ಬೆಳಗಾವಿ, (ಜುಲೈ.29): ನಿಗಮ ಮಂಡಳಿ ನೇಮಕ ಬೆನ್ನಲ್ಲೇ ಇದೀಗ ಸಂಪುಟ ವಿಸ್ತರಣೆ ಸದ್ದು ಜೋರಾಗಿದ್ದು, ಆಗಸ್ಟ್ ಮೊದಲ ವಾರದಲ್ಲೇ ಬಿಎಸ್‌ವೈ ಕೆಲವರನ್ನ ಸಂಪುಟದಿಂದ ಕೈಬಿಟ್ಟು ಬೇರೆಯವರಿಗೆ ಚಾನ್ಸ್ ಕೊಡಲು ಚಿಂತನೆ ನಡೆಸಿದ್ದಾರೆ. ಇದರ ಮಧ್ಯೆ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಈ ಸಲ ಮಂತ್ರಿಯಾಗುವುದು ಫಿಕ್ಸ್ ಎನ್ನುವ ಅರ್ಥದಲ್ಲಿ ಹೇಳಿಕೆ ಕೊಟ್ಟಿದ್ದಾರೆ.

ಚಿಕ್ಕೋಡಿಯಲ್ಲಿ ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿರುವ ಉಮೇಶ್ ಕತ್ತಿ, ರಾಜ್ಯದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆಗೆ ಸಿದ್ಧತೆಗಳು ನಡೆದಿರುವ ಬೆನ್ನಲ್ಲೇ ಹಿರಿಯ ಶಾಸಕ ಉಮೇಶ್ ಕತ್ತಿ ತಾವು ಸಚಿವರಾಗುವ ಕಾಲ ದೂರವಿಲ್ಲ ಎಂದರು.

ಸಿಎಂ ಯಡಿಯೂರಪ್ಪ ಸಂಪುಟಕ್ಕೆ ಸರ್ಜರಿ ಪಕ್ಕಾ: ಯಾರು ಇನ್? ಯಾರು ಔಟ್?

 ಮುಖ್ಯಮಂತ್ರಿಯವರಿಗೆ ಮಂತ್ರಿ ಮಂಡಲ ವಿಸ್ತರಣೆ ಮಾಡುವ ಅಧಿಕಾರ ಇದೆ ಅವರೆ ಮಾಡುತ್ತಾರೆ. ಶಾಸಕ ತಿಪ್ಪಾರೆಡ್ಡಿ ಹಿರಿಯರು ನಾನು ಅವರು ಇಬ್ಬರು ಮಂತ್ರಿ ಆಗುವ ಕಾಲ ಬಹಳ ದೂರವಿಲ್ಲ. ನಾವು ಇಬ್ಬರು ಸಹ ಮಂತ್ರಿ ಆಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಹಿಂದೆ ನಡೆದ ಸಚಿವ ಸಂಪುಟ ವಿಸ್ತರಣೆ ವೇಳೆ ಕೊನೆಗಳಿಗೆಯಲ್ಲಿ ಉಮೇಶ್ ಕತ್ತಿಯಾವರಿಗೆ ಸಚಿವ ಸ್ಥಾನ ಕೈತಪ್ಪಿತ್ತು. ಆದ್ರೆ, ಈ ಬಾರಿ ಅವರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆಗಳು ಹೆಚ್ಚಿವೆ.

ಇನ್ನು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಶಾಸಕರಿಗೆ ಸಮಾಧಾನ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ನಿಗಮ ಮಂಡಳಿಗಳನ್ನ ನೀಡಿದ್ದರು. ಹಲವರು ನಯವಾಗೆ ನಿರಾಕರಿಸಿದರೆ ಶಾಸಕ ತಿಪ್ಪಾರೆಡ್ಡಿ ಮಾತ್ರ ನನಗೆ ಅವಮಾನ ಮಾಡಲಾಗಿದೆ. ನನಗೆ ಸಚಿವ ಸ್ಥಾನ ಬೇಕು ಎಂದು ಬಹಿರಂಗವಾಗೆ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಈಗ ಉಮೇಶ್ ಕತ್ತಿ ಸಹ ನನಗೆ ಮಂತ್ರಿ ಸ್ಥಾನ ಬೇಕು ಎಂದಿದ್ದಾರೆ.