೀಯ: ವಿದ್ಯುತ್‌ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಹಾಗೂ 200 ಯೂನಿಟ್‌ ಉಚಿತ ವಿದ್ಯುತ್‌ ಯೋಜನೆ ಜಾರಿಗೆ ವಿಧಿಸಿರುವ ಷರತ್ತುಗಳನ್ನು ಕೂಡಲೇ ಕೈಬಿಡುವಂತೆ ಆಗ್ರಹಿಸಿ ಬಿಜೆಪಿ ನಗರ ಹಾಗೂ ಗ್ರಾಮಾಂತರ ಘಟಕಗಳ ನೇತೃತ್ವದಲ್ಲಿ ತಾಲೂಕು ಕಚೇರಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಶಾಸಕ ಧೀರಜ್‌ ಮುನಿರಾಜ್‌ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಎಂದು ಹೇಳಿ ಈಗ ಅದಕ್ಕೆ ಷರತ್ತನ್ನು ವಿಧಿಸಿದ್ದೂ ಅಲ್ಲದೆ ಪ್ರತಿ ಯೂನಿಟ್‌ಗೆ 70 ಪೈಸೆ ದರವನ್ನು ಹೆಚ್ಚಿಸಿದೆ. 

ಇದು ಜನವಿರೋಧಿ ಹಾಗೂ ವಚನ ಭ್ರಷ್ಟ ನಡೆಯಾಗಿದ್ದು, ಕೂಡಲೇ ಸರ್ಕಾರ ಈ ಪ್ರಸ್ತಾವನೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು. ಬಿಜೆಪಿ ಸರ್ಕಾರ ಈ ಹಿಂದೆ ಪ್ರತಿ ಲೀಟರ್‌ ಹಾಲಿಗೆ 5 ರು. ಪ್ರೋತ್ಸಾಹಧನ ನೀಡುತ್ತಿತ್ತು. ಈಗ ಒಂದೂವರೆ ರುಪಾಯಿ ಕಡಿತ ಮಾಡಲಾಗಿದೆ ಎಂದು ಆರೋಪಿಸಿ, ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಮನೆಯ ಯಜಮಾನಿಗೆ 2000 ರು. ಕೊಡುತ್ತೇವೆ ಎಂದಿರುವ ಸರ್ಕಾರ ಅವಿಭಕ್ತ ಕುಟುಂಬದ ಅತ್ತೆ-ಸೊಸೆಯರ ನಡುವೆ ಭಿನ್ನಾಭಿಪ್ರಾಯ ಮೂಡಿಸಿ ಕೌಟುಂಬಿಕ ಅಶಾಂತಿಗೆ ಕಾರಣವಾಗುತ್ತಿದೆ ಎಂದರು.

ಪಂಚಾಯಿತಿ ಕೆಲಸಗಳು ವಿಳಂಬವಾಗದಿರಲಿ: ಶಾಸಕ ಶರತ್‌ ಬಚ್ಚೇಗೌಡ

200 ಯುನಿಟ್‌ ವಿದ್ಯುತ್‌ ವಿಚಾರವಾಗಿ ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ವಿದ್ಯುತ್‌ ದುಂದುವೆಚ್ಚ, ದುರುಪಯೋಗ ಮಾಡುವಂತೆ ಜನರನ್ನು ಪ್ರಚೋದಿಸುತ್ತಿದೆ. ದುಂದುವೆಚ್ಚ ಪ್ರಕೃತಿ ವಿರೋಧಿ, ಜನ ವಿರೋಧಿ.
- ಸಿದ್ದರಾಮಯ್ಯ ಮುಖ್ಯಮಂತ್ರಿ