ವಾರಂಟಿ ಮುಗಿದಿರುವ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ನಂಬಬೇಡಿ: ಸಿ.ಟಿ.ರವಿ
ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಏನೂ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ವಾರಂಟಿ ಮುಗಿದಿರುವ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಅನ್ನು ನಂಬಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಜಮಖಂಡಿ (ಮಾ.16): ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಏನೂ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ವಾರಂಟಿ ಮುಗಿದಿರುವ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಅನ್ನು ನಂಬಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಇಲ್ಲಿನ ತಾಲೂಕಾ ಕ್ರೀಡಾಗಂಣದಲ್ಲಿ ವಿಜಯ ಸಂಕಲ್ಪಯಾತ್ರೆ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದ ಶಾದಿಭಾಗ್ಯ ಕೇವಲ ಒಂದು ಸಮುದಾಯದ ಯೋಜನೆ ಆಗಿದೆ. ಒಂದು ಕಣ್ಣಿಗೆ ಸುಣ್ಣ. ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸವನ್ನು ಅದು ಮಾಡಿದೆ. ಅರ್ಕಾವತಿ ಹಗರಣದಲ್ಲಿ ಕೋಟ್ಯಂತರ ರುಪಾಯಿ ನುಂಗಿದ್ದು, ಕಾಂಗ್ರೆಸ್‌ನಲ್ಲಿದ್ದ ಮೂವರಲ್ಲಿ ಕದ್ದಿರೋರು ಯಾರು ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ಬಿಜೆಪಿ ಸಿದ್ಧಾಂತ ಹೊಂದಿರುವ ಪಕ್ಷವಾಗಿದ್ದು, ಹಿಂದುತ್ವವೇ ರಾಷ್ಟ್ರೀಯ ಸಿದ್ಧಾಂತವಾಗಿದೆ. ನೀತಿ, ನೇತಾ, ನಿಯತ್ತು ಇಟ್ಟುಕೊಂಡು ಹೋಗುವ ಪಕ್ಷವಾಗಿದೆ. ಪ್ರಧಾನಿ ಮೋದಿ ಕೇಂದ್ರದಲ್ಲಿ ಹಲವಾರು ಕೊಡುಗೆ ನೀಡಿದ್ದಾರೆ. ಯಾವ ಜಾತಿ ಆಧಾರದ ಮೇಲೆ ನೀಡಿಲ್ಲ ಎಂದು ಸಮರ್ಥಿಸಿಕೊಂಡರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಮಾತನಾಡಿ, ಇದು ಕೇವಲ ವಿಜಯ ಸಂಕಲ್ಪ ಯಾತ್ರೆ ಅಲ್ಲ. ನಿಮ್ಮೆಲ್ಲರ ಸಂಕಲ್ಪ ಪೂರೈಸುವ ಯಾತ್ರೆ ಎನ್ನುತ್ತ, ದೇಶದಲ್ಲೆಡೆ ಕಾಂಗ್ರೆಸ್ ಮುಕ್ತ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.
ಮಾ.16ರಂದು ಮೂಡಿಗೆರೆಯಲ್ಲಿ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆ: ಕಾರ್ಯಕ್ರಮದ ಮೇಲೆ ಬಂಡಾಯದ ಕಾರ್ಮೋಡ
ಅಮೆರಿಕದಂತ ರಾಷ್ಟ್ರಗಳಿಗೆ ಪೈಪೋಟಿ ನೀಡುವ ರಾಷ್ಟ್ರವಾಗಿ ಭಾರತ ಬೆಳೆಯುತ್ತಿದೆ. ಪಾಕಿಸ್ತಾನದಲ್ಲಿ ಮಸೀದಿಗಳ ಮುಂದೆ ನಿಂತು ಜನರು ತಮ್ಮ ದೇಶಕ್ಕೆ, ಮೋದಿ ಅಂಥವರ ನಾಯಕನನ್ನು ನೀಡುವಂತೆ ಪ್ರಾರ್ಥನೆ ಮಾಡಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪ್ರಧಾನಿ ಮೋದಿ ಅವರ ಪ್ರಭಾವ ಹಬ್ಬಿದೆ. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಸಾಲಗಾರ ದೇಶವಾಗಿದ್ದ ಭಾರತ ಇಂದು ಸ್ವಾಭಿಮಾನಿ ರಾಷ್ಟ್ರವಾಗಿ ಬೆಳೆಯುತ್ತಿದೆ. ಬಿಜೆಪಿ ಆಡಳಿತ ಅವಧಿಯಲ್ಲಿ ಹಲವಾರು ಜನಹಿತ ಯೋಜನೆ ರೂಪಿಸಿದೆ ಎಂದು ಹೇಳಿದರು.
ಸಂಸದ ಪಿ.ಸಿ.ಗದ್ದಿಗೌಡರ, ಸಚಿವ ಮುರಾಗೇಶ ನಿರಾಣಿ, ಲಕ್ಷ್ಮಣ ಸವದಿ ಮಾತನಾಡಿದರು. ಸಚಿವ ಗೋವಿಂದ ಕಾರಜೋಳ, ಅರುಣ ಶಹಾಪುರ, ಹಣಮಂತ ನಿರಾಣಿ, ಚುನಾವಣೆ ಪ್ರಭಾರಿ ನಂದು ಗಾಯಕವಾಡ, ನಾಗಪ್ಪ ಅಂಬಿ, ಗ್ರಾಮೀಣ ಮಂಡಳ ಅಧ್ಯಕ್ಷ ಮಹಾದೇವ ನ್ಯಾಮಗೌಡ, ನಗರ ಮಂಡಳ ಅಧ್ಯಕ್ಷ ಅಜಯ ಕಡಪಟ್ಟಿ, ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ವಿಪ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ, ಬಿ.ಎಸ್.ಸಿಂಧೂರ, ಡಾ.ಉಮೇಶ ಮಹಾಬಳ ಶೆಟ್ಟಿ, ಡಾ.ರಂಗನಾಥ ಸೋಲವಾಲ್ಕರ, ಬಸವರಾಜ ಬಿರಾದಾರ, ಡಾ.ವಿಜಯ ಲಕ್ಷ್ಮೀ ತುಂಗಳ ಸೇರಿದಂತೆ 21 ಜನ ಟಿಕೆಟ್ ಆಕಾಂಕ್ಷಿಗಳು ಇದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಸ್ವಾಗತಿಸಿ-ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಕಾಂತ ಉಪಾಧ್ಯೆ ನಿರೂಪಿಸಿದರು.
ಎಚ್‌ಡಿಡಿ, ಎಚ್ಡಿಕೆಗೆ ಮೋಸ ಮಾಡಿದ ಬಾಲಕೃಷ್ಣ: ಶಾಸಕ ಮಂಜುನಾಥ್
ಜೆಡಿಎಸ್ ಪಕ್ಷದಲ್ಲಿ ಕಾರ್ಯಕರ್ತರಿಗೆ ಮರ್ಯಾದೆಯಿಲ್ಲ. ಕವಡೆ ಕಾಸಿನ ಕಿಮ್ಮತ್ತು ಇಲ್ಲ, ಅಲ್ಲಿ ಇರುವುದು ದೊಡ್ಡ ಗೌಡ್ರು, ಸಣ್ಣ ಗೌಡ್ರು, ಚಿಕ್ಕ ಗೌಡ್ರು..ಮಾತ್ರ. ಯಾವ ಕ್ಷೇತ್ರದಲ್ಲಿ ಗೆಲುವು ಅಸಾಧ್ಯವೋ ಅಂತಹ ಕ್ಷೇತ್ರಗಳಲ್ಲಿ ಉಳಿದವರಿಗೆ ಟಿಕೇಟ್ ನೀಡಿ ಬಲಿ ಕಾ ಬಕ್ರಾ ಮಾಡುವ ಕುಟುಂಬವಾಗಿದೆ.
-ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ