ರಾಜ್ಯ ವಿಧಾನಸಭೆ ಚುನಾವಣೆ ಮತದಾನಕ್ಕೆ ಇನ್ನು ಒಂದು ತಿಂಗಳು ಬಾಕಿ ಇದೆ. ಪ್ರಣಾಳಿಕೆ ಸಂಬಂಧ ವಿಭಾಗ, ಜಿಲ್ಲೆ, ತಾಲೂಕುವಾರು ಸಭೆಗಳು ಆಗಿವೆ. ರಾಜ್ಯ ಹಾಗೂ ದೇಶಕ್ಕೆ ನಮ್ಮ ಪ್ರಣಾಳಿಕೆ ಮಾದರಿಯಾಗಲಿದೆ. ಹೊಸತನ, ಬದುಕು ಕಟ್ಟಿಕೊಡುವ ರೀತಿ ಪ್ರಣಾಳಿಕೆ ಇರಲಿದೆ ಎಂದ ಕೆ.ಸುಧಾಕರ್‌. 

ಬೆಂಗಳೂರು(ಏ.11):  ಮುಂದಿನ ವಾರ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿ ಆರೋಗ್ಯ ಸಚಿವ ಹಾಗೂ ಬಿಜೆಪಿ ಪ್ರಣಾಳಿಕೆ ಅಭಿಯಾನದ ಸಂಚಾಲಕ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ವಿಧಾನಸಭೆ ಚುನಾವಣೆ ಮತದಾನಕ್ಕೆ ಇನ್ನು ಒಂದು ತಿಂಗಳು ಬಾಕಿ ಇದೆ. ಪ್ರಣಾಳಿಕೆ ಸಂಬಂಧ ವಿಭಾಗ, ಜಿಲ್ಲೆ, ತಾಲೂಕುವಾರು ಸಭೆಗಳು ಆಗಿವೆ. ರಾಜ್ಯ ಹಾಗೂ ದೇಶಕ್ಕೆ ನಮ್ಮ ಪ್ರಣಾಳಿಕೆ ಮಾದರಿಯಾಗಲಿದೆ. ಹೊಸತನ, ಬದುಕು ಕಟ್ಟಿಕೊಡುವ ರೀತಿ ಪ್ರಣಾಳಿಕೆ ಇರಲಿದೆ ಎಂದರು.

ಬಿಜೆಪಿ ಜನಹಿತ ಬಯಸುವ ಪ್ರಣಾಳಿಕೆ ರೂಪಿಸಲಿದೆ: ಸಚಿವ ಸುಧಾಕರ್‌

ಅಂಗೈಯಲ್ಲಿ ಚಂದ್ರ ತೋರಿಸುವ ಕೆಲಸ ಅಂತೂ ಮಾಡಲ್ಲ. ನಮ್ಮ ಆರ್ಥಿಕ ಪರಿಸ್ಥಿತಿ, ಶಕ್ತಿಗೆ ತಕ್ಕಂತೆ ಪ್ರಣಾಳಿಕೆ ಇರಲಿದೆ. ರಾಮ ರಾಜ್ಯದ ಪರಿಕಲ್ಪನೆಗೆ ಪೂರಕ ಇರಲಿದೆ. ಗ್ರೇಟರ್‌ ಬೆಂಗಳೂರು, ಕಿತ್ತೂರು, ಕಲ್ಯಾಣ ಕರ್ನಾಟಕ, ಬಯಲು ಸೀಮೆ ಹೀಗೆ ವಲಯವಾರು ಪ್ರಣಾಳಿಕೆ ಮಾಡಲಿದ್ದೇವೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.