ಬೆಂಗಳೂರು, (ನ.25): ರಾಜ್ಯ ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಕಸರತ್ತು ಜೋರಾಗಿದ್ದು, ಸಚಿವಾಕಾಂಕ್ಷಿಗಳ ಲಾಬಿ ಕೂಡ ಭರ್ಜರಿಯಾಗಿ ಸಾಗಿದೆ. ಇದರ ಮಧ್ಯೆ ಮೂಲ-ವಲಸಿಗ ಬಿಜೆಪಿ ನಾಯಕರ ವಾಗ್ದಾವೂ ಸಹ ಶುರುವಾಗಿವೆ.

ಇದಕ್ಕೆ ಪೂರಕವೆಂಬಂತೆ ಎಂ.ಪಿ.ರೇಣುಕಾಚಾರ್ಯ ಹಾಗೂ ಎಂಟಿಬಿ ನಾಗಾರಾಜ್ ನಡುವೆ ವಾಕ್ಸಮರ ನಡೆದಿದೆ. ಕೇವಲ 17 ಜನರಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ ಎಂದು ರೇಣುಕಾಚಾರ್ಯ ಗುಡುಗಿದ್ರೆ, 105 ಶಾಸಕರು ಇದ್ದಾಗ ಯಾಕೆ ಸರ್ಕಾರ ಮಾಡಲು ಆಗ್ಲಿಲ್ಲ ಎಂದು ಎಂಟಿಬಿ ನಾಗಾರಾಜ್ ತಿರುಗೇಟು ಕೊಟ್ಟಿದ್ದಾರೆ.

ಗರಂ ಆದ್ರೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ

17 ಜನರಿಂದ ಬಿಜೆಪಿ ಸರ್ಕಾರ ಬಂದಿದೆ ಎಂಬುದು ಸುಳ್ಳು. ಬಿಜೆಪಿ ಪಕ್ಷದ ಕಾರ್ಯಕರ್ತರ ಶ್ರಮದಿಂದ ರಾಜ್ಯದಲ್ಲಿ ಸರ್ಕಾರ ಬಂದಿದೆ. ಯಾರೋ ಒಬ್ಬರಿಂದ ಸರ್ಕಾರ ಬಂದಿದೆ ಎಂದು ಹೇಳಲಾಗದು. ಕಾಂಗ್ರೆಸ್, ಜೆಡಿಎಸ್​ನಿಂದ ಬೇಸತ್ತವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಅಷ್ಟೇ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗಾರಾಜ್, 105 ಶಾಸಕರು ಇದ್ದಾಗ ಯಾಕೆ ಸರ್ಕಾರ ಮಾಡಲು ಆಗ್ಲಿಲ್ಲ..? ಹೀಗಾಗಿ 105 ಶಾಸಕರು ಮುಖ್ಯ , 17 ಶಾಸಕರು ಮುಖ್ಯ . ಎರಡು ಕೈ ಜೋಡಿಸಿದ್ದಕ್ಕೆ ತಾನೆ ಸರ್ಕಾರ ಬಂದಿರೋದು ಎಂದು ರೇಣುಕಾಚಾರ್ಯಗೆ ಟಾಂಗ್ ನೀಡಿದರು.
.
ಸಂಪುಟ ವಿಸ್ತರಣೆ ತಡವಾಗಿದೆ ಅಂತ ಅನಿಸ್ತಾ ಇದೆ. ಪದೇ ಪದೇ ನಾವು ದೆಹಲಿಗೆ ಹೋಗಿ ಒತ್ತಡ ಹಾಕೋದು ಸರಿಯಲ್ಲ. ಸಿಎಂ ಭೇಟಿಯಾದಗಲೆಲ್ಲಾ ಕೇಳ್ತಿವಿ. ಮಾಡ್ತಿವಿ ಮಾಡ್ತಿವಿ ಅಂತಾರೆ ಎಂದು ಸಂಪುಟ ವಿಸ್ತರಣೆ ವಿಳಂಬಕ್ಕೆ ಎಂಟಿಬಿ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.