* ಬೊಮ್ಮಾಯಿ ಸರ್ಕಾರದ ಬಗ್ಗೆ ಸಿದ್ದರಾಮಯ್ಯ ಭವಿಷ್ಯ* ಸರ್ಕಾರ ಹೆಚ್ಚು ದಿನ ಉಳಿಯದು* ಅವರಾಗಿಯೇ ಬೀಳಬಹುದು, ನಾವಂತೂ ಬೀಳಿಸಲ್ಲ: ಸಿದ್ದು

ಮದ್ದೂರು(ಆ.11): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಬ್ಬರ್‌ ಸ್ಟ್ಯಾಂಪ್‌, ಅವರ ನೇತೃತ್ವದ ಸರ್ಕಾರದ ಬಗ್ಗೆ ಇನ್ನೂ 3 ತಿಂಗಳು ಏನನ್ನೂ ಮಾತನಾಡಲಾರೆ ಎಂದು ಈ ಹಿಂದೆ ಹೇಳಿಕೆ ಕೊಟ್ಟಿದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಇದೀಗ ಈ ಸರ್ಕಾರ ಹೆಚ್ಚು ದಿನ ಉಳಿಯುವುದು ಅನುಮಾನ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಂಡ್ಯ ಜಿಲ್ಲೆಯ ಶಿವಪುರದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಸರ್ಕಾರ ಎಷ್ಟುದಿನ ಇರುತ್ತೆ ಎಂದು ನಾನು ಜ್ಯೋತಿಷ್ಯ ಹೇಳುವುದಿಲ್ಲ. ಅವರಾಗಿಯೇ ಅವರು ಬೀಳಬಹುದು. ನಾವಂತೂ ಸರ್ಕಾರ ಬೀಳಿಸುವ ಪ್ರಯತ್ನ ಮಾಡುವುದಿಲ್ಲ ಎಂದರು.

ಬಿಜೆಪಿ ಸರ್ಕಾರ ಪೂರ್ಣಾವಧಿ ಪೂರೈಸುವುದೋ ಬಿಡುವುದೋ ನನಗೆ ಗೊತ್ತಿಲ್ಲ. ನಾನೇನು ಶಾಸ್ತ್ರ ಹೇಳುವುದಿಲ್ಲ. ಈಗ ಬೊಮ್ಮಾಯಿ ನೇತೃತ್ವದ ಸರ್ಕಾರ ರಚನೆಯಾಗಿ 10 ದಿನಗಳಷ್ಟೇ ಕಳೆದಿವೆ. ಇನ್ನು ಸ್ವಲ್ಪ ದಿನ ಏನಾಗಲಿದೆ ಅಂತ ಕಾದು ನೋಡೋಣ ಎಂದಷ್ಟೇ ಹೇಳಿದರು.

ಇದೇ ವೇಳೆಬಿಜೆಪಿ ಮತ್ತು ಜೆಡಿಎಸ್‌ಗಳದ್ದು ಒಂದು ರೀತಿಯ ಅಡ್ಜಸ್ಟ್‌ಮೆಂಟ್‌ ರಾಜಕಾರಣ ಎಂದು ಅವರು ಆರೋಪಿಸಿದರು. ಜೆಡಿಎಸ್‌ನವರು ಜಾತ್ಯತೀತ ತತ್ವದ ಮೇಲೆ ನಂಬಿಕೆ ಇಲ್ಲದವರು. ಅವರು ಸದಾ ಅವಕಾಶವಾದಿಗಳು. ಅಂತಹವರು ಯಾವಾಗ, ಏನು ಬೇಕಾದರೂ ಮಾಡುತ್ತಾರೆ. ಅವರ ಉಳಿವಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುವರು. ಅವರಿಗೆ ಯಾವುದೇ ತತ್ವ, ಸಿದ್ಧಾಂತ ಇಲ್ಲ. ಜೆಡಿಎಸ್‌ ಎಂಎಲ್‌ಎಗಳನ್ನು ಉಳಿಸಿಕೊಳ್ಳಲು ಸರ್ಕಾರದ ಮಟ್ಟದಲ್ಲಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಬಿಜೆಪಿ ಜೊತೆ ಚೆನ್ನಾಗಿರುತ್ತಾರೆ ಎಂದು ಲೇವಡಿ ಮಾಡಿದರು