ಮಂಡ್ಯ: ಜೆಡಿಎಸ್‌ ಭದ್ರಕೋಟೆಯಲ್ಲಿ ಕಮಲ ಅರಳಿಸಲು ಕಸರತ್ತು

2018ರ ಚುನಾವಣೆಯಲ್ಲಿ ಏಳೂ ಕ್ಷೇತ್ರಗಳಲ್ಲಿ ಗೆದ್ದು ಜೆಡಿಎಸ್‌ ಹೊಸ ದಾಖಲೆ ನಿರ್ಮಿಸಿತ್ತು. ಈ ಬಾರಿ, ಭದ್ರಕೋಟೆ ಉಳಿಸಿಕೊಳ್ಳಲು ಜೆಡಿಎಸ್‌ ಹೋರಾಟ ನಡೆಸಿದ್ದರೆ, ಜಿಲ್ಲೆಯೊಳಗೆ ನೆಲೆಯನ್ನೇ ಕಳೆದುಕೊಂಡಿದ್ದ ಕಾಂಗ್ರೆಸ್‌, ಪುಟಿದೇಳಲು ರಾಜಕೀಯ ತಂತ್ರಗಳನ್ನು ರೂಪಿಸುತ್ತಿದೆ. ಜೆಡಿಎಸ್‌ ಭದ್ರಕೋಟೆಯಲ್ಲಿ ಕಮಲ ಅರಳಿಸಲು ಬಿಜೆಪಿ ಕಸರತ್ತು ನಡೆಸಿದೆ.

BJP Making Political Strategies For Win in Mandya grg

ಮಂಡ್ಯ ಮಂಜುನಾಥ್‌

ರಾಮ​ನ​ಗರ(ಏ.29):  ಮಂಡ್ಯ ಜಿಲ್ಲೆ ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರ. ಮಳವಳ್ಳಿ ಹೊರತುಪಡಿಸಿ ಉಳಿದ ಆರು ಕ್ಷೇತ್ರಗಳಲ್ಲಿ ಎಲ್ಲಾ ಪಕ್ಷಗಳೂ ಒಕ್ಕಲಿಗ ಅಭ್ಯರ್ಥಿಗಳಿಗೇ ಟಿಕೆಟ್‌ ನೀಡಿರುವುದರಿಂದ ಒಕ್ಕಲಿಗರ ಮತಗಳು ಹರಿದು ಹಂಚಿ ಹೋಗಲಿವೆ. ಹೀಗಾಗಿ, ದಲಿತರು, ಕುರುಬರು ಸೇರಿದಂತೆ ಇತರ ಹಿಂದುಳಿದ ವರ್ಗದವರ ಮತಗಳೇ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. 2018ರ ಚುನಾವಣೆಯಲ್ಲಿ ಏಳೂ ಕ್ಷೇತ್ರಗಳಲ್ಲಿ ಗೆದ್ದು ಜೆಡಿಎಸ್‌ ಹೊಸ ದಾಖಲೆ ನಿರ್ಮಿಸಿತ್ತು. ಈ ಬಾರಿ, ಭದ್ರಕೋಟೆ ಉಳಿಸಿಕೊಳ್ಳಲು ಜೆಡಿಎಸ್‌ ಹೋರಾಟ ನಡೆಸಿದ್ದರೆ, ಜಿಲ್ಲೆಯೊಳಗೆ ನೆಲೆಯನ್ನೇ ಕಳೆದುಕೊಂಡಿದ್ದ ಕಾಂಗ್ರೆಸ್‌, ಪುಟಿದೇಳಲು ರಾಜಕೀಯ ತಂತ್ರಗಳನ್ನು ರೂಪಿಸುತ್ತಿದೆ. ಜೆಡಿಎಸ್‌ ಭದ್ರಕೋಟೆಯಲ್ಲಿ ಕಮಲ ಅರಳಿಸಲು ಬಿಜೆಪಿ ಕಸರತ್ತು ನಡೆಸಿದೆ.

ಮಂಡ್ಯ:
ಮೊದಲ ಬಾರಿಗೆ ಚತುಷ್ಕೋನ ಸ್ಪರ್ಧೆ:

ಕಾಂಗ್ರೆಸ್‌-ಜೆಡಿಎಸ್‌ ನಡುವೆ ನೇರ ಹಣಾಹಣಿ ಇಲ್ಲಿ ಸಾಮಾನ್ಯ. ಆದರೆ, ಈ ಬಾರಿ, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಯ ಸ್ಪರ್ಧೆಯಿಂದ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‌ನಿಂದ ಪಿ.ರವಿಕುಮಾರ್‌ ಗಣಿಗ, ಜೆಡಿಎಸ್‌ನಿಂದ ಬಿ.ಆರ್‌.ರಾಮಚಂದ್ರ, ಬಿಜೆಪಿಯಿಂದ ಅಶೋಕ್‌ ಜಯರಾಂ ಹಾಗೂ ಜೆಡಿಎಸ್‌ ಟಿಕೆಟ್‌ ಸಿಗದಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೆ.ವಿ.ಶಂಕರಗೌಡರ ಮೊಮ್ಮಗ ಕೆ.ಎಸ್‌.ವಿಜಯಾನಂದ ನಡುವೆ ಗೆಲುವಿಗೆ ತೀವ್ರ ಪೈಪೋಟಿ ಇದೆ.

ರಾಮ​ನ​ಗರ: ಡಿಕೆಶಿಗೆ ಅಶೋಕ್‌, ಎಚ್‌ಡಿಕೆಗೆ ಸಿಪಿವೈ ಸವಾಲು..!

ಜೆಡಿಎಸ್‌ ಅಭ್ಯರ್ಥಿ ಬಿ.ಆರ್‌.ರಾಮಚಂದ್ರ ಅವರು ಅಂತಿಮ ಘಳಿಗೆಯಲ್ಲಿ ಟಿಕೆಟ್‌ ಪಡೆದು ರಣಾಂಗಣಕ್ಕೆ ಇಳಿದಿದ್ದಾರೆ. ಪ್ರಬಲ ಪೈಪೋಟಿ ನಡೆಸುತ್ತಿರುವ ನಾಲ್ಕು ಮಂದಿಯೂ ಯುವಕರೇ ಆಗಿದ್ದಾರೆ. ಇವರ ನಡುವೆ ಸರ್ವೋದಯ ಕರ್ನಾಟಕ ಪಕ್ಷದ ಎಸ್‌.ಸಿ.ಮಧುಚಂದನ್‌ ಕೂಡ ಯುವಕರೇ ಆಗಿದ್ದು, ಪ್ರಬಲ ಪೈಪೋಟಿ ನೀಡಲು ಹೋರಾಡುತ್ತಿದ್ದಾರೆ.

ಶ್ರೀರಂಗಪಟ್ಟಣ:
ಮತ್ತದೇ ಕುಟುಂಬದವರ ನಡುವೆ ಹಣಾಹಣಿ:

ಎ.ಸಿ.ಶ್ರೀಕಂಠಯ್ಯ ಹಾಗೂ ಬಂಡಿಸಿದ್ದೇಗೌಡ ಕುಟುಂಬದ ನಡುವೆಯೇ ಹಲವು ದಶಕಗಳಿಂದ ನೇರ ಹಣಾಹಣಿ ಏರ್ಪಡುತ್ತಿದೆ. ಈ ಹೋರಾಟ ಅಪ್ಪ-ಅಮ್ಮಂದಿರಿಂದ ಮಕ್ಕಳಿಗೆ ಶಿಫ್‌್ಟಆಗಿದೆ. ಜೆಡಿಎಸ್‌ನಿಂದ ಎರಡು ಬಾರಿ ಶಾಸಕರಾಗಿದ್ದ ರಮೇಶ್‌ ಬಂಡಿಸಿದ್ದೇಗೌಡ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೋತು ಈಗ ಮತ್ತೆ ಸ್ಪರ್ಧಿಸಿದ್ದಾರೆ. 2018ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದ ರವೀಂದ್ರ ಶ್ರೀಕಂಠಯ್ಯ ಈಗ ಮರು ಆಯ್ಕೆ ಬಯಸಿದ್ದಾರೆ. ನಾಲ್ಕು ದಶಕಗಳಿಂದ ಇವೆರಡು ಕುಟುಂಬ ಬಿಟ್ಟು ಅಧಿಕಾರ ಬೇರೆಯವರ ಪಾಲಾಗಿಲ್ಲ. ಈಗ ಸುಮಲತಾ ಬೆಂಬಲಿಗ ಎಸ್‌.ಸಚ್ಚಿದಾನಂದ ಬಿಜೆಪಿ ಸೇರಿ ಇಬ್ಬರಿಗೂ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.
ಜೆಡಿಎಸ್‌ ಟಿಕೆಟ್‌ ಸಿಗದಿದ್ದರಿಂದ ಸಿಡಿದೆದ್ದಿರುವ ತಗ್ಗಹಳ್ಳಿ ವೆಂಕಟೇಶ್‌, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅಭಿವೃದ್ಧಿ ಕೆಲಸಗಳು ಕೈ ಹಿಡಿಯಬಹುದು ಎಂದು ರವೀಂದ್ರ ಶ್ರೀಕಂಠಯ್ಯ ನಂಬಿದ್ದರೆ, ಕಾಂಗ್ರೆಸ್‌ ಪರ ವಾತಾವರಣವಿರುವುದರಿಂದ ತಮಗೆ ಅನುಕೂಲವಾಗಬಹುದು ಎನ್ನುವುದು ರಮೇಶ್‌ ಅನಿಸಿಕೆ. ಎರಡೂ ಕುಟುಂಬದವರನ್ನು ತಿರಸ್ಕರಿಸಿ ಈ ಬಾರಿ ತಮ್ಮ ಕೈ ಹಿಡಿಯುವರೆಂಬ ವಿಶ್ವಾಸದಲ್ಲಿ ಎಸ್‌.ಸಚ್ಚಿದಾನಂದ ಇದ್ದಾರೆ. ತಗ್ಗಹಳ್ಳಿ ವೆಂಕಟೇಶ್‌ ಮತ್ತು ಎಸ್‌.ಸಚ್ಚಿದಾನಂದ ಪಡೆಯುವ ಒಟ್ಟು ಮತಗಳನ್ನು ಆಧರಿಸಿ ಇಬ್ಬರಲ್ಲಿ ಯಾರು ಗೆಲ್ಲುವರು ಎನ್ನುವುದು ನಿರ್ಧಾರವಾಗಲಿದೆ.

ಮದ್ದೂರು:
ತಮ್ಮಣ್ಣ, ಉದಯ್‌ ನಡುವೆ ಸ್ವಾಮಿ ಕದನ:

ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಹಾಲಿ ಶಾಸಕ ಡಿ.ಸಿ.ತಮ್ಮಣ್ಣ ಅವರಿಗೆ ಕಾಂಗ್ರೆಸ್‌ ಅಭ್ಯರ್ಥಿ ಕದಲೂರು ಉದಯ್‌ ನೇರ ಎದುರಾಳಿಯಾಗಿದ್ದಾರೆ. ಇವರಿಬ್ಬರ ನಡುವೆ ಬಿಜೆಪಿ ಅಭ್ಯರ್ಥಿ ಎಸ್‌.ಪಿ.ಸ್ವಾಮಿ ಮತಬೇಟೆಯಲ್ಲಿ ತೊಡಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸಹೋದರನ ಪುತ್ರ ಎಸ್‌.ಗುರುಚರಣ್‌ಗೆ ಕೈ ಟಿಕೆಟ್‌ ತಪ್ಪಿಸಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಉರುಳಲು ಕಾರಣರಾದರೆಂಬ ಆರೋಪಕ್ಕೆ ಗುರಿಯಾಗಿದ್ದರ ನಡುವೆಯೂ ಉದ್ಯಮಿ ಕದಲೂರು ಉದಯ್‌ಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಹಿಂದೆ ಡಿ.ಸಿ.ತಮ್ಮಣ್ಣನವರ ಬಲಗೈ ಭಂಟನಂತಿದ್ದ ಎಸ್‌.ಪಿ.ಸ್ವಾಮಿ ಬಿಜೆಪಿಯಿಂದ ಅಖಾಡ ಪ್ರವೇಶಿಸಿದ್ದಾರೆ. 1999ರಿಂದ 2018ರವರೆಗೆ ನಾಲ್ಕು ಬಾರಿ ಶಾಸಕರಾಗಿರುವ ಡಿ.ಸಿ.ತಮ್ಮಣ್ಣನವರಿಗೆ ಇದು ಕೊನೆಯ ಚುನಾವಣೆಯಾಗಿದ್ದು, ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ವಂಚಿತ ಎಸ್‌.ಗುರುಚರಣ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಕಾಂಗ್ರೆಸ್‌ಗೇ ಚೆಕ್‌ ಇಟ್ಟಿದ್ದಾರೆ. ಸಂಸದೆ ಸುಮಲತಾ ಅಂಬರೀಶ್‌ ಅವರು ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಮನೆಗೆ ತೆರಳಿ ಬೆಂಬಲ ಕೋರಿದ್ದಾರೆ. ಆದರೆ, ಅವರು ಚುನಾವಣೆಯಲ್ಲಿ ತಮ್ಮ ಬೆಂಬಲ ಯಾರಿಗೆ ಎನ್ನುವುದನ್ನು ಇದುವರೆಗೆ ಸ್ಪಷ್ಟಪಡಿಸಿಲ್ಲ.

ಮೇಲುಕೋಟೆ:
ಸಿ.ಎಸ್‌.ಪುಟ್ಟರಾಜು, ದರ್ಶನ್‌ ಪುಟ್ಟಣ್ಣಯ್ಯ ನಡುವೆ ನೇರ ಕದನ:

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹಿಂದಿನಿಂದಲೂ ಜೆಡಿಎಸ್‌ ಹಾಗೂ ರೈತ ಸಂಘದ ನಡುವೆ ನೇರ ಹಣಾಹಣಿ ಏರ್ಪಡುತ್ತಿದೆ. ಅಭಿವೃದ್ಧಿಯಿಂದಲೇ ಕ್ಷೇತ್ರದ ಜನರ ವಿಶ್ವಾಸಕ್ಕೆ ಪಾತ್ರರಾಗಿರುವ ಹಾಲಿ ಶಾಸಕ ಸಿ.ಎಸ್‌.ಪುಟ್ಟರಾಜು ಅವರು ಕ್ಷೇತ್ರದೊಳಗೆ ಬಿಗಿಹಿಡಿತ ಸಾಧಿಸಿದ್ದಾರೆ. ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿರುವ ದರ್ಶನ್‌ ಪುಟ್ಟಣ್ಣಯ್ಯ ಅವರು ಎರಡನೇ ಬಾರಿ ಗೆಲುವಿನ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿದಿದ್ದಾರೆ. 2018ರ ಚುನಾವಣೆಯಲ್ಲಿ ಶಾಸಕರಾಗಿದ್ದ ಕೆ.ಎಸ್‌.ಪುಟ್ಟಣ್ಣಯ್ಯನವರ ಸಾವಿನ ಅನುಕಂಪ ಅವರ ಮಗನ ಕೈಹಿಡಿಯಲಿಲ್ಲ. ಈ ಬಾರಿ ಅವರು ಗೆಲುವಿನ ನಿರೀಕ್ಷೆಯಲ್ಲಿದ್ದು, ಸಾಕಷ್ಟುಶ್ರಮವಹಿಸಿ ಮತಬೇಟೆಯಲ್ಲಿ ತೊಡಗಿದ್ದಾರೆ. ದರ್ಶನ್‌ಗೆ ಈ ಬಾರಿಯೂ ಕಾಂಗ್ರೆಸ್‌, ಬೆಂಬಲ ಘೋಷಿಸಿದೆ. ಬಿಜೆಪಿ ಅಭ್ಯರ್ಥಿ ಡಾ.ಎನ್‌.ಇಂದ್ರೇಶ್‌, ಮೊಟ್ಟಮೊದಲ ಬಾರಿಗೆ ಕ್ಷೇತ್ರದೊಳಗೆ ಕಮಲ ಅರಳಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ನಾಗಮಂಗಲ:
ಚಲುವರಾಯಸ್ವಾಮಿ, ಸುರೇಶ್‌ಗೌಡ ನಡುವೆ ನೇರ ಹಣಾಹಣಿ:

ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಹಾಗೂ ಜೆಡಿಎಸ್‌ನ ಹಾಲಿ ಶಾಸಕ ಕೆ.ಸುರೇಶ್‌ಗೌಡ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಮಾಜಿ ಶಾಸಕ ಎಲ….ಆರ್‌.ಶಿವರಾಮೇಗೌಡ ಅವರು ಈ ಬಾರಿ ತಮ್ಮ ಪತ್ನಿ ಸುಧಾ ಶಿವರಾಮೇಗೌಡ ಅವರನ್ನು ಬಿಜೆಪಿಯಿಂದ ಕಣಕ್ಕೆ ಇಳಿಸಿದ್ದಾರೆ. ಸಮಾಜ ಸೇವಕ ಫೈಟರ್‌ ರವಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲವೆಂಬ ಆರೋಪಕ್ಕೆ ಶಾಸಕ ಕೆ.ಸುರೇಶ್‌ಗೌಡ ಗುರಿಯಾಗಿದ್ದಾರೆ.

ಕಾಂಗ್ರೆಸ್‌ ಹಿಂದಿನ ಚುನಾವಣೆಗಿಂತ ಹೆಚ್ಚು ಸಂಘಟನಾತ್ಮಕವಾಗಿ ಕೆಲಸ ಮಾಡುತ್ತಿದೆ. ಕ್ಷೇತ್ರದೊಳಗೆ ಸುಧಾ ಶಿವರಾಮೇಗೌಡ, ಫೈಟರ್‌ ರವಿ, ವಿಧಾನಪರಿಷತ್‌ ಮಾಜಿ ಸದಸ್ಯ ಎನ್‌.ಅಪ್ಪಾಜಿಗೌಡ ಇವರೆಲ್ಲರೂ ಶಾಸಕ ಕೆ ಸುರೇಶ್‌ಗೌಡ ಅವರನ್ನು ಟಾರ್ಗೆಟ್‌ ಮಾಡಿಕೊಂಡಿರುವುದರಿಂದ ಜೆಡಿಎಸ್‌ ಗೆಲುವಿಗೆ ಹರಸಾಹಸ ನಡೆಸುತ್ತಿದೆ. ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವ ಸುಧಾ ಶಿವರಾಮೇಗೌಡ ಅವರಿಗೆ ಕ್ಷೇತ್ರದೊಳಗೆ ಒಳ್ಳೆಯ ಹೆಸರಿದೆ.

ಮಳವಳ್ಳಿ:
ಹಳೆಯ ಕಲಿಗಳ ಹೊಸ ಕದನ:

ಮಳವಳ್ಳಿ ಮೀಸಲು ಕ್ಷೇತ್ರದಲ್ಲಿ ಮತ್ತೆ ಹಳೆಯ ಕಲಿಗಳ ನಡುವೆ ಹೊಸ ಕದನ ಏರ್ಪಟ್ಟಿದೆ. ಕಾಂಗ್ರೆಸ್‌ನಿಂದ ಪಿ.ಎಂ.ನರೇಂದ್ರಸ್ವಾಮಿ, ಜೆಡಿಎಸ್‌ನಿಂದ ಹಾಲಿ ಶಾಸಕ ಡಾ.ಕೆ. ಅನ್ನದಾನಿ ನಡುವೆ ನೇರ ಕದನ ನಡೆಯುತ್ತಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂಬ ಆರೋಪಕ್ಕೆ ಶಾಸಕ ಡಾ.ಕೆ.ಅನ್ನದಾನಿ ಗುರಿಯಾಗಿದ್ದು, ತಾವು ಶಾಸಕರಾಗಿದ್ದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ನರೇಂದ್ರಸ್ವಾಮಿ ಮತಯಾಚಿಸುತ್ತಿದ್ದಾರೆ.
ಇವರಿಬ್ಬರ ಜೊತೆಗೆ ಬಿಜೆಪಿ ಅಭ್ಯರ್ಥಿ ಸಿ. ಮುನಿರಾಜು ಗೆಲುವಿಗಾಗಿ ಪೈಪೋಟಿಗೆ ಬಿದ್ದಿದ್ದಾರೆ. ದಲಿತರನ್ನು ಹೊರತುಪಡಿಸಿ ವೀರಶೈವ-ಲಿಂಗಾಯಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಸಣ್ಣ ಸಮುದಾಯಗಳು ನಿರ್ಣಾಯಕ ಪಾತ್ರ ವಹಿಸಲಿವೆ.

ಬಿಜೆಪಿ ಗೆದ್ದರೆ ‘ಒಂದೇ ಮದುವೆ, ಎರಡೇ ಮಗು’ ಕಾಯ್ದೆ: ಯತ್ನಾಳ್‌

ಕೆ.ಆರ್‌.ಪೇಟೆ:
ಮೂಲ ಜೆಡಿಎಸ್‌ನವರ ನಡುವೆ ಹೋರಾಟ:

ಮೂಲ ಜೆಡಿಎಸ್‌ನವರೇ ಈ ಬಾರಿ ಕ್ಷೇತ್ರದಲ್ಲಿನ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳಾಗಿದ್ದಾರೆ. ಜೆಡಿಎಸ್‌ ಟಿಕೆಟ್‌ ವಂಚಿತ ಬಿ.ಎಲ್‌.ದೇವರಾಜು ಕಾಂಗ್ರೆಸ್‌ ಸೇರಿ ಅಭ್ಯರ್ಥಿಯಾಗಿದ್ದರೆ, ಕುಮಾರಸ್ವಾಮಿಗೆ ಪ್ರೀತಿ ಪಾತ್ರರಾಗಿರುವ ಎಚ್‌.ಟಿ.ಮಂಜು, ಜೆಡಿಎಸ್‌ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್‌ನಿಂದ ಎರಡು ಬಾರಿ ಗೆದ್ದಿದ್ದ ಕೆ.ಸಿ.ನಾರಾಯಣಗೌಡ ಅವರು 2019ರಲ್ಲಿ ಜೆಡಿಎಸ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ನಂತರ ನಡೆದ ಕೆ.ಆರ್‌.ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆಲುವು ಸಾಧಿಸಿದರು. ಇದೀಗ ಬಿಜೆಪಿ ಅಭ್ಯರ್ಥಿಯಾಗಿ ಮತ್ತೆ ಕಣಕ್ಕಿಳಿದಿರುವ ನಾರಾಯಣಗೌಡರು ಸತತ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಜೆಡಿಎಸ್‌ನಿಂದ ಎರಡು ಬಾರಿ ಸ್ಪರ್ಧಿಸಿ ಸೋತಿರುವ ಬಿ.ಎಲ್‌.ದೇವರಾಜು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಕ್ಷೇತ್ರದೊಳಗೆ ಒಕ್ಕಲಿಗ ಮತಗಳನ್ನು ಬಿಟ್ಟರೆ ಕುರುಬ ಸಮುದಾಯದ ಮತಗಳು ಹೆಚ್ಚಾಗಿದ್ದು, ಈ ಮತಗಳ ಜೊತೆಗೆ ಸಣ್ಣ ಸಮುದಾಯದ ಮತಗಳನ್ನು ಕ್ರೋಢೀಕರಿಸಿಕೊಂಡವರಿಗೆ ವಿಜಯಲಕ್ಷ್ಮೇ ಒಲಿಯುವಳೆಂಬ ಮಾತುಗಳಿವೆ.

Latest Videos
Follow Us:
Download App:
  • android
  • ios