ಪ್ರಿಯಾಂಕ್ ಖರ್ಗೆ ಹೇಳಿಕೆ ಖಂಡಿಸಿ ಬಿಜೆಪಿ ಮಹಿಳಾ ಯುವ ಮೋರ್ಚಾ ಪ್ರತಿಭಟನೆ
ಸರ್ಕಾರಿ ಕೆಲಸ ಪಡೆಯಲು ಮಹಿಳೆಯರು ಮಂಚ ಹತ್ತಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ವಿರುದ್ಧ ಬಳ್ಳಾರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ ನಡೆಸಿದರು. ಪ್ರಿಯಾಂಕ್ ಖರ್ಗೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಬಳ್ಳಾರಿ (ಆ.19) : ಸರ್ಕಾರಿ ಕೆಲಸ ಪಡೆಯಲು ಮಹಿಳೆಯರು ಮಂಚ ಹತ್ತಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಕೂಡಲೇ ಇಡೀ ರಾಜ್ಯದ ಮಹಿಳೆಯರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ(Protest) ನಡೆಸಲಾಯಿತು. ಕಾಂಗ್ರೆಸ್‌ನ ಕೇಂದ್ರ ನಾಯಕರ ಪುತ್ರರಾದ ಪ್ರಿಯಾಂಕ ಖರ್ಗೆ ಅವರು ಮಹಿಳೆಯರ ಕುರಿತು ಅವಾಚ್ಯ ಶಬ್ದಗಳನ್ನಾಡಿದ್ದಾರೆ. ಈ ಮೂಲಕ ತಮ್ಮ ಸಂಸ್ಕೃತಿ-ಸಂಸ್ಕಾರ ಎಂತಹದ್ದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮಹಿಳೆಯರ ಕುರಿತು ಅತ್ಯಂತ ತುಚ್ಛವಾಗಿ ಮಾತನಾಡಿರುವ ಪ್ರಿಯಾಂಕ ಖರ್ಗೆ(Priyank Kharge) ಅವರ ನಡುವಳಿಕೆಯನ್ನು ಇಡೀ ರಾಜ್ಯದ ಮಹಿಳಾ ಸಮುದಾಯ ಖಂಡಿಸಿದ್ದು, ಮಹಿಳೆಯರಿಗೆ ಅಗೌರವವಾಗಿ ಮಾತನಾಡಿರುವ ಖರ್ಗೆ ಕೂಡಲೇ ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕಾಂಗ್ರೆಸ್‌ನವರು ಸಾಚಾ ಇದ್ದಾರಾ?: ಬಸನಗೌಡ ಪಾಟೀಲ ಯತ್ನಾಳ
ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡುವುದು ಯಾರಿಗೂ ಶೋಭೆ ತರುವುದಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮಹಿಳೆಯನ್ನು ತಾಯಿಯ ಸ್ಥಾನ ಮಾನ ನೀಡಿ ಗೌರವಿಸಲಾಗುತ್ತಿದೆ. ಆದರೆ, ಪ್ರಿಯಾಂಕ್ ಖರ್ಗೆ ಅವರು ಸರ್ಕಾರಿ ಕೆಲಸ ಪಡೆಯಲು ಮಹಿಳೆಯರು ಮಂಚ ಹತ್ತಬೇಕು ಎಂದು ಹೇಳಿಕೆ ನೀಡಿರುವುದರ ಹಿಂದೆ ಅವರು ಎಷ್ಟರ ಮಟ್ಟಿಗೆ ಮಹಿಳೆಯರಿಗೆ ಗೌರವ ನೀಡುತ್ತಾರೆ ಎಂಬುದು ಗೊತ್ತಾಗುತ್ತದೆ. ಅಷ್ಟೇ ಅಲ್ಲ ಕಾಂಗ್ರೆಸ್‌ನ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಮಹಿಳಾ ಮೋರ್ಚಾದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮೋರ್ಚಾದ ಜಿಲ್ಲಾಧ್ಯಕ್ಷೆ ಕೆ.ಸುಗುಣ ಮಾತನಾಡಿ, ಮಹಿಳೆಯರ ಕುರಿತಾಗ ಪ್ರಿಯಾಂಕ್ ಖರ್ಗೆ ಅವರು ನೀಡಿರುವ ಹೇಳಿಕೆಯನ್ನು ಯಾರೂ ಒಪ್ಪುವುದಿಲ್ಲ. ಮಾನಸಿಕ ಸ್ಥಿಮಿತ ಕಳೆದುಕೊಂಡವರು ಮಾತ್ರ ಈ ರೀತಿ ಮಾತನಾಡಲು ಸಾಧ್ಯ. ಪ್ರಿಯಾಂಕ್ ಖರ್ಗೆ ಅವರೇ ನಿಮ್ಮ ಮನೆಯಲ್ಲಿ ಸಹ ಮಹಿಳೆಯರು ಇದ್ದಾರೆ ಎಂಬುದನ್ನು ಮರೆಯಬೇಡಿ. ಮಹಿಳಾ ಸಮುದಾಯದ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡುವುದರಿಂದ ನೀವು ದೊಡ್ಡರಾಗುವುದಿಲ್ಲ ಎಂದು ಟೀಕಿಸಿದರು.
ಪ್ರಿಯಾಂಕ್ ಖರ್ಗೆ ‘ಲಂಚ ಮಂಚ’ ಹೇಳಿಕೆಗೆ ಬಿಜೆಪಿ ಕೆಂಡ
ಮಹಿಳಾ ಮೋರ್ಚಾದ ಜಿಲ್ಲಾ ಪದಾಧಿಕಾರಿಗಳಾದ ಪುಷ್ಪಾ ಚಂದ್ರಶೇಖರ್, ಪುಷ್ಪಲತಾ, ಬಿ.ಸುನಿತಾ, ಜ್ಯೋತಿ ಪ್ರಕಾಶ್, ಅನ್ನಪೂರ್ಣ, ಉಮಾದೇವಿ, ಸುಮಾರೆಡ್ಡಿ, ಬಿ.ರೂಪಶ್ರೀ, ಉಷಾ ಪಾಟೀಲ್, ಪಾರ್ವತಮ್ಮ, ಪುಷ್ಪಾ ಚಂದ್ರಶೇಖರ್, ಲತಾ ಆಗಲೂರು ಸೇರಿದಂತೆ ಮೋರ್ಚಾದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಕಳಿಸಿ ಕೊಡಲಾಯಿತು.