ಮಂಗಳೂರು, (ನ.06): ಆರ್.ಆರ್.ನಗರದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಶಿರಾ ದಲ್ಲಿ ಸಿದ್ಧರಾಮಯ್ಯ ಕಾಂಗ್ರೆಸ್ ನೇತೃತ್ವ ವಹಿಸಿದ್ದರು. ಇವರಿಬ್ಬರಲ್ಲಿ ಒಬ್ಬರನೊಬ್ಬರನ್ನು ಸೋಲಿಸಬೇಕು ಎಂಬ ಉದ್ದೇಶದಿಂದ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಭವಿಷ್ಯ ನುಡಿದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ನಗರ ಪಂಚಾಯತ್ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು,  ಕಳೆದ ಬಾರಿಯ ಮೂರು ಪ್ರಭಾವಿ ಸ್ಪರ್ಧಾಳುಗಳು ಬಿಜೆಪಿಯಲ್ಲಿರುವುದರಿಂದ ಉಪ ಚುನಾವಣೆಯಲ್ಲಿ ಹಾಗೂ ನಾಲ್ಕು ವಿಧಾನ ಪರಿಷತ್ ಕ್ಷೇತ್ರದಲ್ಲಿ ಗೆಲುವು ನಮ್ಮದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ಬೈ ಎಲೆಕ್ಷನ್‌ನಲ್ಲಿ ಬಿಜೆಪಿ ಗೆಲುವು ಪಕ್ಕಾ, ಈವರೆಗೂ ನಾನು ಹೇಳಿರುವ ಮಾತು ಸುಳ್ಳಾಗಿಲ್ಲ' 

ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗೆದ್ದರೂ ಸಹ ಅಲ್ಲಿ ಅಭಿವೃದ್ಧಿಯ ಹಿನ್ನಡೆಯಾಗಿದೆ. ಇದರಿಂದ ಮತದಾರರು ಈ ಬಾರಿ ಬಿಜೆಪಿಯನ್ನು ಗೆಲ್ಲಿಸಲು ವಿಶ್ವಾಸದ ಮತಗಳನ್ನು ಹಾಕಿದ್ದಾರೆ ಎಂದರು.

ಮುಂದಿನ ಗ್ರಾಮ ಪಂಚಾಯತ್ ಚುನಾವಣೆ ಹಾಗೂ ತಾಲೂಕು, ಜಿಲ್ಲಾ ಪಂಚಾಯತ್‌ನ ಚುನಾವಣೆಗೆ ಈಗಾಗಲೇ ಬಿಜೆಪಿ ಸಿದ್ಧತೆಯನ್ನು ಮಾಡಿಕೊಂಡಿದೆ. ವಾರ್ಡ್ ಸಹಿತ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಜ್ಜುಗೊಳಿಸಲಾಗಿದೆ, ರಾಜ್ಯದಲ್ಲಿ ಶೇ.80 ರಷ್ಟು ಸ್ಥಾನಗಳು ಬಿಜೆಪಿಗೆ ಸಿಗಲಿರುವ ವಿಶ್ವಾಸ ಇದೆ ಎಂದು ಹೇಳಿದರು.