ರಾಮನಗರ: ಡಿಕೆಶಿಗೆ ಅಶೋಕ್, ಎಚ್‌ಡಿಕೆಗೆ ಸಿಪಿವೈ ಸವಾಲು..!
ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕ್ಷೇತ್ರದಲ್ಲಿಯೇ ಕಟ್ಟಿಹಾಕಿ, ಮಣಿಸಲು ಬಿಜೆಪಿ ತಂತ್ರ ರೂಪಿಸಿದ್ದು, ಕನಕಪುರದಲ್ಲಿ ಡಿಕೆಶಿ ವಿರುದ್ಧ ಸಚಿವ ಅಶೋಕ್ ಅವರನ್ನು, ಚನ್ನಪಟ್ಟಣದಲ್ಲಿ ಎಚ್‌ಡಿಕೆ ವಿರುದ್ಧ ಸಿ.ಪಿ.ಯೋಗೇಶ್ವರ್ ಅವರನ್ನು ಕಣಕ್ಕಿಳಿಸಿದೆ.
ಎಂ.ಅಫ್ರೋಜ್ ಖಾನ್
ರಾಮನಗರ(ಏ.29): ರೇಷ್ಮೆನಗರಿ ರಾಮನಗರ ಜಿಲ್ಲೆ ಮೇಲ್ನೋಟಕ್ಕೆ ಜೆಡಿಎಸ್ನ ಭದ್ರಕೋಟೆಯಂತೆ ಕಂಡು ಬಂದರೂ, ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್, ತನ್ನ ಹಿಡಿತ ಸಾಧಿಸಿದೆ. ಬಿಜೆಪಿ ಅಸ್ತಿತ್ವಕ್ಕಾಗಿ ತಿಣುಕಾಡುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 4 ಕ್ಷೇತ್ರಗಳ ಪೈಕಿ ಜೆಡಿಎಸ್ 3ರಲ್ಲಿ, ಕಾಂಗ್ರೆಸ್ 1ರಲ್ಲಿ ಗೆದ್ದಿತ್ತು. ಈ ಬಾರಿ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕ್ಷೇತ್ರದಲ್ಲಿಯೇ ಕಟ್ಟಿಹಾಕಿ, ಮಣಿಸಲು ಬಿಜೆಪಿ ತಂತ್ರ ರೂಪಿಸಿದ್ದು, ಕನಕಪುರದಲ್ಲಿ ಡಿಕೆಶಿ ವಿರುದ್ಧ ಸಚಿವ ಅಶೋಕ್ ಅವರನ್ನು, ಚನ್ನಪಟ್ಟಣದಲ್ಲಿ ಎಚ್‌ಡಿಕೆ ವಿರುದ್ಧ ಸಿ.ಪಿ.ಯೋಗೇಶ್ವರ್ ಅವರನ್ನು ಕಣಕ್ಕಿಳಿಸಿದೆ.
ರಾಮನಗರ:
ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್?
ಮೂವರು ಮುಖ್ಯಮಂತ್ರಿಗಳನ್ನು ನಾಡಿಗೆ ಕೊಡುಗೆಯಾಗಿ ನೀಡಿದ ರಾಮನಗರ, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಅದೃಷ್ಟದ ಕ್ಷೇತ್ರ. ಕಳೆದ 22 ವರ್ಷಗಳಿಂದ ಕುಟುಂಬ ರಾಜಕಾರಣಕ್ಕೆ ನೆಲೆಯಾಗಿ ನಿಂತಿದೆ. ತಾತ ದೇವೇಗೌಡ, ಮಗ ಕುಮಾರಸ್ವಾಮಿ, ಸೊಸೆ ಅನಿತಾ ಕುಮಾರಸ್ವಾಮಿ ಬಳಿಕ, ಈಗ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯವರು ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ. ಈ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಇದಕ್ಕೆ ಬಿಜೆಪಿಯೂ ಕೈ ಜೋಡಿಸಿದ್ದು, ಚಕ್ರವ್ಯೂಹ ರಚಿಸಿದೆ.
ಡಿಕೆಶಿಗೆ ಠಕ್ಕರ್ ಕೊಡಬಲ್ಲ ವ್ಯಕ್ತಿ ನಾನೇ ಆಗಿದ್ದು, ಕನಕಪುರ ಪಾರು ಮಾಡುವೆ: ಸಚಿವ ಅಶೋಕ್
ಜೆಡಿಎಸ್ ಅಭ್ಯರ್ಥಿ ನಿಖಿಲ್ ಮತ್ತು ಕಾಂಗ್ರೆಸ್ ಹುರಿಯಾಳು ಇಕ್ಬಾಲ್ ಹುಸೇನ್ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಇವರಿಬ್ಬರ ಸೋಲು, ಗೆಲುವಿನಲ್ಲಿ ಬಿಜೆಪಿಯ ಗೌತಮ್ ಗೌಡ ಅವರು ನಿರ್ಣಾಯಕ ಪಾತ್ರ ವಹಿಸುವುದರಲ್ಲಿ ಅನುಮಾನವಿಲ್ಲ.
ಕ್ಷೇತ್ರ ನಿರೀಕ್ಷಿತ ಅಭಿವೃದ್ಧಿ ಹೊಂದದ ಕಾರಣ ಕುಮಾರಸ್ವಾಮಿ ಬಗ್ಗೆ ಜನರಲ್ಲಿ ಸ್ವಲ್ಪ ಮಟ್ಟಿನ ಬೇಸರವಿದೆ. ಕಳೆದ ಚುನಾವಣೆಯಲ್ಲಿನ ಸೋಲು, ಕೋವಿಡ್ ಸಂಕಷ್ಟದಲ್ಲಿ ಜನರಿಗೆ ಸ್ಪಂದಿಸಿದಕ್ಕೆ ಇಕ್ಬಾಲ್ ಪರ ಅನುಕಂಪವಿದೆ. ಬಿಜೆಪಿ ಅಭಿವೃದ್ಧಿ ಹೆಸರಿನಲ್ಲಿ ಮತದಾರರನ್ನು ತನ್ನತ್ತ ಸೆಳೆಯುವ ಯತ್ನ ಮಾಡುತ್ತಿದೆ. ಇಕ್ಬಾಲ್ ಹುಸೇನ್‌ಗೆ ಮುಸ್ಲಿಂ ಸಮುದಾಯದ ಮತಗಳು ಬೆನ್ನಿಗಿವೆ. ನಿಖಿಲ್ ಮತ್ತು ಗೌತಮ್ ಗೌಡ ನಡುವೆ ಒಕ್ಕಲಿಗ ಮತಗಳು ಇಬ್ಭಾಗವಾಗುವ ಸಾಧ್ಯತೆಗಳಿವೆ.
ಚನ್ನಪಟ್ಟಣ:
ಎಚ್‌ಡಿಕೆ-ಸಿಪಿವೈ ನಡುವೆ ಬಿಗ್ ಫೈಟ್:
ಬೊಂಬೆನಗರಿ ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ನಡುವೆ ತೀವ್ರ ಪೈಪೋಟಿಯಿದೆ. ಇಲ್ಲಿ ಕಾಂಗ್ರೆಸ್‌ನ ಗಂಗಾಧರ್ ಸ್ಪರ್ಧೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.
ಕಳೆದ ಬಾರಿ ಚನ್ನಪಟ್ಟಣದಿಂದ ಗೆದ್ದಿದ್ದ ಕುಮಾರಸ್ವಾಮಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು. ಸೋಲಿನಿಂದ ಹತಾಶೆಗೊಂಡಿದ್ದ ಯೋಗೇಶ್ವರ್, ದೋಸ್ತಿ ಸರ್ಕಾರವನ್ನು ಉರುಳಿಸಿ ಸೇಡು ತೀರಿಸಿಕೊಂಡಿದ್ದರು. ಇದೀಗ ಉಭಯ ನಾಯಕರು ಒಬ್ಬರನ್ನೊಬ್ಬರನ್ನು ಹಣಿಯುವ ತವಕದಲ್ಲಿದ್ದಾರೆ. ಇಲ್ಲಿನ ಮತದಾರರು ಪಕ್ಷಕ್ಕಿಂತ ವ್ಯಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಹೀಗಾಗಿಯೇ ಯೋಗೇಶ್ವರ್ ಅವರು 1999ರಲ್ಲಿ ಪಕ್ಷೇತರರಾಗಿ, 2004, 2008ರಲ್ಲಿ ಕಾಂಗ್ರೆಸ್, 2011ರಲ್ಲಿ ಬಿಜೆಪಿ, 2013ರಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. ಈಗ 8ನೇ ಬಾರಿಗೆ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದಾರೆ.
ಈ ಮಧ್ಯೆ, ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ಒಳ ಒಪ್ಪಂದವಾಗಿರುವ ವದಂತಿಯಿದೆ. ಒಕ್ಕಲಿಗ ಮತದಾರರ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಮತಗಳು ನಿರ್ಣಾಯಕ.
ಮಾಗಡಿ:
ಮೂರನೇ ಬಾರಿಗೆ ಮಂಜುನಾಥ-ಬಾಲಕೃಷ್ಣ ಮುಖಾಮುಖಿ:
ನಾಡಪ್ರಭು ಕೆಂಪೇಗೌಡರ ನೆಲವಾದ ಮಾಗಡಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಾಂಪ್ರದಾಯಿಕ ಎದುರಾಳಿಗಳು. ಆದರೆ, ಈ ಬಾರಿ ಬಿಜೆಪಿ, ಎರಡೂ ಪಕ್ಷಗಳ ನಿದ್ದೆಗೆಡಿಸಿದೆ. ಜೆಡಿಎಸ್ನ ಹಾಲಿ ಶಾಸಕ ಎ.ಮಂಜುನಾಥ್ ಮರುಆಯ್ಕೆ ಬಯಸಿದರೆ, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಸ್ಪರ್ಧೆಗೆ ಇಳಿದಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಸಾದ್ ಗೌಡ ಅವರು ಯಾರ ಮತಬ್ಯಾಂಕಿಗೆ ಕೈ ಹಾಕುತ್ತಾರೊ ಎಂಬ ಆತಂಕ ಕಾಂಗ್ರೆಸ್-ಜೆಡಿಎಸ್‌ನ್ನು ಕಾಡುತ್ತಿದೆ.
1994ರಲ್ಲಿ ಬಿಜೆಪಿಯಿಂದ ಗೆದ್ದು ರಾಜಕೀಯ ಜೀವನದ ಇನ್ನಿಂಗ್‌್ಸ ಆರಂಭಿಸಿದ ಬಾಲಕೃಷ್ಣ, ನಂತರದ ಮೂರು ಚುನಾವಣೆಗಳಲ್ಲಿ ಜೆಡಿಎಸ್‌ನಿಂದ ಆಯ್ಕೆಯಾದವರು. ಕಳೆದ ಬಾರಿ ಕಾಂಗ್ರೆಸ್ ಸೇರಿ, ಆಡಳಿತ ವಿರೋಧಿ ಅಲೆಯಲ್ಲಿ ಪರಾಭವಗೊಂಡರು. ಈ ಬಾರಿ ಮತದಾರರು ಕೈ ಹಿಡಿಯುವ ವಿಶ್ವಾಸ ಹೊಂದಿದ್ದಾರೆ. ಎ.ಮಂಜುನಾಥ್ ಅವರು, 2018ರಲ್ಲಿ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ವಲಸೆ ಬಂದು ಜಯಶಾಲಿಯಾದರು. ಈಗ ಮೂರನೇ ಬಾರಿ ಬಾಲಕೃಷ್ಣ ಅವರಿಗೆ ಮುಖಾಮುಖಿಯಾಗಿದ್ದಾರೆ.
ಕಳೆದ ಮೂರುವರೆ ವರ್ಷ ಜಿಲ್ಲೆಯ ಆಡಳಿತದ ಚುಕ್ಕಾಣಿ ಹಿಡಿದಿರುವ ಸಚಿವ ಸಿ.ಎನ್.ಅಶ್ವತ್ಥನಾರಾಯಣ, ಮೂಲತ: ಮಾಗಡಿಯವರು. ಹೀಗಾಗಿ ಅವರಿಗೂ ಇದು ಪ್ರತಿಷ್ಠೆಯ ಕಣ. ತವರಿನಲ್ಲಿ ಪ್ರಸಾದ್ ಗೌಡಗೆ ಟಿಕೆಟ್ ಕೊಡಿಸಿದ್ದು, ಅವರನ್ನು ಗೆಲ್ಲಿಸುವ ಅನಿವಾರ್ಯತೆಯಲ್ಲಿದ್ದಾರೆ. ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರದಲ್ಲಿ ದಲಿತರು, ಮುಸ್ಲಿಮರು, ಲಿಂಗಾಯತರು, ಕುರುಬರು ನಿರ್ಣಾಯಕರು.
ಕನಕಪುರ:
ಸಾಮ್ರಾಟನಿಗೆ ಚಕ್ರಾಧಿಪತಿಯನ್ನು ಮಣಿಸುವ ಟಾಸ್ಕ್
8ನೇ ಬಾರಿ ವಿಧಾನಸಭೆ ಪ್ರವೇಶಿಸಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಉಮೇದಿನಲ್ಲಿರುವ ಡಿ.ಕೆ.ಶಿವಕುಮಾರ್ ಅವರನ್ನು ಸ್ವ ಕ್ಷೇತ್ರದಲ್ಲಿಯೇ ಕಟ್ಟಿಹಾಕಲು ಬಿಜೆಪಿ, ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಕಣಕ್ಕಿಳಿಸಿ ಪ್ರಬಲ ಪೈಪೋಟಿಯೊಡ್ಡುತ್ತಿದೆ. ಸಾಂಪ್ರದಾಯಿಕ ಮತಗಳನ್ನು ಉಳಿಸಿಕೊಳ್ಳಲು ಜೆಡಿಎಸ್, ನಾಗರಾಜುಗೆ ಟಿಕೆಟ್ ನೀಡಿದೆ.
Karnataka election:ಬೆಳಗಾವಿಯಲ್ಲಿ ಹಾಲಿ, ಮಾಜಿ ಸಿಎಂ ಮುಖಾಮುಖಿ
ಪದ್ಮನಾಭನಗರದಲ್ಲಿ ಅಶೋಕ್ ಅವರಂತೆಯೇ ಕನಕಪುರದ ಮೇಲೆ ಡಿ.ಕೆ.ಶಿವಕುಮಾರ್ ಹಿಡಿತ ಹೊಂದಿದ್ದಾರೆ. ಇವರಿಬ್ಬರೂ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರು. ಇದನ್ನು ಅರಿತಿರುವ ಬಿಜೆಪಿ ವರಿಷ್ಠರು, ಅಶೋಕ್‌ಗೆ ಒಕ್ಕಲಿಗರ ಬಾಹುಳ್ಯವುಳ್ಳ ಕ್ಷೇತ್ರದಲ್ಲಿ ತಮ್ಮ ನಾಯಕತ್ವ ನಿರೂಪಿಸುವ ಟಾಸ್‌್ಕ ನೀಡಿದಂತಿದೆ.
ಕನಕಪುರ ನಗರಸಭೆಯಲ್ಲಿ ಒಂದು ಸ್ಥಾನ ಗೆದ್ದಿರುವುದನ್ನು ಬಿಟ್ಟರೆ ಈ ಕ್ಷೇತ್ರದಲ್ಲಿ ಬಿಜೆಪಿಗೆ ಯಾವುದೇ ಅಸ್ತಿತ್ವವಿಲ್ಲ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಂದಿನಿ ಗೌಡ ಕೇವಲ 6,273 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದರು. ಕ್ಷೇತ್ರದಲ್ಲಿ ಹಣ-ಜಾತಿ ಬಲ ಮೀರಿ ಮರಾಠ ಸಮುದಾಯದ ಪಿಜಿಆರ್ ಸಿಂಧ್ಯಾ, ಸತತವಾಗಿ 6 ಬಾರಿ ಗೆಲುವು ಸಾಧಿಸಿದ್ದರು. ಬಳಿಕ, ಸಾತನೂರು ಕ್ಷೇತ್ರದಿಂದ ಕನಪುರಕ್ಕೆ ವಲಸೆ ಬಂದ ಡಿಕೆಶಿ, ಏಕಚಕ್ರಾಧಿಪತಿಯಂತೆ ಮೆರೆಯುತ್ತಿದ್ದಾರೆ. ಒಕ್ಕಲಿಗರೇ ಕ್ಷೇತ್ರದ ನಿರ್ಣಾಯಕ ಮತದಾರರು. ಪರಿಶಿಷ್ಟಜಾತಿ/ಪಂಗಡದ ಜನಸಂಖ್ಯೆ ನಂತರದ ಸ್ಥಾನದಲ್ಲಿದೆ. ಲಿಂಗಾಯತರು, ಮುಸ್ಲಿಮರು, ಇತರ ಹಿಂದುಳಿದ ಸಮುದಾಯದ ಮತಗಳು ಸಣ್ಣ ಪ್ರಮಾಣದಲ್ಲಿವೆ.