ಗಲಾಟೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ಸೇರಿದ ಆನಂದ್ ಸಿಂಗ್ ಅವರನ್ನು ಬಿಜೆಪಿ ಶಾಸಕರೋರ್ವರು ಭೇಟಿ ಮಾಡಲು ಯತ್ನಿಸಿದ ಘಟನೆ ನಡೆದಿದೆ. 

ಬೆಂಗಳೂರು : ಈಗ​ಲ್‌​ಟನ್‌ ರೆಸಾ​ರ್ಟ್‌​ನಲ್ಲಿ ನಡೆದ ಮಾರಾ​ಮಾ​ರಿ​ಯಿಂದ ಗಾಯ​ಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ​ಯು​ತ್ತಿ​ರುವ ವಿಜ​ಯ​ಪುರ ಶಾಸಕ ಆನಂದ್‌ ಸಿಂಗ್‌ ಅವರನ್ನು ಕಾಂಗ್ರೆಸ್‌ ನಾಯ​ಕರ ಕಣ್ತಪ್ಪಿಸಿ ಬಿಜೆಪಿ ಶಾಸಕ ರಾಜು​ಗೌಡ ಭೇಟಿ ಮಾಡಲು ಪ್ರಯ​ತ್ನಿ​ಸಿದ ಘಟನೆ ಭಾನು​ವಾರ ನಡೆ​ಯಿ​ತು.

ಆನಂದ್‌ ಸಿಂಗ್‌ ಅವರನ್ನು ಭೇಟಿ ಮಾಡಲು ಆಸ್ಪ​ತ್ರೆಗೆ ತೆರ​ಳಿದ ರಾಜು​ಗೌಡ ಅವ​ರಿಗೆ ಭೇಟಿ​ಯನ್ನು ನಿರಾ​ಕ​ರಿ​ಸ​ಲಾ​ಗಿದೆ. ಆಗ ರಕ್ತ ಪರೀಕ್ಷೆ ಮಾಡಿ​ಸಿ​ಕೊ​ಳ್ಳುವ ನೆಪ​ದಲ್ಲಿ ಆಸ್ಪ​ತ್ರೆ​ಯೊ​ಳಗೆ ದಾಖ​ಲಾದ ರಾಜು​ಗೌಡ ಎಲ್ಲರ ಕಣ್ತ​ಪ್ಪಿಸಿ ಆರನೇ ಅಂತ​ಸ್ತಿ​ನಲ್ಲಿ ಚಿಕಿತ್ಸೆ ಪಡೆ​ಯು​ತ್ತಿ​ರುವ ಆನಂದ್‌​ ಸಿಂಗ್‌ ಅವರ ಕೋಣೆಯವರೆಗೂ ಹೋಗಿ​ದ್ದಾರೆ. ಈ ವೇಳೆ ಅವ​ರನ್ನು ತಡೆದ ಕಾಂಗ್ರೆಸ್‌ ನಾಯ​ಕರು ಆನಂದ್‌​ ಸಿಂಗ್‌ ಭೇಟಿಗೆ ಅವ​ಕಾಶ ನೀಡದೆ ಅವ​ರನ್ನು ಕಳು​ಹಿ​ಸಿ​ದ್ದಾ​ರೆ.

ಹೀಗಂತ ಖುದ್ದು ರಾಜುಗೌಡ ಅವರೇ ಮಾಧ್ಯ​ಮ​ಗ​ಳಿಗೆ ತಿಳಿ​ಸಿ​ದ್ದಾರೆ. ಆನಂದ್‌ ​ಸಿಂಗ್‌ ಅವ​ರನ್ನು ಭೇಟಿ ಮಾಡಲು ವಿಫಲ ಪ್ರಯತ್ನ ನಡೆ​ಸಿದ ನಂತರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ರಾಜುಗೌಡ, ನಾನು ಸಿಬ್ಬಂದಿಯ ಕಣ್ತಪ್ಪಿಸಿ ಆರನೇ ಮಹಡಿಯಲ್ಲಿ ಆನಂದ್‌ ಸಿಂಗ್‌ ಚಿಕಿತ್ಸೆ ಪಡೆಯುತ್ತಿರುವ ಕೊಠಡಿವರೆಗೂ ತೆರಳಿದ್ದೆ. ಆದರೆ, ಅಲ್ಲಿ ಮತ್ತೆ ನನಗೆ ಅವಕಾಶ ನೀಡಲಿಲ್ಲ ಎಂದು ವಿವ​ರಿ​ಸಿ​ದ​ರು.

ಆಸ್ಪತ್ರೆಯಲ್ಲಿ ಆನಂದ್‌ ಸಿಂಗ್‌ ಭೇಟಿಗೆ ಹೋದರೆ ವೈದ್ಯರು ಅವಕಾಶ ನೀಡಲಿಲ್ಲ. ಅವರು ಯಾವ ವಾರ್ಡ್‌ನಲ್ಲಿದ್ದಾರೆ ಎಲ್ಲಿದ್ದಾರೆ ಎಂಬುದನ್ನೂ ತಿಳಿಸಲಿಲ್ಲ. ಅವರಿಗೆ ಚಿಕಿತ್ಸೆ ನೀಡುತ್ತಿರುವುದನ್ನು ಗುಪ್ತವಾಗಿ ಇಟ್ಟಿರುವುದು ನೋಡಿದರೆ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು.

ಬೆಳಗ್ಗೆ ನನಗೆ ಆಸ್ಪತ್ರೆ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ನಾನು ರಕ್ತ ಪರೀಕ್ಷೆಗೆ ಒಳಗಾಗುತ್ತೇನೆ ಎಂದು ಹೇಳಿ ಆಸ್ಪತ್ರೆಗೆ ಪ್ರವೇಶಿಸಿ ರಕ್ತ ಪರೀಕ್ಷೆಯನ್ನೂ ಮಾಡಿಸಿಕೊಂಡೆ. ಬಳಿಕ ಸಾಕಷ್ಟುಕಷ್ಟಪಟ್ಟು 6ನೇ ಮಹಡಿವರೆಗೆ ತೆರಳಿದೆ. ಆದರೆ, ಅಲ್ಲೂ ನನಗೆ ಭೇಟಿ ಮಾಡಲು ಅವಕಾಶ ನೀಡಲಿಲ್ಲ. ನಾನು ಬಿಜೆಪಿ ಶಾಸಕನಾಗಿ ಬಂದಿಲ್ಲ. ಒಬ್ಬ ಸ್ನೇಹಿತನಾಗಿ ಬಂದಿದ್ದೇನೆ ಎಂದರೂ ಅವಕಾಶ ನೀಡಲಿಲ್ಲ ಎಂದರು.