ಹಿಂದುತ್ವ ಪ್ರತಿಪಾದಕರಿಗೆ ಬದುಕಿನ ಗ್ಯಾರಂಟಿ ಬೇಕು, ಬಿಜೆಪಿ-ಮೋದಿ ವಿರುದ್ಧ ಪ್ರತಿಪಕ್ಷಗಳ ಒಗ್ಗಟ್ಟು ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯ 

ದೊಡ್ಡಬಳ್ಳಾಪುರ(ಜು.14): ದೇಶದ ಎಲ್ಲಾ ನರಿಗಳು ಇತ್ತೀಚೆಗೆ ಬಿಹಾರದ ಪಾಟ್ನಾದಲ್ಲಿ ಸಭೆ ಸೇರಿದ್ದವು. ಈಗ ಮತ್ತೆ ಬೆಂಗಳೂರಿನಲ್ಲಿ ಸಭೆ ಸೇರುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದ್ದಾರೆ. ನಗರದ ಖಾಸಗಿ ಸಮುದಾಯ ಭವನದಲ್ಲಿ ಗುರುವಾರ ಗ್ರಾಪಂ ಪ್ರಮುಖರ ಸಭೆಯಲ್ಲಿ ಮಾತನಾಡಿ, ನರಿಗಳು ಎಂದೂ ಬೇಟೆಯಾಡುವುದಿಲ್ಲ. ಬೇಟೆಯಾಡಿದ್ದನ್ನು ಕದ್ದು ತಿಂದು ಕಾಲಕಳೆಯುತ್ತವೆ ಎಂದು ಅವರು ಪ್ರಧಾನಿ ಮೋದಿ ಹಾಗೂ ಎನ್‌ಡಿಎ ಒಕ್ಕೂಟದ ವಿರುದ್ಧ ಒಗ್ಗೂಡುತ್ತಿರುವುದಾಗಿ ಹೇಳುತ್ತಿರುವ ವಿರೋಧ ಪಕ್ಷಗಳ ರಾಷ್ಟ್ರೀಯ ನಾಯಕರ ಸಭೆ ಕುರಿತು ವಾಗ್ದಾಳಿ ನಡೆಸಿದರು. 

ರಾಜ್ಯದಲ್ಲಿ ಹಿಂದುತ್ವ ಪ್ರತಿಪಾದಕರು, ಋುಷಿ ಮುನಿಗಳು, ಸಾಧು-ಸಂತರ ಬದುಕಿಗೆ ಕಾಂಗ್ರೆಸ್‌ ಪಕ್ಷ ಗ್ಯಾರಂಟಿ ನೀಡಬೇಕಿದೆ. ಕಾಂಗ್ರೆಸ್‌ ಆಡಳಿತಕ್ಕೆ ಬಂದ ನಂತರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕರ್ತರ ಸಾಲು ಸಾಲು ಹತ್ಯೆಗಳು ನಡೆಯುತ್ತಲೇ ಇವೆ. ರಾಜ್ಯದ ಜನತೆ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಸಿ.ಟಿ. ರವಿ, ಚಕ್ರವರ್ತಿ ಸೂಲಿಬೆಲೆ ಬಂಧಿಸುವಂತೆ ದಲಿತ ಸಂಘ ಒತ್ತಾಯ

ನಮಾಜ್‌ ಮಾಡಕ್ಕಲ್ಲ: 

ವಿಧಾನಸೌಧದಲ್ಲೇ ನಮಾಜ್‌ ಮಾಡಲು ಅವಕಾಶ ನೀಡುವಂತೆ ಶಾಸಕರೊಬ್ಬರು ಕೇಳಿದ್ದಾರೆ. ಕೆಂಗಲ್‌ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿಸಿದ್ದು ಆಡಳಿತ ನಡೆಸಲು ಹೊರತು ನಮಾಜ್‌ ಮಾಡಲು ಅಲ್ಲ. ಇದನ್ನು ಹೀಗೆ ಮುಂದುವರಿಯಲು ಬಿಟ್ಟರೆ ಸಂಸತ್ತಿನಲ್ಲೂ ನಮಾಜ್‌ ಮಾಡಲು ಅವಕಾಶ ನೀಡುವಂತೆ ಕೇಳುವ ಕಾಲ ದೂರವಿಲ್ಲ. ಈ ಸತ್ಯಗಳ ಬಗ್ಗೆ ಮಾತನಾಡಿದರೆ ಸಿ.ಟಿ.ರವಿ ಕೋಮುವಾದಿ ಎನ್ನುತ್ತಾರೆ, ಬಿಜೆಪಿ ಅಧಿಕಾರಕ್ಕಾಗಿ ಇರುವ ಪಕ್ಷ ಅಲ್ಲ, ಒಂದು ವಿಚಾರ, ಸಿದ್ಧಾಂತಕ್ಕಾಗಿ ಕೆಲಸ ಮಾಡುವ ಪಕ್ಷ ಎಂದರು.

ವಿಧಾನಸೌಧದಲ್ಲೇ ಟಿಪ್ಪು ಜಯಂತಿ ಆಚರಿಸಲು ಅವಕಾಶ ನೀಡಿದ್ದ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲೇ ಕ್ರಿಶ್ಚಿಯನ್‌, ಮುಸ್ಲಿಮರಿಗೆ ಹಣ ಮೀಸಲಿಡಲಾಗಿದೆ. ಅದೇ ರೀತಿ ಹಿಂದೂಗಳಿಗೂ ಬಜೆಟ್‌ನಲ್ಲಿ ಹಣ ಮೀಸಲಿಡಲಿ ಎಂದು ಒತ್ತಾಯಿಸಿದರು.