Asianet Suvarna News Asianet Suvarna News

ಅಂಗಡಿ ಕುಟುಂಬಕ್ಕೇ ಬೆಳಗಾವಿ ಬಿಜೆಪಿ ಟಿಕೆಟ್‌?: ಹೈಕಮಾಂಡ್‌ ನಡೆ ಬಗ್ಗೆ ಕುತೂಹಲ!

ಅಂಗಡಿ ಕುಟುಂಬಕ್ಕೇ ಬೆಳಗಾವಿ ಬಿಜೆಪಿ ಟಿಕೆಟ್‌?| ವರಿಷ್ಠರಿಗೆ ಸಂದೇಶ| ಕಮಾಂಡ್‌ ನಡೆ ಬಗ್ಗೆ ಕುತೂಹಲ| ಸತೀಶ್‌ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ ಕಸರತ್ತು

BJP May Give Belagavi Ticket To Suresh ANgadi Family Members pod
Author
Bangalore, First Published Mar 24, 2021, 7:42 AM IST

 

ಬೆಂಗಳೂರು(ಮಾ.24): ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ಸತೀಶ್‌ ಜಾರಕಿಹೊಳಿ ಅವರು ಸ್ಪರ್ಧಿಸುವುದು ಬಹುತೇಕ ಖಚಿತವಾಗುತ್ತಿದ್ದಂತೆಯೇ ಆಡಳಿತಾರೂಢ ಬಿಜೆಪಿಯಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವ ಕಸರತ್ತು ಆರಂಭಗೊಂಡಿದೆ.

ಅಕಾಲಿಕವಾಗಿ ನಿಧನ ಹೊಂದಿದ ಕೇಂದ್ರ ಸಚಿವರಾಗಿದ್ದ ಸುರೇಶ್‌ ಅಂಗಡಿ ಕುಟುಂಬಕ್ಕೆ ಟಿಕೆಟ್‌ ನೀಡುವ ಬಗ್ಗೆ ಪಕ್ಷದ ರಾಜ್ಯ ನಾಯಕರು ಒಲವು ತೋರುತ್ತಿದ್ದು, ಪಕ್ಷದ ಹೈಕಮಾಂಡ್‌ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಇದುವರೆಗಿನ ಬೆಳವಣಿಗೆಗಳನ್ನು ಆಧರಿಸಿ ಹೇಳುವುದಾದರೆ ಅಂಗಡಿ ಅವರ ಕುಟುಂಬಕ್ಕೆ ಟಿಕೆಟ್‌ ನೀಡುವ ಬಗ್ಗೆ ವರಿಷ್ಠರಿಗೆ ಹೆಚ್ಚಿನ ಆಸಕ್ತಿ ಇಲ್ಲ. ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡದೆ ಬೇರೆಯವರಿಗೆ ಅವಕಾಶ ಕಲ್ಪಿಸೋಣ ಎಂಬ ಅಭಿಪ್ರಾಯ ಹೊಂದಿದ್ದಾರೆ. ಆದರೆ, ರಾಜ್ಯ ನಾಯಕರಲ್ಲಿ ಈ ಬಗ್ಗೆ ಮಿಶ್ರ ಅಭಿಪ್ರಾಯವಿದೆ. ಹೀಗಾಗಿಯೇ ರಾಜ್ಯ ಬಿಜೆಪಿಯ ಕೋರ್‌ ಕಮಿಟಿ ಸಭೆಯಲ್ಲಿ ಅಂಗಡಿ ಕುಟುಂಬಕ್ಕೆ ಟಿಕೆಟ್‌ ನೀಡಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಹೈಕಮಾಂಡ್‌ಗೆ ಬಿಡುವ ನಿರ್ಣಯ ಕೈಗೊಳ್ಳಲಾಗಿತ್ತು. ಜೊತೆಗೆ ಡಾ.ರವಿ ಪಾಟೀಲ್‌, ಎಂ.ಬಿ.ಜಿರಲಿ, ಮಹಾಂತೇಶ್‌ ಕವಟಗಿಮಠ, ರಮೇಶ್‌ ಕತ್ತಿ ಮೊದಲಾದವರ ಹೆಸರುಗಳ ಬಗ್ಗೆಯೂ ಚರ್ಚೆ ನಡೆಸಿ ಹೈಕಮಾಂಡ್‌ಗೆ ಶಿಫಾರಸು ಕಳುಹಿಸಿತ್ತು.

ಕೋರ್‌ ಕಮಿಟಿ ಸಭೆ ನಡೆದ ಸಂದರ್ಭ ಕಾಂಗ್ರೆಸ್‌ನ ಅಭ್ಯರ್ಥಿ ಇನ್ನೂ ಅಂತಿಮಗೊಂಡಿರಲಿಲ್ಲ. ಈಗಲೂ ಅಧಿಕೃತವಾಗಿ ಪ್ರಕಟವಾಗಿಲ್ಲವಾದರೂ ಸತೀಶ್‌ ಜಾರಕಿಹೊಳಿ ಅವರು ಅಭ್ಯರ್ಥಿಯಾಗುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ.

ಸತೀಶ್‌ ಜಾರಕಿಹೊಳಿ ಕಣಕ್ಕಿಳಿಯಬಹುದು ಎಂಬುದು ಸ್ಪಷ್ಟವಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಮರುಚರ್ಚೆ ಆರಂಭವಾಗಿದೆ. ಸತೀಶ್‌ ಜಾರಕಿಹೊಳಿ ಅವರ ವಿರುದ್ಧ ಪಕ್ಷದಿಂದ ಹೊಸಬರನ್ನು ಕಣಕ್ಕಿಳಿಸಿ ‘ರಿಸ್ಕ್‌’ ತೆಗೆದುಕೊಳ್ಳುವ ಬದಲು ಅಂಗಡಿ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡುವುದು ಸೂಕ್ತ. ಅದರಲ್ಲೂ ಅಂಗಡಿ ಅವರ ಪತ್ನಿ ಮಂಗಳಾ ಅವರನ್ನೇ ಕಣಕ್ಕಿಳಿಸುವುದರಿಂದ ಅನುಕಂಪದ ಆಧಾರದ ಮೇಲೆ ಸುಲಭವಾಗಿ ಜಯ ಗಳಿಸಬಹುದು ಎಂಬ ವಾದವನ್ನು ಹಲವು ಮುಖಂಡರು ಮಂಡಿಸಿದ್ದಾರೆ. ಇದನ್ನು ಪಕ್ಷದ ವರಿಷ್ಠರಿಗೂ ತಲುಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಂತಿಮ ರಣತಂತ್ರ

- ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸತೀಶ್‌ ಜಾರಕಿಹೊಳಿ ಸ್ಪರ್ಧೆ ಬಹುತೇಕ ಖಚಿತ

- ಹೀಗಾಗಿ ಬಿಜೆಪಿಯಿಂದಲೂ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕಾದ ಅನಿವಾರ‍್ಯತೆ

- ಸುರೇಶ್‌ ಅಂಗಡಿ ನಿಧನದಿಂದ ತೆರವಾದ ಕ್ಷೇತ್ರದಲ್ಲಿ ಅವರ ಕುಟುಂಬದವರೇ ಸ್ಪರ್ಧಿಸಲಿ ಎಂದು ರಾಜ್ಯ ಬಿಜೆಪಿ ಒಲವು

- ಕುಟುಂಬಕ್ಕೆ ಟಿಕೆಟ್‌ ನೀಡಲು ಹೈಕಮಾಂಡ್‌ ಒಪ್ಪುತ್ತಾ?

Follow Us:
Download App:
  • android
  • ios