Asianet Suvarna News Asianet Suvarna News

ಕುಮಾರಸ್ವಾಮಿಗೆ ನಾಯಕತ್ವ ನೀಡುವ ದಾರಿದ್ರ್ಯ ಬಿಜೆಪಿಗಿಲ್ಲ: ಮಾಜಿ ಸಚಿವ ಸುನಿಲ್‌ ಕುಮಾರ್‌

ಆಡಳಿತ ವಿರೋಧಿ ಅಲೆ, ಕಾಂಗ್ರೆಸ್‌ ಪಕ್ಷದ ಆಧಾರರಹಿತ ಆರೋಪಗಳು ಜನರನ್ನು ತಲುಪಿವೆ. ಚುನಾವಣೆಗೆ ಆರು ತಿಂಗಳು ಮುಂಚಿನಿಂದ ಸುಳ್ಳು ಆರೋಪಗಳನ್ನು ಮಾಡಿದ್ದು ಜನರ ಮೇಲೆ ಪರಿಣಾಮ ಬೀರಲಿಕ್ಕಿಲ್ಲ ಎಂದುಕೊಂಡಿದ್ದು ಸುಳ್ಳಾಯಿತು. ಮತದಾರರ ಮನಸ್ಸು ನಮಗೆ ಅರ್ಥವಾಗಲಿಲ್ಲ. ಮತದಾರ ಬಾಯಿಯೇ ಬಿಡಲಿಲ್ಲ. ಇದನ್ನು ಅಂದಾಜು ಮಾಡುವಲ್ಲಿ ನಾವು ಹಿಂದೆ ಬಿದ್ದೆವು: ಮಾಜಿ ಸಚಿವ ವಿ.ಸುನಿಲ್‌ ಕುಮಾರ್‌ 

BJP No Way to Give Leadership to HD Kumaraswamy Says Former Minister V Sunil Kumar grg
Author
First Published Jul 27, 2023, 12:13 PM IST

ವಿಜಯ್‌ ಮಲಗಿಹಾಳ

ಬೆಂಗಳೂರು(ಜು.27):  ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಉಂಟಾದ ಬಳಿಕ ಮಂಕಾಗಿದ್ದ ಬಿಜೆಪಿ ಇನ್ನೂ ಚೇತರಿಸಿಕೊಂಡಿಲ್ಲ. ಒಂದೆಡೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾಗಿಲ್ಲ. ಮತ್ತೊಂದೆಡೆ ರಾಜ್ಯಾಧ್ಯಕ್ಷರ ಅವಧಿಯೂ ಮುಗಿದಿದೆ. ಎರಡೂ ಹುದ್ದೆಗೆ ಹೊಸಬರ ಆಯ್ಕೆ ಆಗಬೇಕಾಗಿದೆ. ವಿಧಾನಮಂಡಲದ ಉಭಯ ಸದನಗಳಲ್ಲೂ ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿಗೆ ನಾಯಕರೇ ಇಲ್ಲದಂತಾಗಿದೆ. ದಾಖಲೆ ಎಂಬಂತೆ, ಮೂರು ವಾರಗಳ ಕಾಲ ನಡೆದ ಬಜೆಟ್‌ ಅಧಿವೇಶನ ಪ್ರತಿಪಕ್ಷದ ನಾಯಕರು ಇಲ್ಲದೆಯೇ ಮುಗಿದಿದೆ. ಆದರೂ ನೇಮಕದ ಸುಳಿವಿಲ್ಲ. ಚುನಾವಣೆ ಫಲಿತಾಂಶದ ಬಳಿಕ ಪಕ್ಷದ ರಾಷ್ಟ್ರೀಯ ನಾಯಕರು ಕರ್ನಾಟಕದತ್ತ ದೃಷ್ಟಿಯನ್ನೂ ಹಾಯಿಸದೆ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ಈಗಿರುವ ನಾಯಕರ ಬಗ್ಗೆ ವರಿಷ್ಠರಿಗೆ ವಿಶ್ವಾಸವೂ ಕಂಡು ಬರುತ್ತಿಲ್ಲವೇನೋ ಎಂಬಂತೆ ಮೌನ ವಹಿಸಿದ್ದಾರೆ. ಈ ಎಲ್ಲದರ ನಡುವೆ ಶಾಸಕಾಂಗ ಪಕ್ಷದ ನಾಯಕ ಹಾಗೂ ರಾಜ್ಯಾಧ್ಯಕ್ಷ ಹುದ್ದೆಗಳ ರೇಸ್‌ನಲ್ಲಿ ಹೆಸರು ಕೇಳಿಬರುತ್ತಿರುವ ಮಾಜಿ ಸಚಿವ ವಿ.ಸುನಿಲ್‌ ಕುಮಾರ್‌ ಅವರು ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿದ್ದು ಹೀಗೆ..

* ರಾಜ್ಯ ಬಿಜೆಪಿಯಲ್ಲಿ ಏನಾಗುತ್ತಿದೆ? ಎಲ್ಲವೂ ಅಯೋಮಯವಾದಂತೆ ಕಂಡು ಬರುತ್ತಿದೆಯಲ್ಲ?

-ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಳಂಬವಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಪಕ್ಷದ ರಾಜ್ಯ ನಾಯಕರು ವರಿಷ್ಠರನ್ನು ಸಂಪರ್ಕಿಸಿ ಆದಷ್ಟು ಶೀಘ್ರ ಆಯ್ಕೆ ಪ್ರಕ್ರಿಯೆ ಕೈಗೊಳ್ಳಬೇಕು ಎಂಬ ಮನವಿಯನ್ನು ಮಾಡಿದ್ದಾರೆ. ಅದೇ ರೀತಿ ರಾಜ್ಯಾಧ್ಯಕ್ಷರಿಂದ ಬೂತ್‌ ಅಧ್ಯಕ್ಷರವರೆಗಿನ ಅವಧಿ ಈಗಾಗಲೇ ಮುಗಿದಿರುವುದರಿಂದ ಈ ಆಯ್ಕೆ ಕೂಡ ಶೀಘ್ರ ಆರಂಭವಾಗಬಹುದು. ಕೇಂದ್ರದ ನಾಯಕರ ಮಾರ್ಗದರ್ಶನ ನಿರೀಕ್ಷೆ ಮಾಡುತ್ತಿದ್ದೇವೆ. ಈ ಎರಡೂ ಪ್ರಮುಖ ಹುದ್ದೆಗಳ ನೇಮಕ ಆಗಿಲ್ಲ ಅಥವಾ ಪಕ್ಷದ ಸಂಘಟನೆ ಪುನಾರಚನೆ ಆಗಿಲ್ಲ ಎಂಬ ಕಾರಣಕ್ಕಾಗಿ ನಮ್ಮ ಪಕ್ಷದ ಚಟುವಟಿಕೆಗಳೇನೂ ನಿಂತಿಲ್ಲ. ವಿಧಾನಸಭೆಯಲ್ಲೂ ನಾವೆಲ್ಲ ಶಾಸಕರು ಪರಿಣಾಮಕಾರಿಯಾಗಿಯೇ ಕೆಲಸ ಮಾಡಿದ್ದೇವೆ. ಪಕ್ಷದ ವತಿಯಿಂದಲೂ ಗ್ರಾಮ ಮಟ್ಟದವರೆಗೆ ಸಂಘಟನೆಯ ಕೆಲಸಗಳನ್ನು ಕೊಂಡೊಯ್ಯುತ್ತಿದ್ದೇವೆ.

ಸರ್ಕಾರ ಉರುಳಿಸಲು ಎಚ್‌ಡಿಕೆ ಪಿತೂರಿ: ಯಾವ ಶಾಸಕರಿಗೆ ಗಾಳ ಅಂತ ಗೊತ್ತಿದೆ -ಡಿಕೆಶಿ

* ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ರಾಜ್ಯ ನಾಯಕರ ಮೇಲೆ ಮುನಿಸಿಕೊಂಡಿದ್ದಾರಂತೆ?

-ಮುನಿಸಿಕೊಂಡಿದ್ದಾರೆ ಎಂಬುದೇನೂ ಇಲ್ಲ. ಇದು ನಮಗೆಲ್ಲರಿಗೂ ಅನಿರೀಕ್ಷಿತವಾದ ಫಲಿತಾಂಶ. ಇಷ್ಟೊಂದು ಹಿನ್ನಡೆ ಆಗಬಹುದು ಎಂಬ ನಿರೀಕ್ಷೆ ನಮಗೆ ಇರಲಿಲ್ಲ. ಮತದಾರರು ಕಾಂಗ್ರೆಸ್‌ ಪರವಾಗಿ ಧ್ರುವೀಕರಣದ ಮತದಾನ ಮಾಡಿದ್ದಾರೆ. ಜೆಡಿಎಸ್‌ ಹೆಚ್ಚು ಮತಗಳನ್ನು ಗಳಿಸಲಿಲ್ಲ. ಇದು ನಮಗೆ ನಷ್ಟಉಂಟು ಮಾಡಿದೆ. ಮತ ಗಳಿಕೆ ಸಾಂಪ್ರದಾಯಿಕವಾಗಿ ಎಂಬಂತೆ ಮೂರೂ ಪಕ್ಷಗಳಿಗೆ ಆಗಿದ್ದರೆ ಬಹುಶಃ ನಾವು 90 ಅಥವಾ 100 ಸ್ಥಾನಗಳ ಹತ್ತಿರ ಇರುತ್ತಿದ್ದೆವು. ಒಟ್ಟಾರೆ ಮತ ಗಳಿಕೆ ಪ್ರಮಾಣ ನೋಡಿದರೆ ನಾವು ಕೇವಲ ಎಂಟು ಲಕ್ಷ ಹಿಂದೆ ಇದ್ದೇವೆ. ಆದರೆ, ಇದು 50ರಿಂದ 60 ಸ್ಥಾನಗಳ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ನಾವು ಇದೇ ಮೊದಲ ಬಾರಿಗೆ ನೋಡಿದ್ದೇವೆ.

* ಅತಿಯಾದ ವಿಶ್ವಾಸವೇ ಪಕ್ಷದ ಸೋಲಿಗೆ ಕಾರಣವಾಯಿತೇ?

-ಆಡಳಿತ ವಿರೋಧಿ ಅಲೆ, ಕಾಂಗ್ರೆಸ್‌ ಪಕ್ಷದ ಆಧಾರರಹಿತ ಆರೋಪಗಳು ಜನರನ್ನು ತಲುಪಿವೆ. ಚುನಾವಣೆಗೆ ಆರು ತಿಂಗಳು ಮುಂಚಿನಿಂದ ಸುಳ್ಳು ಆರೋಪಗಳನ್ನು ಮಾಡಿದ್ದು ಜನರ ಮೇಲೆ ಪರಿಣಾಮ ಬೀರಲಿಕ್ಕಿಲ್ಲ ಎಂದುಕೊಂಡಿದ್ದು ಸುಳ್ಳಾಯಿತು. ಮತದಾರರ ಮನಸ್ಸು ನಮಗೆ ಅರ್ಥವಾಗಲಿಲ್ಲ. ಮತದಾರ ಬಾಯಿಯೇ ಬಿಡಲಿಲ್ಲ. ಇದನ್ನು ಅಂದಾಜು ಮಾಡುವಲ್ಲಿ ನಾವು ಹಿಂದೆ ಬಿದ್ದೆವು.

* ವಿಧಾನಸಭಾ ಚುನಾವಣೆ ಟಿಕೆಟ್‌ ಹಂಚಿಕೆಯಲ್ಲಿ ಹೊಸ ಪ್ರಯೋಗ ಕೈಕೊಟ್ಟಿದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಹೊಸ ಪ್ರಯೋಗಕ್ಕೆ ಕತ್ತರಿ ಬೀಳಬಹುದೇ?

-ನೋಡಿ, ಬಿಜೆಪಿ ಪ್ರತಿ ಚುನಾವಣೆಯಲ್ಲೂ ಹೊಸ ಪ್ರಯೋಗಗಳನ್ನು ಮಾಡುತ್ತದೆ. ಪ್ರಯೋಗ ನಿರಂತರ. ಸಣ್ಣ ಪುಟ್ಟಹಿನ್ನಡೆ ಆಗಿದೆ ಎಂಬ ಕಾರಣಕ್ಕಾಗಿ ಪ್ರಯೋಗ ಕೈಬಿಡುವುದಿಲ್ಲ. ಹೊಸಬರಿಗೆ ಅವಕಾಶ ಕೊಡುತ್ತದೆ. 2014ರ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್‌ ಸಿಂಹ ಅವರಿಗೆ ಅವಕಾಶ ನೀಡಲಾಯಿತು. ಬಳಿಕ 2019ರಲ್ಲಿ ತೇಜಸ್ವಿ ಸೂರ್ಯ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳಲಾಯಿತು. ಹೀಗಾಗಿ, ಹೊಸ ಪ್ರಯೋಗದಿಂದಲೇ ಸೋಲಾಯಿತು ಅಥವಾ ಗೆಲುವಾಯಿತು ಎಂಬುದಲ್ಲ. ಟಿಕೆಟ್‌ ಹಂಚಿಕೆ ವೇಳೆ ಹೆಚ್ಚು ಚರ್ಚೆ ನಡೆಯಬೇಕಾಗಿತ್ತು. ಅದು ಆಗಲಿಲ್ಲ ಎಂಬುದು ನನ್ನ ಭಾವನೆ.

* ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕರಿಲ್ಲದೆಯೇ ಪ್ರಮುಖವಾದ ಬಜೆಟ್‌ ಅಧಿವೇಶನವನ್ನು ಎದುರಿಸುವಂಥ ಪರಿಸ್ಥಿತಿ ಬಿಜೆಪಿಗೆ ಬಂತಲ್ಲ?

-ಇದು ಸರಿಯಲ್ಲ. ಪ್ರತಿಪಕ್ಷದ ನಾಯಕರು ಇರಬೇಕಾಗಿತ್ತು. ಆದರೆ, ಇದಕ್ಕೊಂದು ಸಕಾರಾತ್ಮಕ ಕಾರಣವಿರಬಹುದು. ಒಂದು ಒಳ್ಳೆಯ ಉದ್ದೇಶ ಇರಬಹುದು ಅಂತ ಅನಿಸುತ್ತದೆ. ಪ್ರತಿಪಕ್ಷದ ನಾಯಕರು ಇಲ್ಲದಿದ್ದರೂ ಪಕ್ಷದ ಎಲ್ಲ ಶಾಸಕರೂ ಸಕ್ರಿಯವಾಗಿಯೇ ಪಾಲ್ಗೊಂಡು ಸರ್ಕಾರದ ಲೋಪದೋಷಗಳನ್ನು ಎತ್ತಿ ತೋರಿಸುವ ಕೆಲಸ ಮಾಡಿದೆವು.

* ಫಲಿತಾಂಶ ಹೊರಬಿದ್ದು ಎರಡೂವರೆ ತಿಂಗಳಾಯಿತು. ಈವರೆಗೂ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಖಾಲಿ ಉಳಿದಿದ್ದಕ್ಕೆ ಆಡಳಿತಾರೂಢ ಕಾಂಗ್ರೆಸ್‌ ಎದುರಿಗೆ ಬಿಜೆಪಿ ಶಾಸಕರಿಗೆ ಮುಜುಗರ ಉಂಟಾಗುತ್ತಿಲ್ಲವೇ?
-ಕಾಂಗೆಸ್‌ನವರು ಗಾಂಧಿಯೇತರ ಕುಟುಂಬದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು 75 ವರ್ಷ ತೆಗೆದುಕೊಂಡರು. ಅದಕ್ಕೆ ಅವರಿಗೆ ಮುಜುಗರವಾಗಲಿಲ್ಲವೇ? ಆ ಪರಿಸ್ಥಿತಿ ನಮ್ಮಲ್ಲಿ ಇಲ್ಲವಲ್ಲ.

* ಶಾಸಕಾಂಗ ಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷ, ಎರಡೂ ಹುದ್ದೆಗಳಿಗೆ ನಿಮ್ಮ ಹೆಸರೂ ಪ್ರಮುಖವಾಗಿ ಕೇಳಿಬರುತ್ತಿದೆ?

-ಪಕ್ಷ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇನೆಯೇ ಹೊರತು ಇದೇ ಬೇಕು ಎಂಬ ಜಾಯಮಾನ ನನ್ನದಲ್ಲ. ಯಾವ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ.

*ಈ ಎರಡೂ ಹುದ್ದೆಗಳಿಗೂ ಆಯ್ಕೆ ಸಂಬಂಧ ಜಾತಿ ಸಮೀಕರಣದ ಲೆಕ್ಕಾಚಾರ ನಡೆಯುತ್ತಿದೆ ಎಂಬ ಮಾತು ನಿಮ್ಮ ಪಕ್ಷದಿಂದಲೇ ಹೊರಬಿದ್ದಿದೆ?

-ಜಾತಿಯಿಂದ ಮೀರಿ ಆಲೋಚನೆ ಮಾಡಬೇಕು. ಅದನ್ನೇ ಪ್ರಮುಖವಾಗಿ ಪರಿಗಣಿಸಬಾರದು. ಆದರೆ, ಇವತ್ತಿನ ರಾಜಕೀಯ ವಾಸ್ತವದಲ್ಲಿ ಎಲ್ಲ ಪಕ್ಷಗಳೂ ಜಾತಿ ಆಧರಿಸಿಯೇ ನಿರ್ಧಾರ ಮಾಡುತ್ತವೆ. ಅದರಲ್ಲಿ ನಮ್ಮ ಪಕ್ಷವೂ ಸಿಲುಕಿಕೊಂಡಿದೆ. ಅದನ್ನು ಮೀರಿ ಆಲೋಚನೆ ಮಾಡುವಂಥದ್ದು ನಮ್ಮ ಪಕ್ಷಕ್ಕೂ ಬರಬೇಕು, ನಮ್ಮ ಸಮಾಜಕ್ಕೂ ಬರಬೇಕು ಎಂದು ನಾನು ಅಪೇಕ್ಷೆಪಡುತ್ತೇನೆ. ಪಕ್ಷಕ್ಕೆ ಮತ್ತು ಸಾರ್ವಜನಿಕವಾಗಿ ಬದ್ಧತೆ ಇರುವವರನ್ನು, ಸೈದ್ಧಾಂತಿಕವಾಗಿಯೂ ಬದ್ಧತೆ ಇರುವವರನ್ನು ಪರಿಗಣಿಸಬೇಕು. ಕೇವಲ ಜಾತಿಯನ್ನು ಆಧಾರವಾಗಿಟ್ಟುಕೊಂಡು ಆಯ್ಕೆ ಮಾಡುವುದು ಮುಂದಿನ ದಿನಗಳಲ್ಲಿ ವ್ಯವಸ್ಥೆಗೆ ಒಂದು ದೊಡ್ಡ ಅಪಾಯ. ಆ ರೀತಿ ಆಗಬಾರದು.

* ಬಿಜೆಪಿಯಲ್ಲಿ ಮೇಲ್ವರ್ಗದವರಿಗೆ ಹೆಚ್ಚಿನ ಆದ್ಯತೆ ಹೊರತು ಹಿಂದುಳಿದ ವರ್ಗಗಳಿಗೆ ಇಲ್ಲ ಎಂಬುದು ಆಗಾಗ ವ್ಯಕ್ತವಾಗುತ್ತದೆಯಲ್ಲ?

-ಹಾಗೇನೂ ಇಲ್ಲ. ದೇಶದ ಎಲ್ಲ ರಾಜ್ಯಗಳಲ್ಲೂ ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಪ್ರಮುಖ ಹುದ್ದೆಗಳ ಆಯ್ಕೆ ವೇಳೆ ಹಿಂದುಳಿದ ವರ್ಗದವರಿಗೂ ಆದ್ಯತೆ ನೀಡಲಾಗಿದೆ. ಇನ್ನಷ್ಟುಹೆಚ್ಚಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ.
* ಯಡಿಯೂರಪ್ಪ ನಂತರ ರಾಜ್ಯ ಬಿಜೆಪಿಯಲ್ಲಿ ಜನಪ್ರಿಯ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ?

-ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆರು ತಿಂಗಳಲ್ಲಿ, ಒಂದು ವರ್ಷದಲ್ಲಿ ಆಗುತ್ತದೆ.

* ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಳ್ಳಲು ಕಸರತ್ತು ನಡೆಸಿದೆಯಂತೆ?

-ಇದು ಮಾಧ್ಯಮಗಳ ಊಹಾಪೋಹ ಅಷ್ಟೇ. ಬಿಜೆಪಿ ನೇತೃತ್ವದ ಎನ್‌ಡಿಎ ಸಭೆಗೆ ಜೆಡಿಎಸ್‌ ಪಕ್ಷವನ್ನು ಆಹ್ವಾನಿಸಿರಲಿಲ್ಲ. ಅಂಥ ಚರ್ಚೆ ನಮ್ಮ ಪಕ್ಷದಲ್ಲಿ ಇಲ್ಲ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್‌ ಜತೆಗಿನ ಮೈತ್ರಿಯ ಅನಿವಾರ್ಯತೆ ಬಿಜೆಪಿಗೇನೂ ಕಾಣುತ್ತಿಲ್ಲ.

* ಅಧಿವೇಶನ ವೇಳೆ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಸಿಕ್ಕಾಪಟ್ಟೆಹೊಂದಾಣಿಕೆ ಕಂಡು ಬಂದಿತ್ತಲ್ಲ?

-ಆಡಳಿತಾರೂಢ ಪಕ್ಷದ ವಿರುದ್ಧ ಸಂದರ್ಭಾನುಸಾರ ಹೋರಾಟ ಮಾಡಲು ಪ್ರತಿಪಕ್ಷಗಳ ನಡುವೆ ಕೆಲವೊಮ್ಮೆ ವಿಷಯಾಧಾರಿತ ಹೊಂದಾಣಿಕೆ ಇರಬೇಕಾಗುತ್ತದೆ. ಇದು ಹೊಸದೇನಲ್ಲ.
* ದಾಖಲೆ ಮಟ್ಟದ ಸ್ಥಾನಗಳನ್ನು ಪಡೆದು ಅಧಿಕಾರದ ಗದ್ದುಗೆ ಹತ್ತಿರುವ ಆಡಳಿತಾರೂಢ ಕಾಂಗ್ರೆಸ್‌ ವಿರುದ್ಧ ಏಕಾಂಗಿಯಾಗಿ ಹೋರಾಟ ಮಾಡುವುದು ಕಷ್ಟಎಂಬ ಕಾರಣಕ್ಕಾಗಿ ಬಿಜೆಪಿಯು ಜೆಡಿಎಸ್‌ ಜತೆ ಸ್ನೇಹ ಬೆಳೆಸುತ್ತಿದೆಯೇ?

-ಇಲ್ಲ..ಇಲ್ಲ. ಅಂಥದ್ದೇನೂ ಇಲ್ಲ.

* ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ತನ್ನ ಬಲ ವೃದ್ಧಿಸಿಕೊಳ್ಳುವುದು ಪ್ರಯಾಸದ ಕೆಲಸ ಎನಿಸಿದ್ದರಿಂದ ಜೆಡಿಎಸ್‌ ಪಕ್ಷವನ್ನೇ ವಿಲೀನಗೊಳಿಸಿಕೊಳ್ಳುವ ತಂತ್ರವೊಂದನ್ನು ಹೆಣೆಯಲಾಗುತ್ತಿದೆಯಂತೆ?

-ಈ ಬಗ್ಗೆ ಮಾಧ್ಯಮಗಳಲ್ಲಿ ಬಂದಿದೆಯೇ ಹೊರತು ವಾಸ್ತವವಲ್ಲ. ಪಕ್ಷದ ಆಂತರಿಕ ವೇದಿಕೆಗಳಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಆದರೆ, ಎನ್‌ಡಿಎಗೆ ಜೆಡಿಎಸ್‌ ಸೇರಿದಂತೆ ಯಾವುದೇ ಪಕ್ಷ ಬರಲು ಬಿಜೆಪಿ ಮುಕ್ತವಾಗಿದೆ.

* ಯಡಿಯೂರಪ್ಪ ಬಳಿಕ ಬಿಜೆಪಿಯಲ್ಲಿ ಜನಪ್ರಿಯ ನಾಯಕರ ಕೊರತೆ ಕಾಣುತ್ತಿದೆ ಎಂಬ ಕಾರಣಕ್ಕಾಗಿ ಕುಮಾರಸ್ವಾಮಿ ಅವರನ್ನೇ ಕರೆತಂದು ನಾಯಕತ್ವ ನೀಡುವ ಸಾಧ್ಯತೆ ಇದೆಯಂತೆ?

ಹಾಲು, ಆಲ್ಕೋಹಾಲಿನ ದರ ಏರಿಕೆಗೆ ಕುಮಾರಸ್ವಾಮಿ ಕಿಡಿ

-ನಮ್ಮಲ್ಲಿ ಅಷ್ಟೊಂದು ದಾರಿದ್ರ್ಯ ಇಲ್ಲ. ಬಿಜೆಪಿಯಲ್ಲಿ ಖಂಡಿತವಾಗಿಯೂ ನಾಯಕತ್ವ ಇದ್ದೇ ಇದೆ. ಕಾಲಾವಕಾಶ ಬೇಕು. ಒಳ್ಳೆಯ ನಾಯಕತ್ವ ಬೆಳೆಯುತ್ತದೆ.

* ಮುಂದಿನ ಲೋಕಸಭಾ ಚುನಾವಣೆ ಎದುರಿಸಲು ರಾಜ್ಯ ಬಿಜೆಪಿ ಸಿದ್ಧವಾಗಿದೆಯೇ ಅಥವಾ ವಿಧಾನಸಭಾ ಚುನಾವಣೆಯ ಸೋಲಿನ ಜಪವನ್ನೇ ಮುಂದುವರೆಸಿಕೊಂಡು ಕುಳಿತಿದೆಯೇ?

-ವಿಧಾನಸಭಾ ಚುನಾವಣೆಯ ಹಿನ್ನಡೆ ಆಧಾರವಾಗಿಟ್ಟುಕೊಂಡು ಲೋಕಸಭಾ ಚುನಾವಣೆಗೆ ತಂತ್ರಗಾರಿಕೆ ಆರಂಭಿಸಿದ್ದೇವೆ. ಕಳೆದ ಬಾರಿ ಗೆದ್ದಿರುವಷ್ಟುಸ್ಥಾನಗಳನ್ನು ಗೆಲ್ಲಲು ತೊಂದರೆಯಾಗದಂತೆ ಸಿದ್ಧತೆ ಮಾಡುತ್ತಿದ್ದೇವೆ. ನರೇಂದ್ರ ಮೋದಿ ಅವರ ನಾಯಕತ್ವ ಇಲ್ಲದ ಭಾರತವನ್ನು ಯೋಚನೆ ಮಾಡಲೂ ನಮ್ಮಿಂದ ಸಾಧ್ಯವಿಲ್ಲ. ಹೀಗಾಗಿ, ಅದಕ್ಕೆ ಪೂರಕವಾಗಿ ನಾವೆಲ್ಲರೂ ಆರು ತಿಂಗಳ ಕಾಲ ಹಗಲಿರುಳು ದುಡಿಯುತ್ತೇವೆ.

News Hour With HD Kumaraswamy

Follow Us:
Download App:
  • android
  • ios