Asianet Suvarna News Asianet Suvarna News

ಲೋಕಸಭೆ ಚುನಾವಣೆಯಲ್ಲಿ ಎಲ್ಲ 28 ಸೀಟ್‌ ಗೆದ್ದರೆ ಕಾಂಗ್ರೆಸ್‌ ಸರ್ಕಾರ ಇರಲ್ಲ: ಆರ್‌.ಅಶೋಕ್‌

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಸೀಟ್‌ಗಳನ್ನು ಬಿಜೆಪಿ ಗೆದ್ದರೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಒಂದು ತಿಂಗಳೊಳಗೆ ಉರುಳಲಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ. 

BJP Opposition Leader R Ashok Slams On Congress Govt Over Loksabha Election gvd
Author
First Published Feb 1, 2024, 4:21 PM IST

ಮಂಗಳೂರು (ಫೆ.01): ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಸೀಟ್‌ಗಳನ್ನು ಬಿಜೆಪಿ ಗೆದ್ದರೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಒಂದು ತಿಂಗಳೊಳಗೆ ಉರುಳಲಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ. ಮಂಗಳೂರಿನಲ್ಲಿ ದ.ಕ. ಬಿಜೆಪಿ ನೂತನ ಅಧ್ಯಕ್ಷ ಸತೀಶ್‌ ಕುಂಪಲ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಹುಲ್‌ ಗಾಂಧಿ ಕಾಲಿಟ್ಟ ಕಡೆಯಲ್ಲೆಲ್ಲ ಕಾಂಗ್ರೆಸ್‌ ಸೋತಿದೆ, ಮುಂದೆಯೂ ಸೋಲಲಿದೆ. ಪ್ರಸ್ತುತ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಪೂರಕ ವಾತಾವರಣ ಇದೆ. ಎಲ್ಲ 28 ಕ್ಷೇತ್ರಗಳನ್ನು ಬಿಜೆಪಿ ಗೆದ್ದರೆ ಕಾಂಗ್ರೆಸ್‌ ಶಾಸಕರು ನಾಚಿಕೆಯಿಂದ ಆ ದರಿದ್ರ ಪಕ್ಷ ಬಿಟ್ಟು ಹೋಗಲಿದ್ದಾರೆ, ಒಂದು ತಿಂಗಳೂ ಕೂಡ ರಾಜ್ಯ ಸರ್ಕಾರ ಉಳಿಯಲ್ಲ ಎಂದರು.

ರಾಷ್ಟ್ರ ಧ್ವಜಕ್ಕೆ ಕಾಂಗ್ರೆಸ್ ಅವಮಾನ: ರಾಜ್ಯ ಕಾಂಗ್ರೆಸ್‌ ಸರ್ಕಾರ ದುರಾಡಳಿತ ನಡೆಸುತ್ತಿದೆ. ಮಂಡ್ಯದಲ್ಲಿ ಧ್ವಜಸ್ತಂಭ ನಿರ್ಮಾಣ ಮಾಡಲು 2 ತಿಂಗಳ ಹಿಂದೆ ಗ್ರಾಪಂನ 24ರಲ್ಲಿ 20 ಜನರ ಬಹುಮತದ ನಿರ್ಧಾರ ಮಾಡಲಾಗಿತ್ತು. ಜನರಿಂದ 6 ಲಕ್ಷ ರು‌. ಸಂಗ್ರಹ ಮಾಡಿ ನಂತರ ಧ್ವಜಸ್ತಂಭ ಕಟ್ಟಿ ಹನುಮಾನ್‌ ಧ್ವಜ ಹಾರಿಸಿದ್ದಾರೆ. ಅದು ಸರ್ಕಾರದ ಧ್ವಜಸ್ತಂಭ ಅಲ್ಲ, ಗ್ರಾಮದ ಜನರೇ ಹಾಕಿದ್ದು. ಸ್ವಾತಂತ್ರ್ಯ, ಗಣರಾಜ್ಯೋತ್ಸವ ದಿನ ಅಲ್ಲಿ ರಾಷ್ಟ್ರ ಧ್ವಜ ಹಾರಿಸ್ತಾರೆ, ಉಳಿದ ದಿನ ಹನುಮ ಧ್ವಜ ಹಾರಿಸ್ತಾರೆ. ರಾಷ್ಟ್ರ ಧ್ವಜ ಹಾರಿಸಲು ನಿಯಮಗಳಿವೆ. ಆದರೆ ಕಾಂಗ್ರೆಸ್‌ನವರು ಹನುಮಾ ಧ್ವಜ ತೆಗೆದು ತರಾತುರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರ್‌. ಅಶೋಕ್‌ ಆರೋಪಿಸಿದರು.

ರೇಣುಕಾಚಾರ್ಯ ಸೇರಿ ಮಾಜಿ ಸಚಿವರ ಟೀಂ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ!

ಸಿದ್ದು ಹೃದಯದಲ್ಲಿ ಟಿಪ್ಪು: ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹೆಸರಿನಲ್ಲೇ ರಾಮ ಇದೆ ಎನ್ನುತ್ತಾರೆ. ವೀರಪ್ಪನ್ ಹೆಸರಲ್ಲಿ ವೀರ ಇದೆ, ಅವನೇನು ವೀರ ಕೆಲಸ ಮಾಡಿದ್ದಾನಾ? ಸಿದ್ದರಾಮಯ್ಯ ಅವರ ಹೆಸರಲ್ಲಿ ರಾಮ ಇದೆ. ಆದರೆ ಅವರ ಹೃದಯ ಮಾತ್ರ ಟಿಪ್ಪು ಟಿಪ್ಪು ಎನ್ನುತ್ತಿದೆ ಎಂದು ಲೇವಡಿ ಮಾಡಿದ ಅವರು, ಕೋಮುವಾದ ಅಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ಕೋಮುವಾದ ಎಂದು ಟೀಕಿಸಿದರು. ಇದೀಗ ರಾಮ ಮಂದಿರ ಉದ್ಘಾಟನೆ ಮೂಲಕ ಇಡೀ ದೇಶ ರಾಮಮಯವಾಗಿದೆ. ಮೋದಿ ಮತ್ತೆ ಪ್ರಧಾನಿ ಆಗಬೇಕಂತ ಇಡೀ ದೇಶ ಮಾತನಾಡ್ತಿದೆ. ಅದು ಸಾಕಾರವಾಗಲಿದೆ ಎಂದರು.

Follow Us:
Download App:
  • android
  • ios