ಯಾದಗಿರಿ, (ಫೆ.20): ರಾಜ್ಯದಲ್ಲಿ ಎದ್ದದಿರುವ ಮೀಸಲಾತಿ ಕಿಚ್ಚಿನ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ದಿಕ್ಕುತೋಚದಂತಾಗಿದೆ. ಇದರ ಮಧ್ಯೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಿಜೆಪಿ ಶಾಸಕ ರಾಜುಗೌಡ ಕುತೂಹಲಕಾರಿ ಹೇಳಿಕೆ ಕೊಟ್ಟಿದ್ದಾರೆ.

ಹೌದು... ಜಿಲ್ಲೆಯ ಖಾನಪುರ ಎಸ್.ಎಚ್. ಗ್ರಾಮದಲ್ಲಿ ಮಾತನಾಡಿದ ಸುರಪುರ ಬಿಜೆಪಿ ಶಾಸಕ ರಾಜುಗೌಡ, ಯಾರು ಕನ್ನಡ ಶಾಲೆಯಲ್ಲಿ ಓದುತ್ತಾರೋ ಅಂತವರಿಗೆ ಮಾತ್ರ ಮೀಸಲಾತಿ ನೀಡಿ, ಅವರು ಯಾವುದೇ ಜಾತಿಯವರಾಗಿರಲಿ. ಯಾವುದೇ ಜಾತಿಗೆ ಮಾತ್ರ ಮೀಸಲಾತಿ ಬೇಡವೇ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೀಸಲಾತಿ ವಿಚಾರವಾಗಿ ಸಿಎಂ ಬಹಳ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಇತ್ತೀಚೆಗೆ ಎಲ್ಲರೂ ಮೀಸಲಾತಿ ಕೇಳುತಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಒಂದು ಅಕ್ಷರ ಚೇಂಜ್ ಮಾಡುವ ಶಕ್ತಿ ಯಾರಿಗೂ ಇಲ್ಲ ಎಂದರು.

ಮೀಸಲಾತಿ ಕಿಚ್ಚು ಆರಿಸಲು ಮುಂದಾದ ರಾಜ್ಯ ಸರ್ಕಾರ

 ಇಂದು ಲಿಂಗಾಯತ, ಒಕ್ಕಲಿಗ, ಪಂಚಮಸಾಲಿ ಎಲ್ಲರೂ ಮೀಸಲಾತಿ ಕೇಳುತಿದ್ದಾರೆ. ಎಪಿಎಲ್/ ಬಿಪಿಎಲ್ ಕಾಡ್೯ ಯಾವ ರೀತಿ ಕೊಡುತ್ತೀರೋ ಆ ರೀತಿಯಾಗಿ ಮಿಸಲಾತಿ ಕೊಡಿ. ಅವರಲ್ಲೂ ಕಡು ಬಡವರಿದ್ದಾರೆ. ಅದರ ಆಧಾರದ ಮೇಲೆ ಮೀಸಲಾತಿ ನೀಡಿ. ಮಳೆ ಬಂದ್ರೆ ಸಂತೆಯಲ್ಲಿ ಉಪ್ಪು ಮಾರುವವರು ಅಳುತ್ತಾರೆ. ಯಾಕಂದ್ರೆ ಮಳೆ ಬಂದ್ರೆ ಉಪ್ಪು ಕರಗಿ ಹೋಗುತ್ತೆ ಅಂತ ಅವರು ಅಳುತ್ತಾರೆ. ಇವಾಗ ತೆಂಗಿನ ಕಾಯಿ ಮಾರುವವರು ಸಹ ಅಳುತಿದ್ದಾರೆ. ಮಳೆ ಬಂದ್ರೆ ತೆಂಗಿನ ಕಾಯಿ ಕರಗಲ್ಲ, ಆದ್ರೂ ತೆಂಗಿನ ಕಾಯಿಯವರೂ ಮೀಸಲಾತಿ ಕೇಳ್ತಿದ್ದಾರೆ ಎಂದು ಹೇಳಿದರು.

ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಾತೀಯತೇ ಹೆಚ್ಚಾಗಿದೆ. ನಮ್ಮ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜಾತಿಗೊಂದು ಜಯಂತಿ ಮಾಡಲಾಗಿದೆ. ಇನ್ಮುಂದೆ ಯಾವ ಜಯಂತಿಗೂ ರಾಜ್ಯದಲ್ಲಿ ರಜೆ ಕೊಡುವುದು ನಿಲ್ಲಿಸಬೇಕು. ವಾಲ್ಮೀಕಿ, ಕನಕ ಜಯಂತಿ ಸೇರಿ ಹಲವಾರು ಜಯಂತಿಗಳನ್ನು ಜಾರಿಗೆ ತಂದಿದ್ದು ಬಿಎಸ್ ವೈ ಸಾಹೇಬರು. ಈ ಜಯಂತಿಗಳಿಗೆ ಅಧಿಕಾರಿಗಳು ಪೋಟೋಗೆ ಹಾರ ಹಾಕಿ ರಜೆ ತಗೊಂಡು ಮನೆಗೆ ಹೋಗುತ್ತಾರೆ. ಇನ್ನು ಮುಂದೆ ಜಯಂತಿಗಳ ಆಚರಣೆ ವೇಳೆ ಎರಡು ಗಂಟೆ ಹೆಚ್ಚು ತರಗತಿ ತೆಗೆದುಕೊಳ್ಳುವಂತಾಗಬೇಕು ಎಂದು ತಿಳಿಸಿದರು.