Asianet Suvarna News Asianet Suvarna News

ಸ್ವಾತಂತ್ರ್ಯದ 100 ವರ್ಷಕ್ಕೆ ವಿಕಸಿತ ಭಾರತ: ಆರ್‌.ಅಶೋಕ್‌ ವಿಶೇಷ ಲೇಖನ

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ, ಯೋಜನೆಗಳು ರೂಪುಗೊಳ್ಳುವ ಜೊತೆಗೆ ಅದರ ಅನುಷ್ಠಾನದ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು ಎಂಬ ಮಾತು ಹಲವಾರು ದಶಕಗಳಿಂದ ಕೇಳಿಬರುತ್ತಲೇ ಇದೆ. ಆದರೆ ಇದರ ಕುರಿತು ಮಹಾ ಆಂದೋಲನದ ರೀತಿಯಲ್ಲಿ ಎಂದೂ ಕಾರ್ಯಕ್ರಮ ನಡೆದಿರಲಿಲ್ಲ.
 

BJP Opposition Leader R Ashok Special Article For Indias progress towards 100 years of independence gvd
Author
First Published Dec 23, 2023, 8:39 AM IST

ಆರ್‌.ಅಶೋಕ್‌, ವಿರೋಧ ಪಕ್ಷದ ನಾಯಕ

ಸೇವೆ, ಉತ್ತಮ ಆಡಳಿತ ಹಾಗೂ ಬಡವರ ಕಲ್ಯಾಣದ ಹಾದಿಯಲ್ಲಿ ಸಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ, ಆ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಆಶಯಗಳನ್ನು ಈಡೇರಿಸಿದೆ. ಕೋವಿಡ್‌ನಂತಹ ದುರಂತವನ್ನು ಎದುರಿಸಿಯೂ ಮೋದಿಯವರು ನವ ಭಾರತವನ್ನು ಕಟ್ಟುವ ಸಂಕಲ್ಪದಿಂದ ಹಿಂದೆ ಸರಿಯದೆ ಅಮೃತ ಕಾಲವನ್ನು ಸೃಷ್ಟಿಸುವ ಹೆಜ್ಜೆಗಳನ್ನು ದೃಢವಾಗಿ ಇರಿಸಿದ್ದಾರೆ. ಅಂತ್ಯೋದಯದ ಪರಿಕಲ್ಪನೆಯಲ್ಲಿ ಬೆಳೆದಿರುವ ಬಿಜೆಪಿ ಹಾಗೂ ಕಾಯಕ ಯೋಗಿಯಾಗಿ ಬೆಳೆದ ಪ್ರಧಾನಿ ನರೇಂದ್ರ ಮೋದಿ, ಬೇರೆ ರಾಜಕಾರಣಿಗಳಂತೆ ಸಮಕಾಲೀನ ದೃಷ್ಟಿಗೆ ಸೀಮಿತವಾಗಿ ಯೋಚಿಸದೆ, ಭವಿಷ್ಯವನ್ನೂ ಲೆಕ್ಕಾಚಾರ ಹಾಕಿ ಈ ದೇಶಕ್ಕೆ ಏನು ಬೇಕು, ಮುಂದೆ ದೇಶ ಹೇಗಿರಬೇಕೆಂಬ ನೀಲನಕ್ಷೆಯನ್ನು ರೂಪಿಸಿದ್ದಾರೆ. ಆ ಆಲೋಚನೆಗಳ ಭಂಡಾರದಿಂದ ಹೊರಬಂದ ಹೊಸ ಬೆಳಕು ಎಂದರೆ - ‘ವಿಕಸಿತ ಭಾರತ ಸಂಕಲ್ಪ ಯಾತ್ರೆʼ.

ಮೇಲ್ನೋಟಕ್ಕೆ ಅಥವಾ ವಿರೋಧ ಪಕ್ಷದವರ ಹಳದಿ ಕಣ್ಣಿನ ಟೀಕೆಗೆ ಇದು ಕೇವಲ ರಾಜಕೀಯ ಯಾತ್ರೆ. ಒಳಹೊಕ್ಕು ನೋಡಿದರೆ ಇದು ಅಂತ್ಯೋದಯದ ಪರಿಕಲ್ಪನೆಯನ್ನು ಕಾಲಮಿತಿಯಲ್ಲಿ ಜಾರಿ ಮಾಡಿರುವ ವಿಸ್ತಾರ ಕ್ರಮ. ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರು ಹೇಳಿದ 15 ಪೈಸೆಯ ವಾಸ್ತವ ಇಂದಿಗೂ ರಾಜಕೀಯ ನಾಯಕರ ಬಾಯಲ್ಲಿ ಅನುರಣಿಸುತ್ತದೆ. ಹೀಗೆ ಹೇಳುವ ಬದಲಿಗೆ ಅಂದೇ ವಿಕಸಿತ ಭಾರತದಂತಹ ಒಂದು ಯಾತ್ರೆಯನ್ನು ಮಾಡಿ ಸರ್ಕಾರದ ಪ್ರತಿ ಯೋಜನೆ ಕಟ್ಟಕಡೆಯ ಫಲಾನುಭವಿಗೆ ತಲುಪುವಂತೆ ಮಾಡಿದ್ದರೆ ಆಡಳಿತ ವ್ಯವಸ್ಥೆ ಹಾಗೂ ಜನರ ಬದುಕು ಎಷ್ಟೋ ಸುಧಾರಿಸುತ್ತಿತ್ತು. 60-70 ವರ್ಷಗಳ ಕಾಲ ವಿವಿಧ ಪಕ್ಷಗಳು ಆಡಳಿತ ನಡೆಸಿದ ನಂತರವೂ, ಯೋಜನೆಗಳು ಜನರಿಗೆ ಮುಟ್ಟಿದೆಯೇ ಎಂದು ಖಾತರಿಪಡಿಸಿಕೊಳ್ಳಲು ಬಿಜೆಪಿಯೇ ಇಂತಹ ಒಂದು ಹೊಸ ಯಾತ್ರೆಯನ್ನು ಹೊರಡಿಸಬೇಕಾಯಿತು.

ಸಿಎಂ ಸಿದ್ದರಾಮಯ್ಯ 7 ಸ್ಟಾರ್ ಹೋಟೆಲ್‌ನಲ್ಲಿ ಮಲಗಿಲ್ಲ: ಸಚಿವ ಚಲುವರಾಯಸ್ವಾಮಿ

ಫಲಾನುಭವಿಗಳನ್ನು ತಲುಪಿದ ಯಾತ್ರೆ: ಆಯುಷ್ಮಾನ್‌ ಭಾರತ್‌, ಉಜ್ವಲ, ಪಿಎಂ ಸುರಕ್ಷಾ ಬಿಮಾ, ಪಿಎಂ ಸ್ವನಿಧಿ ಸೇರಿದಂತೆ ಜನಕಲ್ಯಾಣ ಯೋಜನೆಗಳು ಜನರಿಗೆ ಸರಿಯಾಗಿ ತಲುಪಿದೆಯೇ ಎಂದು ಯಾತ್ರೆಯಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳು, ಬಿಜೆಪಿ ಕಾರ್ಯಕರ್ತರು, ಮುಖಂಡರು ಹಳ್ಳಿಹಳ್ಳಿಗೆ ಹೋಗಿ ಪರಿಶೀಲಿಸುತ್ತಿದ್ದಾರೆ. ಯೋಜನೆಯ ಬಗ್ಗೆ ಮಾಹಿತಿ ನೀಡುವ, ಜಾಗೃತಿ ತರುವ, ತಲುಪದವರಿಗೆ ವ್ಯವಸ್ಥೆ ಮಾಡಿಕೊಟ್ಟು ಕೂಡಲೇ ಅವರನ್ನು ಫಲಾನುಭವಿಯನ್ನಾಗಿಸುವ ಕಾರ್ಯ ಚುರುಕಾಗಿ ಸಾಗಿದೆ. ಒಬ್ಬ ಫಲಾನುಭವಿಯೂ ಯೋಜನೆಗಳಿಂದ ಹೊರಗುಳಿಯಬಾರದು ಎನ್ನುವುದು ಇದರ ಗುರಿ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ, ಯೋಜನೆಗಳು ರೂಪುಗೊಳ್ಳುವ ಜೊತೆಗೆ ಅದರ ಅನುಷ್ಠಾನದ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು ಎಂಬ ಮಾತು ಹಲವಾರು ದಶಕಗಳಿಂದ ಕೇಳಿಬರುತ್ತಲೇ ಇದೆ. ಆದರೆ ಇದರ ಕುರಿತು ಮಹಾ ಆಂದೋಲನದ ರೀತಿಯಲ್ಲಿ ಎಂದೂ ಕಾರ್ಯಕ್ರಮ ನಡೆದಿರಲಿಲ್ಲ. ಅದು ಈಗ ಸಾಕಾರವಾಗಿದೆ. ಚುನಾವಣೆಯ ಸಮಯದಲ್ಲಿ ಗ್ಯಾರಂಟಿ ಕಾರ್ಡುಗಳನ್ನು ಕೈಗಳಿಗೆ ನೀಡಿ, ಓಟುಗಳನ್ನು ಪಡೆದು, ನಂತರ ಅದು ಎಲ್ಲ ಫಲಾನುಭವಿಗೆ ತಲುಪಿದೆಯೇ ಎಂದು ಹಿಂತಿರುಗಿ ನೋಡದ ಮಟ್ಟಿಗೆ ಧಾರ್ಷ್ಟ್ಯ ಹೊಂದಿರುವ ಆಡಳಿತ ವ್ಯವಸ್ಥೆಗಳಿಗೆ ಕೇಂದ್ರದ ಈ ನಡೆ ಮಾದರಿ.

ಕೆಂಪೇಗೌಡರ ಮಾದರಿ:  2047ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ರಾಷ್ಟ್ರವಾಗಿಸಲು ವಿಕಸಿತ ಭಾರತ ಯಾತ್ರೆಯ ಮೂಲಕ ಬುನಾದಿ ಹಾಕಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿರುವ ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರು, ಬೆಂಗಳೂರು ಮುಂದೆ ಹೀಗೆ ವಿಕಾಸವಾಗಲಿದೆ ಹಾಗೂ ಅದಕ್ಕಾಗಿ ತಾವು ಬುನಾದಿ ಹಾಕಬೇಕೆಂದು ಸಂಕಲ್ಪಿಸಿದ್ದರು. ಅದಕ್ಕಾಗಿ ಸುಸಜ್ಜಿತವಾಗಿ ನಗರದ ಗಡಿಗಳನ್ನು ಗುರುತಿಸಿ ಪ್ರದೇಶವನ್ನು ನಿಗದಿ ಮಾಡಿಕೊಂಡಿದ್ದರು. ನಂತರ ಎಲ್ಲ ಜಾತಿ, ಧರ್ಮ, ವೃತ್ತಿಗಳ ಜನರಿಗೆ ಅನುಕೂಲವಾಗುವಂತೆ ಅರಳೇಪೇಟೆ, ಅಕ್ಕಿಪೇಟೆ, ಕುಂಬಾರಪೇಟೆ, ರಾಗಿಪೇಟೆ, ಗಾಣಿಗರಪೇಟೆ, ಗೊಲ್ಲರಪೇಟೆ ಸೇರಿದಂತೆ ಸುಮಾರು 54 ಪೇಟೆಗಳನ್ನು ನಿರ್ಮಿಸಿ ವಾಣಿಜ್ಯ ವಹಿವಾಟಿಗೆ ಚಾಲನೆ ನೀಡಿದರು.

ಜಲಮೂಲವಿಲ್ಲದ ಬೆಂಗಳೂರಿನಲ್ಲಿ ಧರ್ಮಾಂಬುಧಿ, ಕೆಂಪಾಂಬುಧಿ, ಹಲಸೂರು, ಸಂಪಂಗಿ, ಕಾರಂಜಿ ಸೇರಿದಂತೆ ಸುಮಾರು 347 ದೊಡ್ಡ ಕೆರೆಗಳು ಹಾಗೂ 1,200 ಕ್ಕೂ ಅಧಿಕ ಸಣ್ಣ ಕೆರೆಗಳನ್ನು ನಿರ್ಮಿಸಿ ಕೃಷಿ ಹಾಗೂ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸಿದರು. ಜೊತೆಗೆ ದೇವಸ್ಥಾನಗಳ ಅಭಿವೃದ್ಧಿ, ನಗರಕ್ಕೆ ರಕ್ಷಣೆ, ಸುವ್ಯವಸ್ಥಿತ ಆಡಳಿತ ನೀಡಿ ಹೊಸ ಜನಜೀವನವನ್ನು ಕಟ್ಟಿಕೊಟ್ಟರು. ಇವೆಲ್ಲದರ ಪರಿಣಾಮ ಇಂದು ಬೆಂಗಳೂರು ಹಲವು ದೇಶಗಳ, ರಾಜ್ಯಗಳ ಜನರಿಗೆ ಆಶ್ರಯ ಕಲ್ಪಿಸಿದೆ, ಕೈ ತುಂಬ ಸಂಬಳ ನೀಡುವ ಔದ್ಯೋಗಿಕ ಕೇಂದ್ರವಾಗಿದೆ. ಇಂದು ನಾವು ನೋಡುವ ಬೆಂಗಳೂರು 16 ನೇ ಶತಮಾನದಲ್ಲಿ ಪ್ರಜಾಪ್ರಿಯ ದೃಷ್ಟಿ ಹೊಂದಿದ್ದ ಕೆಂಪೇಗೌಡರ ಕೊಡುಗೆ. ಅದೇ ರೀತಿ ಇಂದಿನ ವಿಕಸಿತ ಯಾತ್ರೆ ಮುಂದಿನ ಭವ್ಯವಾದ ನವ ಭಾರತಕ್ಕೆ ಅಡಿಪಾಯವಾಗಲಿದೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣವಾಗಲಿದ್ದಾರೆ.

ಕಳೆದ 9 ವರ್ಷಗಳಲ್ಲಿ ಜನರ ಕಣ್ಣಿನಿಂದ ಸಮಸ್ಯೆಗಳನ್ನು ನೋಡಿರುವ ಪ್ರಧಾನಿ ನರೇಂದ್ರ ಮೋದಿ, ಬದುಕಿನ ಗುಣಮಟ್ಟ ಏರಿಸುವ ಕಾರ್ಯಕ್ಕೆ ಹೊಸತನ ನೀಡಿದ್ದಾರೆ. 28 ಕೋಟಿ ಆಯುಷ್ಮಾನ್‌ ಕಾರ್ಡ್‌ ವಿತರಣೆ, ಜನಧನ ಯೋಜನೆಯಡಿ 51.17 ಕೋಟಿ ಜನರಿಂದ ಹಣ ಠೇವಣಿ, 10.64 ಕೋಟಿ ಮನೆಗಳಿಗೆ ಜಲಜೀವನ್‌ ಕೊಳಾಯಿ ನೀರಿನ ಸಂಪರ್ಕ, 18 ಸಾವಿರ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ, 80 ಕೋಟಿಗೂ ಹೆಚ್ಚು ಜನರಿಗೆ 5 ಕೆ.ಜಿ ಆಹಾರ ಧಾನ್ಯಗಳ ವಿತರಣೆ ಮೊದಲಾದವುಗಳಿಂದಾಗಿ ಭಾರತ ವಿಕಸನದ ಹಂತಕ್ಕೇರಿದೆ. ಇಂತಹ ಯೋಜನೆಗಳಿಂದಾಗಿಯೇ ಐದು ವರ್ಷಗಳಲ್ಲಿ 13.5 ಕೋಟಿ ಜನರು ಬಡತನದ ಕೂಪದಿಂದ ಹೊರಬಂದಿದ್ದಾರೆ. ಈ ಯಾತ್ರೆಯ ಸಮಯದಲ್ಲಿ ದೇಶದಲ್ಲಿ ಪಿಎಂ ಉಜ್ವಲ ಯೋಜನೆಗೆ 3.77 ಲಕ್ಷ ಮಹಿಳೆಯರ ಹೆಸರು ನೋಂದಣಿ, 65 ಸಾವಿರ ಆರೋಗ್ಯ ಶಿಬಿರಗಳ ಮೂಲಕ 1 ಕೋಟಿಗೂ ಹೆಚ್ಚು ಜನರ ಆರೋಗ್ಯ ತಪಾಸಣೆ, 19 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್‌ ಕಾರ್ಡ್‌ ವಿತರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳಿಗೆ ಚುರುಕು ದೊರೆತಿದೆ.

ಜನಸಂದಣಿ ಇರುವೆಡೆ ಎಲ್ಲರೂ ಮಾಸ್ಕ್‌ ಧರಿಸಿ: ಸಚಿವ ದಿನೇಶ್‌ ಗುಂಡೂರಾವ್‌

ಇದು ಅಮೃತ ಕಾಲದ ನಡೆ: ‘ಆಡದೇ ಮಾಡುವವ ರೂಢಿಯೊಳಗುತ್ತಮನುʼ ಎಂಬ ಸರ್ವಜ್ಞ ಕವಿಯ ನುಡಿಯಂತೆ ಪ್ರಧಾನಿ ಮೋದಿಯವರು ವಿಕಸಿತ ಭಾರತವನ್ನು ಕಟ್ಟುವ ಸಂಕಲ್ಪವನ್ನು ಮುಂದಿಟ್ಟು ಭವಿತವ್ಯವನ್ನು ರೂಪಿಸಲು ಎಲ್ಲರನ್ನೂ ಸಜ್ಜುಗೊಳಿಸುತ್ತಿದ್ದಾರೆ. ನುಡಿದಂತೆಯೂ ನಡೆಯದವರು ನಮ್ಮ ನಡುವೆ ಇರುವಾಗ, ವಿಕಸನದ ಅಮೃತ ಕಾಲಕ್ಕೆ ಎಲ್ಲರನ್ನೂ ಕರೆದೊಯ್ಯುವ ಕಾರ್ಯಕ್ಕೆ ಪ್ರಧಾನಿ ಮೋದಿ ಮುಂದಾಗಿರುವುದನ್ನು ರಾಜಕೀಯ ಚರಿತ್ರೆ ಯಾವಾಗಲೂ ನೆನಪಿಡಲಿದೆ.

Follow Us:
Download App:
  • android
  • ios