ದಾವಣಗೆರೆ (ನ.25):  ಕಾರ್ಯಕರ್ತರಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆಯೇ ಹೊರತು, ಸೋತವರಿಂದ ಅಲ್ಲ ಎನ್ನುವ ಮೂಲಕ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಕ್ಷೇತ್ರ ಶಾಸಕ ಎಂ.ಪಿ.ರೇಣುಕಾಚಾರ್ಯ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ನಗರದ ಹೊರವಲಯದ ಅಪೂರ್ವ ರೆಸಾರ್ಟ್‌ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2-3 ಸಲ ಗೆದ್ದವರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕಿತ್ತು. ಆದರೆ, ಚುನಾವಣೆಯಲ್ಲಿ ಸೋತವರಿಗೆ ಉನ್ನತ ಹುದ್ದೆಗಳನ್ನು ನೀಡಿರುವುದು ಬೇಸರ ತಂದಿದೆ ಎಂದರು.

ನಿನಗೆ ತಾಕತ್ತಿದ್ರೆ ಬಂದ್ ಮಾಡು: ವಾಟಾಳ್‌ಗೆ ಸಿಎಂ ರಾಜಕೀಯ ಕಾರ್ಯದರ್ಶಿ ವಾರ್ನ್ ...

ನಾವು ಸಾಂವಿಧಾನಿಕವಾಗಿ ಜನರಿಂದ ಆಯ್ಕೆಯಾಗಿದ್ದೇವೆ. ಮತದಾರರು ಜನಾದೇಶ ನಮಗೆ ಕೊಟ್ಟಿಲ್ಲವೇ? ಚುನಾವಣೆಗಳಲ್ಲಿ ಸೋತವರಷ್ಟೇ ಸಮರ್ಥರಾ? ನಮಗೆ ಸಾಮರ್ಥ್ಯ ಇಲ್ಲವೇ? ಪಕ್ಷದಲ್ಲಿ ಸೋತವರಿಗೇ ಹೆಚ್ಚು ಬೆಲೆಯೇ? ಸಚಿವ ಸಂಪುಟ ವಿಸ್ತರಣೆಯಲ್ಲಿ 2-3 ಸಲ ಗೆದ್ದವರಿಗೆ ಸಚಿವ ಸ್ಥಾನದ ಅವಕಾಶ ನೀಡಬೇಕು. ಬರೀ ಸೋತವರಿಂದಲೇ ಪಕ್ಷವು ಅಧಿಕಾರಕ್ಕೆ ಬಂದಿದೆ ಎನ್ನುವುದಾದರೆ ಗೆದ್ದ 105 ಮಂದಿ ಶಾಸಕರು ಲೆಕ್ಕಕ್ಕೇ ಇಲ್ಲವೇ? ಸಚಿವ ಸಂಪುಟದಲ್ಲಿ ಸೋತವರಿಗೆ ಅವಕಾಶ ನೀಡಿರುವುದರಿಂದ, ವರಿಷ್ಠರ ಇಂತಹ ತೀರ್ಮಾನಗಳಿಂದ ‘ಭಾರತ್‌ ಮಾತಾ ಕೀ ಜೈ’ ಎಂಬುದಾಗಿ ಘೋಷಣೆಗಳನ್ನು ಮೊಳಗಿಸುತ್ತ ನಮ್ಮನ್ನೆಲ್ಲಾ ಗೆಲ್ಲಿಸಿದ ಸಾವಿರಾರು ಕಾರ್ಯಕರ್ತರಿಗೆ ನೋವಾಗುತ್ತದೆ ಎಂದು ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದರು.

ಸಂಘಟನೆಯಲ್ಲಿ ಬಿಜೆಪಿ ವಿಶ್ವದಲ್ಲೇ ನಂಬರ್‌ ಒನ್‌ ಪಕ್ಷ. 2-3 ಸಲ ಗೆದ್ದವರಿಗೆ ಸಚಿವ ಸ್ಥಾನ ಕೇಳಿದ್ದೇವೆ. ನನಗೆ ಕೊಡಿ ಅಂತಾ ಅಲ್ಲ, ಒಂದು ಸಲವೋ, 2 ಸಲವೋ, ಗೆದ್ದವರಿಗೆ ಅವಕಾಶ ನೀಡುವಂತೆ ಕೇಳಿದ್ದೇವೆ. ಸೋತವರಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದೆ ಅನ್ನೋದು ಸರಿಯಲ್ಲ ಎಂದು ಪುನರುಚ್ಚರಿಸಿದರು.