ಬೆಂಗಳೂರು, (ಫೆ.26): ಮಿನಿಸ್ಟರ್ ಗಳೆಂದರೆ ದೇವಲೋಕದಿಂದ ಇಳಿದು ಬಂದವರಾ? ಎಂದು ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಗುಡುಗಿದ್ದಾರೆ.

ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರೇಣುಕಾಚಾರ್ಯ,  ನಾವೇನು ಬಿಟ್ಟಿ ಬಿದ್ದಿದ್ದೀವಾ? ಕೆಲವು ಸಚಿವರು ಕೈಗೇನೇ ಸಿಗಲ್ಲ. ಅವರ ಪಿ.ಎ ಗಳು, ಪಿ.ಎಸ್ ಗಳು ಫೋನ್ ರಿಸೀವ್ ಮಾಡುವುದಿಲ್ಲ. ಕಾಂಗ್ರೆಸ್ ಜೆಡಿಎಸ್ ನಿಂದ ಬಂದ ಎಲ್ಲ ಸಚಿವರು ಹೀಗೆ ಎಂದು ನಾನು ಹೇಳಲ್ಲ. ಆದರೆ ಕೆಲವರು ಮಾತ್ರ ನಮಗೆ ಕೈಗೆ ಸಿಗಲ್ಲ ಎಂದು ಆರೋಪಿಸಿದರು.

ಮೈಸೂರು ಮೇಯರ್ ಎಲೆಕ್ಷನ್: ರಾಜ್ಯ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ

ಸುಧಾಕರ್ ಒಬ್ಬರಿಂದಲೇ ಸರ್ಕಾರ ರಚನೆಯಾಗಿದೆಯೇ? ಅವರೇನು ದೇವಲೋಕದಿಂದ ಇಳಿದು ಬಂದಿದ್ದಾರಾ? ಇಂತಹ ವರ್ತನೆ ಮುಂದುವರೆದರೆ ರೇಣುಕಾಚಾರ್ಯನ ಇನ್ನೊಂದು ಮುಖ ತೋರಿಸಬೇಕಾಗುತ್ತೆ ಎಂದು ಹೇಳುವಂತೆ ತಿಳಿಸಿದ್ದೇನೆ ಎಂದರು.

ನಾನು ಹತ್ತಾರು ಭಾರಿ ಭೇಟಿ ಆಗಿದ್ದೇನೆ. ಪತ್ರ ಬರೆದಿದ್ದೇನೆ, ಏನೂ ಪ್ರಯೋಜನವಾಗಿಲ್ಲ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಾನು ರಾಜಿ ಆಗುವ ಮಾತೇ ಇಲ್ಲ. ನಾನು ಧರಣಿ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆ. ನಿನ್ನೆ ಅವರ ಪಿ.ಎಸ್ ಫೋನ್ ಮಾಡಿದರು. ಕೆಲವು ಕೆಲಸ ಆಗಿದೆ. ನನ್ನ ಕೆಲಸ ಆದ ಮಾತ್ರಕ್ಕೆ ನಾನು ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.

ಪಾಪ ನಮ್ಮ ಅನೇಕ ಬಾಯಿ ಇಲ್ಲದ ಶಾಸಕರಿದ್ದಾರೆ. ಅವರ ಕೆಲಸಗಳೂ ಆಗಬೇಕು. ಆದರೆ ಐದಾರು ಸಚಿವರು ಕೈಗೆ ಸಿಗಲ್ಲ .ನಾನು ಮೂರು ಬಾರಿ ಶಾಸಕನಾಗಿ ನನ್ನ ಕ್ಷೇತ್ರದಲ್ಲಿ ಆಯ್ಕೆ ಆಗಿದ್ದೇನೆ. ನಾವೇನು ಬಿಟ್ಟಿ ಬಿದ್ದಿದ್ದೀವಾ ಎಂದು ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.