ಬೆಂಗಳೂರು(ನ.27):  ನಿರೀಕ್ಷಿಸಿದಂತೆ ವಿಧಾನಪರಿಷತ್‌ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕೋರಿ ಬಿಜೆಪಿ ಸದಸ್ಯರು ಮೇಲ್ಮನೆ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.

ಆಯನೂರು ಮಂಜುನಾಥ್‌, ವೈ. ಎ. ನಾರಾಯಣಸ್ವಾಮಿ ಸೇರಿದಂತೆ ಹಲವು ಸದಸ್ಯರು, ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಕೋರಿದ್ದಾರೆ. ಡಿಸೆಂಬರ್‌ 7ರಿಂದ 15ರವರೆಗೆ ನಡೆಯಲಿರುವ ಅಧಿವೇಶನದ ವೇಳೆ ಬಿಜೆಪಿ ಸದಸ್ಯರು ಕೋರಿರುವ ಸೂಚನೆ ಮೇರೆಗೆ ಸಭಾಪತಿಗಳು ನಿರ್ಣಯ ಮಂಡಿಸಲಿದ್ದಾರೆ.

ಕೋವಿಡ್ ಪಾಸಿಟಿವ್: ಸದನದ ಕಲಾಪಕ್ಕೆ ಹಾಜರಾಗಲ್ಲ, ಸಭಾಪತಿಗೆ MLC ಪತ್ರ

ಈ ಹಿಂದಿನ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪ್ರತಾಪಚಂದ್ರ ಶೆಟ್ಟಿಅವರನ್ನು ಸಭಾಪತಿಯಾಗಿ ಆಯ್ಕೆ ಮಾಡಲಾಗಿತ್ತು. ಉಪಸಭಾಪತಿಯಾಗಿ ಜೆಡಿಎಸ್‌ನ ಎಲ್‌.ಎಸ್‌. ಧರ್ಮೇಗೌಡ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಈಗ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವಿನ ಸಂಬಂಧ ಹಳಸಾಗಿದೆ. ಸದ್ಯ ಜೆಡಿಎಸ್‌ ಹಾಗೂ ಬಿಜೆಪಿ ನಡುವೆ ಸ್ನೇಹ ಚಿಗುರಿದೆ. ಮೇಲ್ಮನೆಯಲ್ಲಿ ಬಿಜೆಪಿ ಬಲ ಇತ್ತೀಚಿನ ಚುನಾವಣೆಯಲ್ಲಿ ಹೆಚ್ಚಿದೆ.
ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಪ್ರತಾಪಚಂದ್ರ ಶೆಟ್ಟಿಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಿ ಬಿಜೆಪಿ ಸದಸ್ಯರನ್ನು ಆಯ್ಕೆ ಮಾಡಲು ಮುಂದಾಗಿದೆ. ಅವಿಶ್ವಾಸ ನಿರ್ಣಯಕ್ಕೆ ಬೆಂಬಲಿಸಿದ್ದಕ್ಕೆ ಪ್ರತಿಯಾಗಿ ಜೆಡಿಎಸ್‌ನ ಧರ್ಮೇಗೌಡ ಅವರನ್ನು ಉಪಸಭಾಪತಿಯಾಗಿ ಮುಂದುವರೆಸುವ ಸಾಧ್ಯತೆ ಇದೆ.

ಕಳೆದ ಅಧಿವೇಶನದ ವೇಳೆ ಸರ್ಕಾರದ ಕೆಲವು ಮಹತ್ವದ ವಿಧೇಯಕಗಳಿಗೆ ಸದನ ಒಪ್ಪಿಗೆ ನೀಡುವ ಮೊದಲೇ ಸದನವನ್ನು ದಿಢೀರೆಂದು ಮುಂದೂಡಿದ್ದರು. ಈ ಬೆಳವಣಿಗೆ ಬಗ್ಗೆ ಅಸಮಾಧಾನಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕರೆದಿದ್ದ ಪಕ್ಷದ ಪರಿಷತ್‌ ಸದಸ್ಯರ ಸಭೆಯಲ್ಲಿ ಸಭಾಪತಿ ಬದಲಾವಣೆ ಮಾಡುವ ಬಗ್ಗೆ ಚರ್ಚಿಸಲಾಗಿತ್ತು. ನಂತರದ ದಿನಗಳಲ್ಲಿ ಇದಕ್ಕೆ ಪೂರಕವಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಜೊತೆ ಯಡಿಯೂರಪ್ಪ ಮಾತುಕತೆ ನಡೆಸಿದ್ದರು. ಇತ್ತೀಚೆಗೆ ನಡೆದ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದ ನಂತರ ಮೇಲ್ಮನೆಯಲ್ಲಿ ಅದರ ಬಲ ಹೆಚ್ಚಾಗಿದೆ. ಒಟ್ಟು 75 ಸದಸ್ಯರನ್ನು ಹೊಂದಿರುವ ವಿಧಾನ ಪರಿಷತ್‌ನಲ್ಲಿ ಪ್ರಸ್ತುತ ಬಿಜೆಪಿ 31, ಸಭಾಪತಿ ಪ್ರತಾಪಚಂದ್ರ ಶೆಟ್ಟಿ  ಸೇರಿದಂತೆ ಕಾಂಗ್ರೆಸ್‌ 29, ಜೆಡಿಎಸ್‌ 14, ಪಕ್ಷೇತರ ಒಬ್ಬರು ಇದ್ದಾರೆ.