ಸಿಎಂ ವಿರುದ್ಧ ಮತ್ತೆ ಹರಿಹಾಯ್ದ ಯತ್ನಾಳ್, ಯಡಿಯೂರಪ್ಪಗೆ ಎಚ್ಚರಿಕೆ ಸಂದೇಶ..!
ಕೇಂದ್ರದವರಿಗೂ ಯಡಿಯೂರಪ್ಪನವರ ಬೇಸರವಾಗಿದ್ದಾರೆ ಎಂದು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೆ ಫೇಸ್‌ಬುಕ್ ಮೂಲಕ ಕಿಡಿಕಾರಿದ್ದಾರೆ.
ವಿಜಯಪುರ, (ಅ.21): ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಸಿಎಂ ಬಿಎಸ್‌ವೈ ವಿರುದ್ಧ ಸಿಡಿದೆದ್ದಿದ್ದು, ಫೇಸ್‌ಬುಕ್‌ನಲ್ಲಿ ಮತ್ತೆ ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದಾರೆ.
ಅಪ್ಪನ ಹೆಸರಿಂದ ರಾಜ್ಯಭಾರ ಮಾಡುವವರೇ ಉತ್ತರ ಕರ್ನಾಟಕದವರ ಬಗ್ಗೆ ಹಗುರವಾಗಿ ಮಾತನಾಡಿದರೆ ಜನರು ಕ್ಷಮಿಸುವುದಿಲ್ಲ. ಎಚ್ಚರ' ಎಂದು ತಮ್ಮ ಬೆಂಬಲಿಗ ರಾಘವ ಅಣ್ಣಿಗೇರಿ ಎಂಬುವವರು ಮಾಡಿರುವ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.
3 ವರ್ಷ ಬಿಎಸ್‌ವೈ ರಾಜ್ಯದ ಸಿಎಂ, ಬದಲಾವಣೆ ಮಾತೇ ಇಲ್ಲ: ಗುಡುಗಿದ ಬಿಜೆಪಿ ಸಾರಥಿ!
ವಿಜಯೇಂದ್ರ ಒಬ್ಬನೇ ಉಪ ಚುನಾವಣೆ ಗೆಲ್ಲುವುದಾದರೆ, ನರೇಂದ್ರ ಮೋದಿ, ಅಮಿತ್ ಶಾ, ನಳಿನ್ ಕುಮಾರ್ ಕಟೀಲ್ ಹಾಗೂ ರಾಷ್ಟ್ರೀಯ ಹಾಗೂ ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಾತ್ರವೇನು? ಮಾನ್ಯ ಮುಖ್ಯಮಂತ್ರಿಗಳೇ ಉತ್ತರಿಸುವಿರಾ? ಹಗಲಿರುಳು ಪಕ್ಷಕ್ಕಾಗಿ ಶ್ರಮಿಸುತ್ತಿರುವವರ ನಿಷ್ಠಾವಂತ ಕಾರ್ಯಕರ್ತರ ಪಾಡೇನು? ಪುತ್ರ ವ್ಯಾಮೋಹದ ಹೇಳಿಕೆ ಕೊಡುವುದನ್ನು ಬಿಟ್ಟು,ತಕ್ಷಣ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರವಾಗಿ ಎಂಬ ಬೆಂಬಲಿಗರ ಪೋಸ್ಟ್ ಅನ್ನು ಶೇರ್ ಮಾಡುವ ಮೂಲಕ ಮತ್ತೆ ಸಿಎಂ ವಿರುದ್ಧ ತೊಡೆಟ್ಟಿದ್ದಾರೆ.
ಈಗಾಗಲೇ ಕೇಂದ್ರ ನಾಯಕರಿಗೆ ಯಡಿಯೂರಪ್ಪನವರ ಬೇಸರವಾಗಿದ್ದಾರೆ. ಮುಂದಿನ ಸಿಎಂ ಉತ್ತರ ಕರ್ನಾಟಕದವನ್ನ ಮಾಡಲಾಗುವುದು ಎಂದು ಮೋದಿ ಅವರೇ ನನಗೆ ಭರವಸೆ ನೀಡಿದ್ದಾರೆಂದು ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿಯೇ ಹೇಳಿದ್ದರು.
ಇದು ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಅಲ್ಲದೇ ರೇಣುಕಾಚಾರ್ಯ ಸೇರಿದಂತೆ ಸಿಎಂ ಆಪ್ತ ನಾಯಕರು ಬಸನಗೌಡ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ಅಶಿಸ್ತು ಪ್ರದರ್ಶಿಸಿದರೆ ಕ್ರಮಕೈಗೊಳ್ಳಲಾಗುವುದು ಎಂದು ಸ್ವತಃ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಆದ್ರೆ, ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಯತ್ನಾಳ್ ತಮ್ಮ ಮಾತಿನ ವರಸೆ ಮುಂದುವರೆಸಿದ್ದು, ಇದು ಮುಂದಿನ ದಿನಗಳಲ್ಲಿ ಯಾವ ಮಟ್ಟಕ್ಕೆ ಹೋಗುತ್ತದೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.
"