ಬೆಂಗಳೂರು (ಏ.06):  ಸಿ.ಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೆಸರು ತಳುಕು ಹಾಕಿಕೊಳ್ಳುತ್ತಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಎಚ್ಚೆತ್ತುಕೊಂಡಿದೆ. ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಸಿಲುಕಿಸಲು ಶ್ರಮಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ಶುಭವಾಗಲಿ ಎಂದು ರಾಜ್ಯ ಬಿಜೆಪಿ ಘಟಕ ಟೀಕಿಸಿದೆ.

ಸೋಮವಾರ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ಸದನದಲ್ಲಿ ಸಿ.ಡಿ ಪ್ರಕರಣ ಪ್ರಸ್ತಾಪಿಸುವಾಗ ಶಿವಕುಮಾರ್‌ ಹೆಸರು ಪ್ರಕರಣದಲ್ಲಿ ಪ್ರಸ್ತಾಪವಾಗಿರಲಿಲ್ಲ. ಹೀಗಾಗಿ ಸದನದಲ್ಲಿ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ರೋಷಾವೇಶ ಪ್ರದರ್ಶಿಸಿದರು. ಈಗ ಷಡ್ಯಂತ್ರದಲ್ಲಿ ಶಿವಕುಮಾರ್‌ ಹೆಸರು ಕೇಳಿ ಬರುತ್ತಿದ್ದು, ಅವರು ಮೌನವಾಗಿದ್ದಾರೆ. ಆದರೆ, ಸಿದ್ದರಾಮಯ್ಯ ಮತ್ತೆ ಮತ್ತೆ ಕೆದಕುತ್ತಿದ್ದಾರೆ. ಸಿ.ಡಿ ಪ್ರಕರಣದಲ್ಲಿ ಶಿವಕುಮಾರ್‌ ಹೆಸರು ತಳಕು ಹಾಕಿಕೊಳ್ಳುತ್ತಲೇ ಸಿದ್ದರಾಮಯ್ಯ ಬಣ ಎಚ್ಚೆತ್ತುಕೊಂಡಿದೆ. ಮುಖ್ಯಮಂತ್ರಿ ಆಗುವ ಕನಸಿಗೆ ತೊಡಕಾಗಿರುವ ಶಿವಕುಮಾರ್‌ ಅವರನ್ನು ಮಣಿಸಲು ಸಿದ್ದರಾಮಯ್ಯ ಅವರಿಗೆ ಇದೊಂದು ಸದವಕಾಶ. ಈ ಪ್ರಕರಣದಲ್ಲಿ ಶಿವಕುಮಾರ್‌ ಅವರನ್ನು ಸಿಲುಕಿಸಲು ಶ್ರಮಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ಶುಭವಾಗಲಿ ಎಂದು ಲೇವಡಿ ಮಾಡಿದೆ.

ಸೀಡಿ ಲೇಡಿ - ಜಾರಕಿಹೊಳಿ ಏನೆಂದು ಕರೆಯುತ್ತಿದ್ದರು : ಏನೇನ್ ಉಡುಗೊರೆ ಕೊಟ್ಟಿದ್ದರು?

ಸಿ.ಡಿ ಪ್ರಕರಣದಲ್ಲಿ ಸಿದ್ದರಾಮಯ್ಯ ಬಣ ತೋರುತ್ತಿರುವ ಆಸಕ್ತಿಗೂ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರ ಹೇಳಿಕೆಗೂ ಪರಸ್ಪರ ಸಂಬಂಧ ಇದೆ. ಸಿ.ಡಿ ಷಡ್ಯಂತ್ರದಲ್ಲಿ ಡಿ.ಕೆ.ಶಿವಕುಮಾರ್‌ ಹೆಸರು ಬಂದಿರುವುದರಿಂದ ಪ್ರಕರಣವನ್ನು ಸಿದ್ದರಾಮಯ್ಯ ಬಣ ಮುನ್ನೆಲೆಗೆ ತರುತ್ತಿದ್ದಾರೆ. ಶಿವಕುಮಾರ್‌ ಕಳೆ ಕಳೆದುಕೊಂಡಷ್ಟೂಸಿದ್ದರಾಮಯ್ಯಗೆ ಲಾಭವಿದೆ. ಮಾಜಿ ಸಚಿವ ಎಚ್‌.ವೈ.ಮೇಟಿ ಪ್ರಕರಣದಲ್ಲಿ ಸಂತ್ರಸ್ತೆ ಪ್ರಕರಣ ದಾಖಲಿಸಿದರೂ ಎಫ್‌ಐಆರ್‌ ಕೂಡ ಮಾಡಿರಲಿಲ್ಲ, ವಿಚಾರಣೆ ಸಹ ನಡೆಸಿರಲಿಲ್ಲ. ಈಗ ಕಾಂಗ್ರೆಸ್‌ ಧ್ವನಿ ಎತ್ತಿರುತ್ತಿರುವುದು ಸಂತ್ರಸ್ತೆಗಾಗಿ ಅಲ್ಲ, ಸಿದ್ದರಾಮಯ್ಯಗಾಗಿ. ಶಿವಕುಮಾರ್‌ ಅವರನ್ನು ಸಿಕ್ಕಿಸಿ ಹಾಕಲು ಸಿದ್ದರಾಮಯ್ಯ ಪಕ್ಷದ ಅಧಿಕೃತ ಟ್ವೀಟರ್‌ ಖಾತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಆಪಾದಿಸಿದೆ.