Asianet Suvarna News Asianet Suvarna News

ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸಿದೆ: ಆರ್.ಅಶೋಕ್‌

ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸಿದ್ದಲ್ಲದೆ ಬಿಜೆಪಿಯ ಯೋಜನೆಗಳನ್ನು ತಮ್ಮದೇ ಯೋಜನೆಯಾಗಿ ಬಿಂಬಿಸಿಕೊಂಡಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್‌ ಟೀಕಿಸಿದ್ದಾರೆ. 

BJP Opposition Leader R Ashok Slams On Congress Government gvd
Author
First Published Feb 15, 2024, 2:30 AM IST

ಬೆಂಗಳೂರು (ಫೆ.15): ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸಿದ್ದಲ್ಲದೆ ಬಿಜೆಪಿಯ ಯೋಜನೆಗಳನ್ನು ತಮ್ಮದೇ ಯೋಜನೆಯಾಗಿ ಬಿಂಬಿಸಿಕೊಂಡಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್‌ ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಭಾಷಣದ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರ ತಂದ ಯೋಜನೆಗಳನ್ನು, ಕೇಂದ್ರ ಸರ್ಕಾರದ ಯೋಜನೆಗಳನ್ನು ತಮ್ಮದೇ ಯೋಜನೆ ಎಂಬಂತೆ ಬಿಂಬಿಸಿಕೊಂಡಿದೆ. ಬಿಜೆಪಿ ಸರ್ಕಾರ ಪರಿಹಾರವನ್ನು ಒಂದೇ ಸಲಕ್ಕೆ ರೈತರ ಖಾತೆಗೆ ಹಾಕಿತ್ತು.  ಈ ಸರ್ಕಾರ ಕಂತು ಕಂತಾಗಿ ನೀಡುವುದು ತಪ್ಪು. ನಾವು 25 ಸಾವಿರ ರು. ಪರಿಹಾರ ಕೇಳಿದ್ದರೆ, ಆ ವಿಷಯವನ್ನು ಪ್ರಸ್ತಾಪಿಸಿಯೇ ಇಲ್ಲ. 

ಕೇವಲ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲಾಗಿದೆ ಎಂದು ದೂರಿದರು. ಮಕ್ಕಳಿಗೆ ಚಿಕ್ಕಿ ಮಿಠಾಯಿ ಕೊಟ್ಟು ಅವರ ಕೈಯಲ್ಲೇ ಶೌಚಾಲಯ ತೊಳೆಸಲಾಗುತ್ತಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆಗಿದ್ದು. ಮೆಟ್ರೊ ರೈಲು ಯೋಜನೆ ಕೇಂದ್ರ ಸರ್ಕಾರದಿಂದ ಆಗಿದೆ. ಜಲಜೀವನ್ ಮಿಷನ್ ಕೂಡ ಕೇಂದ್ರದ ಕೊಡುಗೆ. ಆದರೂ ಅವೆಲ್ಲ ತಮ್ಮದೇ ಎಂದು ಹೇಳಿಕೊಂಡಿದ್ದಾರೆ. ಹಿಂದೂ ದ್ವೇಷ ಹೆಚ್ಚಿದ್ದು, ಭಯೋತ್ಪಾದನಾ ಚಟುವಟಿಕೆ ಅತಿಯಾಗಿದೆ. ಆದರೂ ಸರ್ವ ಜನಾಂಗದ ಶಾಂತಿಯ ತೋಟ ಎಂದಿದ್ದಾರೆ. ಸರ್ಕಾರ ಕಾನೂನು ಸುವ್ಯವಸ್ಥೆಯನ್ನೇ ಕಾಪಾಡಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಅಭದ್ರತೆ ಕಾಡಿದಾಗಷ್ಟೇ ಬಿಜೆಪಿಗೆ ದೇಶಪ್ರೇಮ: ಆಯನೂರು ಮಂಜುನಾಥ್

ಬರಗಾಲವಿದ್ದರೂ ಕಳೆದ ವರ್ಷಕ್ಕಿಂತ ಆತ್ಮಹತ್ಯೆ ಕಡಿಮೆಯಾಗಿದೆ ಎಂದು ಹೋಲಿಸಿಕೊಂಡಿದ್ದಾರೆ. ಇವರದ್ದೇ ಸರ್ಕಾರದ ಸಚಿವ ಶಿವಾನಂದ ಪಾಟೀಲ್‌ ಅವರು ಪರಿಹಾರ ಪಡೆಯಲೆಂದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಕೀಳಾಗಿ ಮಾತಾಡಿದ್ದರು. ಆತ್ಮಹತ್ಯೆ ಹೆಚ್ಚಿದ್ದರೂ ಅದನ್ನು ಮುಚ್ಚಿಟ್ಟು ಸುಳ್ಳು ಹೇಳಿದ್ದಾರೆ. 2 ಸಾವಿರ ರು. ಪರಿಹಾರ ಎಂದು ಕಾಟಾಚಾರಕ್ಕೆ ಘೋಷಣೆ ಮಾಡಿ, ನಂತರ ಎಲ್ಲರಿಗೂ ಪರಿಹಾರ ನೀಡುವ ಕೆಲಸ ಮಾಡಿಲ್ಲ. ಫ್ರೂಟ್ಸ್ ತಂತ್ರಾಂಶದಲ್ಲಿ ಇನ್ನೂ ನೋಂದಣಿ ಸಮಸ್ಯೆ ಇದೆ. ಇಷ್ಟಿದ್ದರೂ ರೈತರಿಗೆ ಪರಿಹಾರ ನೀಡಿದ್ದೇವೆ ಎಂಬುದಾಗಿ ನಾಚಿಕೆ ಇಲ್ಲದೆ ಹೇಳಿಕೊಂಡಿದ್ದಾರೆ ಎಂದು ಅಶೋಕ್‌ ಹರಿಹಾಯ್ದರು.

Follow Us:
Download App:
  • android
  • ios