ಮುಂದಿನ ಲೋಕಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಕೇಂದ್ರ ಮತ್ತು ರಾಜ್ಯದ ನಾಯಕರು ಸೇರಿ ಪಂಚಾಯತ್ ಮಟ್ಟದಿಂದ ಪಕ್ಷವನ್ನು ಬಲಗೊಳಿಸುತ್ತಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ತಿಳಿಸಿದ್ದಾರೆ.
ಬೆಂಗಳೂರು (ಜು.30): ಮುಂದಿನ ಲೋಕಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಕೇಂದ್ರ ಮತ್ತು ರಾಜ್ಯದ ನಾಯಕರು ಸೇರಿ ಪಂಚಾಯತ್ ಮಟ್ಟದಿಂದ ಪಕ್ಷವನ್ನು ಬಲಗೊಳಿಸುತ್ತಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ತಿಳಿಸಿದ್ದಾರೆ. ಶನಿವಾರ ಬಿಜೆಪಿ ಕಚೇರಿಯಲ್ಲಿ ಲೋಕಸಭೆ ಚುನಾವಣೆ ಸಂಬಂಧ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಕ್ಷೇತ್ರಗಳತ್ತ ಹೆಚ್ಚಿನ ಗಮನ ಹರಿಸಲಾಗುವುದು. ಸೋಲನುಭವಿಸಿದ ಕ್ಷೇತ್ರಗಳಿಂದಲೇ ಸಿದ್ಧತೆ ಪರಿಶೀಲನೆ ಆರಂಭವಾಗಿದೆ. ಲೋಕಸಭೆ ಚುನಾವಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗುವುದು’ ಎಂದು ಹೇಳಿದರು. ಆದರೆ ಇದೇ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕ ಆಯ್ಕೆಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡದೆ ತೆರಳಿದರು.
ಸಭೆಯಲ್ಲಿ ತಾವ್ಡೆ ಸೂಚನೆ: ಇನ್ನು, ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಯೋಜನೆಗಳು ಮತ್ತು ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಂಡ ಕಾರ್ಯಕ್ರಮಗಳ ಕುರಿತು ಜನತೆಗೆ ತಲುಪಿಸಬೇಕು. ಪ್ರಸ್ತುತ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರದ ವೈಫಲ್ಯ, ಗ್ಯಾರಂಟಿಗಳ ಮೋಸದ ಬಗ್ಗೆ ಅರಿವು ಮೂಡಿಸಬೇಕು. ಲೋಕಸಭೆ ಚುನಾವಣೆಗೆ ಈಗಿನಿಂದಲೇ ಕೆಲಸ ಪ್ರಾರಂಭಿಸಬೇಕು. ಪಕ್ಷದಲ್ಲಿ ಕೆಲವರು ಅಸಮಾಧಾನಗೊಂಡಿದ್ದು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಬೇಕು. ಈ ಮೂಲಕ ಒಟ್ಟಾಗಿ ಕೆಲಸ ಮಾಡಬೇಕು ಎಂಬ ಸೂಚನೆ ನೀಡಿದರು ಎಂದು ಹೇಳಲಾಗಿದೆ.
ಮಂಡ್ಯದಲ್ಲಿ ಮತ್ತೊಂದು ದುರಂತ: ವಿಸಿ ನಾಲೆಗೆ ಕಾರು ಉರುಳಿ ನಾಲ್ವರು ಸಾವು
ಸಮುದಾಯವಾರು ಮತಗಳ ಕ್ರೋಢೀಕರಣಕ್ಕೆ ಯೋಜನೆ ರೂಪಿಸಬೇಕು. ಪಕ್ಷದ ಸಾಮಾಜಿಕ ತಾಲಜಾಣವನ್ನು ಸದೃಢಗೊಳಿಸಬೇಕು. ಈ ಮೂಲಕವೇ ಪ್ರತಿಪಕ್ಷಗಳಿಗೆ ಪ್ರತ್ಯುತ್ತರ ನೀಡಬೇಕು. ವಿಧಾನಸಭಾವಾರು ತಂಡಗಳನ್ನು ರಚಿಸಿ ಪ್ರವಾಸ ಕೈಗೊಳ್ಳಬೇಕು ಎಂದಿದ್ದಾರೆ ಎನ್ನಲಾಗಿದೆ. ಈ ನಡುವೆ, ರಾಜ್ಯದ ನಾಯಕತ್ವದ ಕುರಿತು ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಈ ಬಗ್ಗೆ ಚಿಂತೆ ಬಿಟ್ಟು ಪಕ್ಷ ಸಂಘಟನೆಯತ್ತ ಕೆಲಸ ಮಾಡಬೇಕು ಎಂದು ಸೂಚಿಸಿದರು ಎನ್ನಲಾಗಿದೆ.
ಶಾಸಕರ ಅತೃಪ್ತಿ ಬಿಜೆಪಿಗರ ಕಟ್ಟುಕಥೆ: ಗ್ಯಾರಂಟಿ ಯೋಜನೆಗಳ ಜಾರಿ ಜತೆಗೆ ರಾಜ್ಯದ ಅಭಿವೃದ್ಧಿಯನ್ನೂ ಸರ್ಕಾರ ಮಾಡಲಿದೆ ಎಂದಿರುವ ಸಚಿವ ಮಂಕಾಳ ವೈದ್ಯ, ಕಾಂಗ್ರೆಸ್ ಶಾಸಕರು ಅತೃಪ್ತರಾಗಿದ್ದಾರೆನ್ನುವುದು ಬಿಜೆಪಿಗರ ಕಟ್ಟುಕಥೆ ಎಂದು ಕಿಡಿಕಾರಿದ್ದಾರೆ. ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಶಾಸಕರಿಗೂ ಸರ್ಕಾರದ ಮೇಲೆ ಅಸಮಾಧಾನವಾಗಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎನ್ನುವುದು ಬಿಜೆಪಿಗರ ಆರೋಪ ಮಾತ್ರ. ಬಿಜೆಪಿಗರು ಸಣ್ಣ-ಸಣ್ಣ ವಿಷಯವನ್ನು ದೊಡ್ಡದಾಗಿ ಮಾಡುತ್ತಿದ್ದಾರೆ. ಅವರು ರಾಜ್ಯವನ್ನು ದಿವಾಳಿ ಮಾಡಿಟ್ಟು ಹೋಗಿದ್ದು ಇದನ್ನು ನಮ್ಮ ಸರ್ಕಾರ ಸರಿಪಡಿಸುವ ಕೆಲಸ ಮಾಡುತ್ತಿದೆ ಎಂದರು.
ಶಾಸಕರು ಸ್ಥಳೀಯವಾಗಿ ಹಲವು ಸಮಸ್ಯೆಗಳನ್ನು ಬಗೆಹರಿಸಬೇಕಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಣಾಳಿಕೆಯಲ್ಲಿ ತಿಳಿಸಿದ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಹೆಚ್ಚು ಗಮನ ಹರಿಸುತ್ತಿದ್ದಾರೆ. ಜತೆಗೆ ರಾಜ್ಯದ ಅಭಿವೃದ್ಧಿಯ ಬಗ್ಗೆಯೂ ಆದ್ಯತೆ ನೀಡಿದ್ದಾರೆ. ಹಂತ-ಹಂತವಾಗಿ ಎಲ್ಲ ಸಮಸ್ಯೆಗಳು ಬಗೆಹರಿಯಲಿದೆ. ತಮ್ಮ ಅಧಿಕಾರದವಧಿಯಲ್ಲಿ ಏನೂ ಮಾಡದ ಬಿಜೆಪಿ ಇದೀಗ ಹತಾಶವಾಗಿ ಕಾಂಗ್ರೆಸ್ ಶಾಸಕರು ಅತೃಪ್ತರಾಗಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ ಎಂದರು.
ಚುನಾವಣೆ ಮುಗಿದ್ರೂ ಖಾಸಗಿ ವಾಹನ ಚಾಲಕರಿಗೆ ಬಾಡಿಗೆ ಪಾವತಿಸದ ಅಧಿಕಾರಿಗಳು!
ಕಾರವಾರದ ಸುರಂಗ ಮಾರ್ಗ ಸೋರುತ್ತಿದ್ದು ಸರಿಪಡಿಸಲು ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆ ನೀಡಲಾಗಿದೆ. ಭಟ್ಕಳ ಹೆದ್ದಾರಿಯಲ್ಲಿ ನೀರು ನಿಲ್ಲುವ ಮತ್ತಿತರ ಸಮಸ್ಯೆ ಶೀಘ್ರ ಬಗೆಹರಿಸಲಾಗುವುದು ಎಂದರು. ಟೋಲ್ ವಸೂಲಿ ಪ್ರಶ್ನೆಗೆ, ಇದು ಕೇಂದ್ರದ ವ್ಯಾಪ್ತಿಗೆ ಬರಲಿದ್ದು, ಈಗಾಗಲೆ ಮೂರು ವರ್ಷದಿಂದ ಟೋಲ್ ವಸೂಲಿ ಮಾಡುತ್ತಿದ್ದಾರೆ. ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಮತ್ತೆಷ್ಟುವರ್ಷ ಬೇಕು ಎನ್ನುವುದರ ಕುರಿತಂತೆ ವಿವರದ ಮಾಹಿತಿ ಕೇಳಲಾಗಿದೆ ಎಂದರು.
