ನಾನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ರೌಡಿ, ಮಾಜಿ ರೌಡಿ ಎನ್ನುವುದಿಲ್ಲ. ಆ ದಿನಗಳು ಅದನ್ನು ಹೇಳಿವೆ: ಸಿ.ಟಿ.ರವಿ 

ಬೆಂಗಳೂರು(ಡಿ.04): ರಾಜಕೀಯ ಕಾರಣಕ್ಕಾಗಿ ನನ್ನ ಹೆಸರು ಸಹ ರೌಡಿ ಪಟ್ಟಿಯಲ್ಲಿತ್ತು. 90ರ ದಶಕದಲ್ಲಿ ನನ್ನನ್ನೂ ಪೊಲೀಸರು ಸಮಾಜಘಾತುಕರ ಪಟ್ಟಿಗೆ ಸೇರಿಸಿದ್ದರು. ಹಾಗಂತ ರೌಡಿ ಲಿಸ್ಟ್‌ನಲ್ಲಿದ್ದವರೆಲ್ಲಾ ರೌಡಿಗಳು ಎಂದು ಹೇಳಲಾಗದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ.

ಶನಿವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಕಾರಣಕ್ಕೆ ನನ್ನ ಹೆಸರು ರೌಡಿ ಲಿಸ್ಟಿನಲ್ಲಿತ್ತು. ನಮ್ಮ ಪಕ್ಷದ ಕಾರ್ಯಕರ್ತರೂ ರೌಡಿ ಲಿಸ್ಟಿನಲ್ಲಿದ್ದರು. ಹೋರಾಟ ಮಾಡುವುದೇ ರೌಡಿಸಂ ಎಂಬ ಭಾವನೆ ಕಾಂಗ್ರೆಸ್‌ನವರದಾಗಿತ್ತು. ರೌಡಿಗಳ ಸೇರ್ಪಡೆ ವಿಚಾರದಲ್ಲಿ ಪಕ್ಷದ ರಾಜ್ಯಾಧ್ಯಕ್ಷರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದರು.

ಕಾಂಗ್ರೆಸ್ಸೇ ರೌಡಿಗಳ ಪಕ್ಷ, ಅದರ ಅಧ್ಯಕ್ಷರ ಹಿನ್ನೆಲೆ ನೋಡಿ: ಅಶ್ವತ್ಥನಾರಾಯಣ್‌ ತಿರುಗೇಟು

ದಿವಂಗತ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ತಮ್ಮ ಚೇಂಬರ್‌ನಲ್ಲಿ ನಟೋರಿಯಸ್‌ ರೌಡಿಗಳ ಜತೆ ಸಭೆ ನಡೆಸಿದ್ದರು. ಅಂತಹ ಕೆಲಸ ನಾವು ಮಾಡುವುದಿಲ್ಲ. ನಾನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ರೌಡಿ, ಮಾಜಿ ರೌಡಿ ಎನ್ನುವುದಿಲ್ಲ. ಆ ದಿನಗಳು ಅದನ್ನು ಹೇಳಿವೆ. ಸಂಜಯ್‌ ಬ್ರಿಗೇಡ್‌ ಸೇರಲು ಗೂಂಡಾಗಿರಿ ಅರ್ಹತೆಯಾಗಿತ್ತು. ಯುವ ಕಾಂಗ್ರೆಸ್‌ಗೆ ಬರುವವರ ಮೇಲೆ ಹತ್ತಾರು ಪ್ರಕರಣಗಳು ಇರಬೇಕು ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನವನ್ನು ನಲಪಾಡ್‌ಗೆ ಇದೇ ಕಾರಣಕ್ಕೆ ನೀಡಿದ್ದಾರೆ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಅವರು, ನಮ್ಮದು ಮಾಸ್‌ ಪಾರ್ಟಿ. ನಮ್ಮ ಪಕ್ಷದ ನೀತಿ-ನಿಯತ್ತು ಬದಲಾಗಿಲ್ಲ. ತಂತ್ರಗಾರಿಕೆ ಮಾತ್ರ ಬದಲಾಗಿದೆ. ಪ್ರವಾಹದಲ್ಲಿ ಕಸಕಡ್ಡಿಯೂ ಬರುತ್ತದೆ ಎಂದು ತಿಳಿಸಿದರು.