ಬಿಜೆಪಿಯ ಪ್ರತಿಯೊಂದು ವಿಚಾರಕ್ಕೂ ಅಪಪ್ರಚಾರ ಮತ್ತು ಟೀಕೆ ಮಾಡುವುದು ಕಾಂಗ್ರೆಸ್ಸಿನ ಗುಣ. ಸುದೀಪ್‌ ಅವರಿಗೆ ಬೆದರಿಕೆಗಳು ಲೆಕ್ಕಕ್ಕಿಲ್ಲ. ಅದಕ್ಕೆಲ್ಲಾ ಅವರು ಬಗ್ಗುವುದಿಲ್ಲ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಶಿವಮೊಗ್ಗ (ಏ.7) : ಬಿಜೆಪಿಯ ಪ್ರತಿಯೊಂದು ವಿಚಾರಕ್ಕೂ ಅಪಪ್ರಚಾರ ಮತ್ತು ಟೀಕೆ ಮಾಡುವುದು ಕಾಂಗ್ರೆಸ್ಸಿನ ಗುಣ. ಸುದೀಪ್‌ ಅವರಿಗೆ ಬೆದರಿಕೆಗಳು ಲೆಕ್ಕಕ್ಕಿಲ್ಲ. ಅದಕ್ಕೆಲ್ಲಾ ಅವರು ಬಗ್ಗುವುದಿಲ್ಲ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪಕ್ಷದ ಅಭ್ಯರ್ಥಿಗಳ ಪರ ನಟ ಸುದೀಪ್‌(Kichha Sudeep) ಪ್ರಚಾರಕ್ಕೆ ಬರುತ್ತಿರುವುದನ್ನು ನಾವೆಲ್ಲರೂ ಸಂತೋಷದಿಂದ ಸ್ವಾಗತಿಸುತ್ತೇವೆ. ಅವರು ಕೂಡ ಕೆಲವು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ ಎಂದು ಈಗಾಗಲೇ ಘೋಷಿಸಿದ್ದಾರೆ. ಆದರೆ, ಕಾಂಗ್ರೆಸ್‌ನವರು ಸಾಮಾಜಿಕ ಜಾಲತಾಣಗಳ ಮೂಲಕ ಟೀಕೆ ಮಾಡುತ್ತಿದ್ದಾರೆ. ಒಂದುವೇಳೆ ಕಾಂಗ್ರೆಸ್‌ ಪರ ಪ್ರಚಾರಕ್ಕೆ ಹೋಗಿದ್ದರೆ ಅವರು ಇದೇ ರೀತಿ ಟೀಕೆ ಮಾಡುತ್ತಿದ್ದರಾ ಎಂದು ಪ್ರಶ್ನಿಸಿದರು.

ಸಿದ್ದ​ರಾ​ಮಯ್ಯ ಅಲೆ​ಮಾರಿ ಎಂಬ ಈಶ್ವ​ರಪ್ಪ ಹೇಳಿಕೆ ವಿರುದ್ಧ ಕಾಂಗ್ರೆಸ್ ದೂರು

ನಮ್ಮ ಪಕ್ಷದಲ್ಲಿ ಎಲ್ಲ ಕಾರ್ಯಕರ್ತರಿಂದ ಮತ್ತು ಪ್ರಮುಖರ ಅಭಿಪ್ರಾಯ ಸಂಗ್ರಹಿಸಿ, ರಾಜ್ಯ ಚುನಾವಣಾ ಸಮಿತಿಯಲ್ಲಿ ಚರ್ಚಿಸಿದ ಬಳಿಕ ಕೇಂದ್ರ ಸಮಿತಿಗೆ ಪಟ್ಟಿರವಾನಿಸಲಾಗುವುದು. ಅಲ್ಲಿ ಕೇಂದ್ರ ನಾಯಕರು ಅಂತಿಮ ತೀರ್ಮಾನ ಪ್ರಕಟಿಸುತ್ತಾರೆ. ಪ್ರಜಾಪ್ರಭುತ್ವದ ರೀತಿಯಲ್ಲೇ ಅಭ್ಯರ್ಥಿಗಳ ಘೋಷಣೆ ಆಗುತ್ತದೆ ಎಂದರು.

ಸಿದ್ದರಾಮಯ್ಯ ಅಲೆಮಾರಿ, ಎಲ್ಲಿ ನಿಂತರೂ ಸೋಲು:

ಸಿದ್ದರಾಮಯ್ಯ(Siddaramaiah) ಅಲೆಮಾರಿ. ಅವರು ಎಲ್ಲಿ ನಿಂತರೂ ಸೋಲುತ್ತಾರೆ. ಮೊದಲು ಹೈಕಮಾಂಡ್‌ ತೀರ್ಮಾನ ಎಂದರು. ಬಳಿಕ ಮನೆಯಲ್ಲಿ ಕೇಳಿ ಹೇಳುತ್ತೇನೆ ಎಂದರು. ಇನ್ನೊಮ್ಮೆ ಎರಡೂ ಕಡೆ ನಿಲ್ಲುತ್ತೇನೆ ಎನ್ನುತ್ತಾರೆ. ಇವರಿಗೆ ಸ್ವತಃ ತಮ್ಮ ಕ್ಷೇತ್ರದ ಬಗ್ಗೆ ಖಚಿತತೆಯಿಲ್ಲ ಎಂದು ವ್ಯಂಗ್ಯವಾಡಿದರು. ಇನ್ನೊಂದೆಡೆ ಡಿಕೆಶಿ ಒಂದು ವ್ಯಕ್ತಿಗೆ ಒಂದೇ ಕಡೆ ಟಿಕೆಟ್‌ ಎಂದು ಹೇಳಿದ್ದಾರೆ ಎಂದು ಈಶ್ವರಪ್ಪ ಟೀಕಿಸಿದರು.

ಸಿದ್ದರಾಮಯ್ಯ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಿ ಸಮಾಜ ಒಡೆದವರು. ದಲಿತ ನಾಯಕರಾದ ಮುನಿಯಪ್ಪ, ಪರಮೇಶ್ವರ್‌ ಅಂತವರನ್ನು ಸೋಲಿಸಿದ್ದರು. ದೇವೇಗೌಡರ ಪಕ್ಷಕ್ಕೆ ದ್ರೋಹ ಬಗೆದಿದ್ದರು. ಹಾಗಾಗಿ ದಲಿತರು, ಒಕ್ಕಲಿಗರು ಎಲ್ಲ ಪಕ್ಷದವರೂ ಅವರನ್ನು ಸೋಲಿಸಲು ಕಾಯುತ್ತಿದ್ದಾರೆ. ಅವರಿಗೆ ಉಳಿದಿರುವುದು ಮುಸಲ್ಮಾನರು ಮಾತ್ರ. ಅವರನ್ನು ನಂಬಿಕೊಂಡು ಇವರು ಚುನಾವಣೆಗೆ ನಿಲ್ಲಲು ಕ್ಷೇತ್ರ ಹುಡುಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್‌ ಮಾತನಾಡಿ, ಬೂತ್‌ ವಿಜಯ ಅಭಿಯಾನ, ವಿಜಯಸಂಕಲ್ಪ, ಅಭಿಯಾನ, ವಿಜಯ ಸಂಕಲ್ಪ ರಥಯಾತ್ರೆಯನ್ನು ಪಕ್ಷ ಯಶಸ್ವಿಯಾಗಿ ನಡೆಸಿದೆ. ಕೇಂದ್ರ ಸಚಿವರು ಪಕ್ಷದ ವಿಜಯ ಸಂಕಲ್ಪ ರಥಯಾತ್ರೆಯನ್ನು ಶಿವಮೊಗ್ಗದಲ್ಲಿ ನೋಡಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬೇರೆ ಊರಿನಲ್ಲಿರುವ ಮತದಾರರನ್ನು ಸಂಪರ್ಕಿಸುವುದು, ಮನೆ ಮನೆಗೆ ತೆರಳಿ ಸಂಪರ್ಕ ಮಾಡುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಲಿದ್ದಾರೆ ಎಂದರು.

ಪಕ್ಷಕ್ಕೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಶಿವಮೊಗ್ಗ ಮಹಾನಗರ ಪಾಲಿಕೆಯ ಮಾಜಿ ಮೇಯರ್‌ ಏಳುಮಲೈ ಹಾಗೂ ಪಾಲಿಕೆ ಮಾಜಿ ಸದಸ್ಯೆ ಗೌರಿ ಶ್ರೀನಾಥ್‌ ಹಾಗೂ ಕಾಂಗ್ರೆಸ್‌ನ ಕಾರ್ಯದರ್ಶಿ ಲಿಂಗರಾಜು, ಮಣಿಕಂಠ, ಕುಮಾರ್‌ ಇನ್ನಿತರರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸಿದ್ರಾಮಣ್ಣ, ಜ್ಞಾನೇಶ್ವರ್‌, ಡಾ.ಧನಂಜಯ ಸರ್ಜಿ, ಕೆ.ಈ. ಕಾಂತೇಶ್‌, ಜಗದೀಶ್‌, ಮೋಹನ್‌ ರೆಡ್ಡಿ, ಶಿವರಾಜ್‌, ನಾಗರಾಜ್‌, ಅಣ್ಣಪ್ಪ, ಬಾಲು, ಸಂತೋಷ್‌ ಬಳ್ಳೇಕೆರೆ ಇದ್ದರು.

‘ಕ್ರೀಡಾ​ಸ್ಫೂ​ರ್ತಿ​ಯಿಂದ ಸ್ಪರ್ಧೆ ಮಾಡೋ​ಣ​’

ರಾಜ್ಯದ 224 ಕ್ಷೇತ್ರದ ಕಾರ್ಯರ್ತರು ಸೂಚಿಸಿದ ಅಭ್ಯರ್ಥಿಗಳನ್ನೇ ಕೇಂದ್ರದ ನಾಯಕರು ಆಯ್ಕೆ ಮಾಡುತ್ತಾರೆ. ಟಿಕೆಟ್‌ ಸಿಕ್ಕಿಲ್ಲ ಎಂದು ಬೇರೆ ಪಕ್ಷಕ್ಕೆ ಹೋಗುವವರು ನಿಜವಾದ ಬಿಜೆಪಿ ಕಾರ್ಯಕರ್ತರೇ ಅಲ್ಲ. ಹೀಗಿರುವಾಗ ಆಯನೂರು ಮಂಜುನಾಥ್‌ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.

ರಾತ್ರಿ ಹೃದಯಾಘಾತಕ್ಕೆ ತಂದೆ ಸಾವು: 700 ಕಿಮೀ ಕ್ರಮಿಸಿ ಅಂತಿಮ ದರ್ಶನ ಪಡೆದ ಮಗಳು ಬೆಳಗ್ಗೆ ಪರೀಕ್ಷೆಗೆ ಹಾಜರು!

ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಪಕ್ಷ ಅವಕಾಶ ಕೊಟ್ಟರೆ ಕ್ರೀಡಾ ಮನೋಭಾವದಿಂದ ಚುನಾವಣೆ ಎದುರಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಆಯನೂರು ವಿಚಾರವಾಗಿ ಪತ್ರಕರ್ತರು ಕೇಳಿದ ಎಲ್ಲ ಪ್ರಶ್ನೆಗೂ ಕೂಲ್‌ ಆಗಿಯೇ ಉತ್ತರಿಸಿದ ಈಶ್ವರಪ್ಪ ಅವರು, ಈ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ, ಕ್ರೀಡಾ ಸ್ಫೂರ್ತಿಯಿಂದ ಸ್ಪರ್ಧೆ ಮಾಡೋಣ. ಚುನಾವಣೆ ಬಳಿಕ ನಾವೆಲ್ಲ ಇಲ್ಲಿಯೇ ಇರುವವರಲ್ಲವೇ ಎಂದರು.