ವಿಜಯಪುರ, (ಏ.03): ದೂರು ನೀಡಿದ್ದಕ್ಕೆ ಸಚಿವ ಈಶ್ವರಪ್ಪ ರಾಜೀನಾಮೆ ಪಡೆಯಿರಿ ಎನ್ನುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ಕೊಟ್ಟಿದ್ದಾರೆ.

ವಿಜಯಪುರದಲ್ಲಿ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ತಟ್ಟೆಯಲ್ಲಿ ಏನೇನೋ ಬಿದ್ದಿದೆ. ಮೊದಲು ಅದನ್ನು ತೆಗೆದುಕೊಳ್ಳಿ, ಆಮೇಲೆ ನಮ್ಮ ಪಕ್ಷದ ಬಗ್ಗೆ ಮಾತನಾಡಿ ಎಂದರು.

ಈಶ್ವರಪ್ಪರನ್ನು ಉಚ್ಚಾಟಿಸಿ ಇಲ್ಲವೇ ನೀವೇ ರಾಜೀನಾಮೆ ನೀಡಿ: ಸಿಎಂಗೊಂದು ಸವಾಲು! 

 ಡಿಕೆಶಿ, ಯಡಿಯೂರಪ್ಪ, ವಿಜಯೇಂದ್ರ ಎಲ್ಲಾ ಒಂದೇ. ಮೂವರೂ ಒಂದೇ ಇದ್ದಾರೆ, ಆದರೆ ಪಕ್ಷ ಬೇರೆ ಬೇರೆ. ಯಡಿಯೂರಪ್ಪ ನಮ್ಮ ಪಕ್ಷದಿಂದ ಸಿಎಂ ಆಗಿದ್ದಾರೆ. ಈಶ್ವರಪ್ಪರಿಗೆ ಸಿಎಂಗೆ ಹೇಳುವ, ಕೇಳುವ ಅಧಿಕಾರವಿದೆ‌. ಈಶ್ವರಪ್ಪನವರದು-ನಮ್ಮದು ಗೊಂದಲ ಏನೇ ಇದ್ದರೂ, ಅದು ನಮ್ಮ ಪಕ್ಷದ್ದು, ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಡಿಕೆಶಿಗೆ ಟಾಂಗ್ ಕೊಟ್ಟರು.

ಸಿದ್ದರಾಮಯ್ಯರನ್ನು ಮುಗಿಸಬೇಕು ಅಂದ್ರಿ. ಸಿದ್ದರಾಮಯ್ಯರನ್ನು ಮುಗಿಸಿದರೆ ಕಾಂಗ್ರೆಸ್ ಮುಗಿಯುತ್ತೆ. ಕಾಂಗ್ರೆಸ್ ಮುಗಿಯತ್ತೆ ಎಂದು ನಿಮಗೆ ಅರ್ಥವಾಯ್ತು. ಹೀಗಾಗಿ ಮತ್ತೆ ಹೋಗಿ ಸಿದ್ದರಾಮಯ್ಯನವರ ಕಾಲು ಹಿಡಿದ್ರಿ. ನಿಮ್ಮ ಪಕ್ಷದ್ದು ನೀವು ನೋಡಿಕೊಳ್ಳಿ ಎಂದು ಯತ್ನಾಳ್  ಡಿ.ಕೆ. ಶಿವಕುಮಾರ್ ವಿರುದ್ಧ ಕಿಡಿಕಾರಿದರು.