ಬಿಜೆಪಿಗೆ ಮತ್ತೊಬ್ಬ ಎಂಎಲ್‌ಸಿ ಗುಡ್‌ಬೈ: ಕೆ.ಪಿ.ನಂಜುಂಡಿ ನಾಳೆ ಕಾಂಗ್ರೆಸ್ ಸೇರ್ಪಡೆ
ವಿಶ್ವಕರ್ಮ ಸೇರಿದಂತೆ ಹಿಂದುಳಿದ ಸಮುದಾಯಗಳಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲು ವಿಧಾನಪರಿಷತ್ ಸದಸ್ಯ ಕೆ.ಪಿ. ನಂಜುಂಡಿ ನಿರ್ಧಾರ ಮಾಡಿದ್ದು, ಬುಧವಾರ ಅಧಿಕೃತವಾಗಿ ಪಕ್ಷ ಸೇರ್ಪಡೆ ಆಗಲಿದ್ದಾರೆ.
ಬೆಂಗಳೂರು (ಏ.23): ವಿಶ್ವಕರ್ಮ ಸೇರಿದಂತೆ ಹಿಂದುಳಿದ ಸಮುದಾಯಗಳಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲು ವಿಧಾನಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ನಿರ್ಧಾರ ಮಾಡಿದ್ದು, ಬುಧವಾರ ಅಧಿಕೃತವಾಗಿ ಪಕ್ಷ ಸೇರ್ಪಡೆ ಆಗಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆ.ಪಿ. ನಂಜುಂಡಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು.
ಈ ವೇಳೆ ಬಿಜೆಪಿಯಿಂದ ವಿಶ್ವಕರ್ಮ ಸಮುದಾಯಕ್ಕೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ವೇಳೆ ಪ್ರಾತಿನಿಧ್ಯ ನೀಡಿಲ್ಲ. ಜತೆಗೆ ಹಿಂದುಳಿದ ವರ್ಗಗಳನ್ನು ಬಿಜೆಪಿ ನಿರ್ಲಕ್ಷಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ವೇಳೆ ಶಿವಕುಮಾರ್ ಅವರು ಕಾಂಗ್ರೆಸ್ ಸೇರ್ಪಡೆಗೆ ಆಹ್ವಾನಿಸಿದ್ದರು ಎನ್ನಲಾಗಿದೆ.
ಇದಕ್ಕೆ ಒಪ್ಪಿದ್ದ ನಂಜುಂಡಿ ಸೋಮವಾರ ಡಿ.ಕೆ. ಶಿವಕುಮಾರ್ ಅವರು ಕೆ.ಪಿ. ನಂಜುಂಡಿ ಅವರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸದಾಶಿವನಗರಕ್ಕೆ ತೆರಳಿ ಖರ್ಗೆ ಅವರೊಂದಿಗೆ ಪಕ್ಷ ಸೇರ್ಪಡೆ ಕುರಿತು ಮಾತುಕತೆ ನಡೆಸಿದರು. ಈ ವೇಳೆ ಪಕ್ಷ ಸೇರ್ಪಡೆಗೆ ಅನುಮತಿ ದೊರೆತಿದ್ದು, ಬುಧವಾರ ಸೇರ್ಪಡೆಗೊಳ್ಳಲಿದ್ದಾರೆ.
ಕಾಂಗ್ರೆಸ್ ಗೆದ್ದರೆ ನಿಮ್ಮ ಆಸ್ತಿ ಜಪ್ತಿ ಮಾಡಿ ಎಲ್ಲರಿಗೂ ಹಂಚುತ್ತೆ: ಪ್ರಧಾನಿ ಮೋದಿ
ವಿಧಾನಸಭೆಯಿಂದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಚುನಾಯಿತರಾಗಿರುವ ಕೆ.ಪಿ. ನಂಜುಂಡಿ ಅವರ ಪರಿಷತ್ ಸದಸ್ಯತ್ವ ಅವಧಿ ಜೂನ್ 17ಕ್ಕೆ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಬುಧವಾರದ ಒಳಗಾಗಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ. ನಂತರ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.