'ವಿಶ್ವನಾಥ್ ರಾಜೀನಾಮೆ ನೀಡಿ, ಇಲ್ಲವೆ ಅಪಮಾನ ಎದುರಿಸಲು ಸಿದ್ಧರಾಗಿ'
* ವಿಶ್ವನಾಥ್‌ಗೆ ನಿಗಮಮಂಡಳಿ ಅಧ್ಯಕ್ಷರ ತಿರುಗೇಟು
* ದೇವರಾಜ ಅರಸರಿಂದ ಅಧಿಕಾರದ ಭಿಕ್ಷೆ ಪಡೆದ ವಿಶ್ವನಾಥ್
* ಯಡಿಯೂರಪ್ಪ ವಿಶ್ವಾಸದ ಹೃದಯಕ್ಕೆ ಘಾತುಕತನದಿಂದ ಇರಿಯುವ ದೂರ್ತತನ ಪ್ರದರ್ಶನ
ಬೆಂಗಳೂರು(ಜೂ.19): ಬಿಜೆಪಿ ಮತ್ತು ಯಡಿಯೂರಪ್ಪನವರಿಂದ ಪಡೆದ ವಿಧಾನ ಪರಿಷತ್ ಸದಸ್ಯತ್ವ ಸ್ಥಾನದ ಭಿಕ್ಷೆಯನ್ನು ರಾಜೀನಾಮೆ ಮೂಲಕ ಹಿಂದಿರುಗಿಸಿ ಗೌರವ ಉಳಿಸಿಕೊಳ್ಳಿ. ಇಲ್ಲವೇ ಬಿಜೆಪಿಯಿಂದ ಹೊರದೂಡುವ ಅಪಮಾನದ ಕ್ಷಣಗಳನ್ನು ಎದುರಿಸಲು ಸಿದ್ಧರಾಗಿ ಎಂದು ಸರ್ಕಾರದ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರಿಗೆ ತಿರುಗೇಟು ನೀಡಿದ್ದಾರೆ.
ಶುಕ್ರವಾರ ಕೆಆರ್‌ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ನೇತೃತ್ವದಲ್ಲಿ 11 ನಿಗಮ ಮಂಡಳಿಗಳ ಅಧ್ಯಕ್ಷರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ನಿಮಗೆ ನೈತಿಕತೆ ಇದ್ದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ನೀವು ಸಕ್ರಿಯ ರಾಜಕಾರಣದಿಂದ ದೂರ ಉಳಿದು ಯುವಕರನ್ನು ಉತ್ತೇಜಿಸಬೇಕಾಗಿತ್ತು ಎಂದು ಟಾಂಗ್ ಕೊಟ್ಟಿದ್ದಾರೆ.
'ಯಾರೋ ಮಾತನಾಡಿದ್ದಕ್ಕೆಲ್ಲ ನಾನು ರಿಯಾಕ್ಷನ್ ಕೊಡಲ್ಲ'
ಎಂಜಿನಿಯರ್ ಅಳಿಯನಿಗೆ ಆಯಕಟ್ಟಿನ ಹುದ್ದೆ ಕೊಡಿಸುವುದಕ್ಕಾಗಿ, ನಿಮ್ಮ ಮಕ್ಕಳ ರಾಜಕೀಯ ಭವಿಷ್ಯ ರೂಪಿಸುವುದಕ್ಕಾಗಿ, ನಿಮ್ಮ ನೆಂಟರಿಷ್ಟರಿಗೆ ಗುತ್ತಿಗೆ ಕೊಡಿಸುವುದಕ್ಕಾಗಿ ನಿಮ್ಮ ಇಡೀ ರಾಜಕೀಯ ಜೀವನ ಮೀಸಲಾಗಿರಿಸಿದ್ದೀರಿ ಎಂಬುದು ವಾಸ್ತವ ಸಂಗತಿ. ಕೆ.ಆರ್.ನಗರದಿಂದ ಪ್ರಾರಂಭವಾಗಿ ಹುಣಸೂರು ಆದಿಯಾಗಿ ಮೈಸೂರು ಜಿಲ್ಲೆಯನ್ನು ಸುತ್ತುವರೆದು ರಾಜಧಾನಿ ಬೆಂಗಳೂರಿನಲ್ಲಿ ಮಾರ್ದನಿಸುತ್ತಿರುವುದಕ್ಕೆ ನಾವು ಸಾಕ್ಷಿ ಒದಗಿಸಬಲ್ಲೆವು. ದೇವರಾಜ ಅರಸರಿಂದ ಅಧಿಕಾರದ ಭಿಕ್ಷೆ ಪಡೆದ ನೀವು ಅವರ ಬೆನ್ನಿಗೆ ಇರಿದು ಉಂಡ ಮನೆಗೆ ದ್ರೋಹ ಬಗೆವ ವಿದ್ರೋಹಿ ಸಂಸ್ಕೃತಿಯನ್ನು ಅಂದೇ ಆರಂಭಿಸಿದ್ದಿರಿ ಎಂದು ಹೀಗಳೆದಿದ್ದಾರೆ.
ವೀರೇಂದ್ರ ಪಾಟೀಲ್, ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ, ಎಚ್.ಡಿ.ದೇವೇಗೌಡ, ಇದೀಗ ರಾಜಕೀಯದಲ್ಲಿ ಪಾತಾಳಕ್ಕೆ ಬಿದ್ದಿದ್ದ ನಿಮ್ಮನ್ನು ಕನಿಕರದಿಂದ ಮೇಲೆತ್ತಿ ವಿಧಾನ ಪರಿಷತ್ ಸ್ಥಾನ ಕರುಣಿಸಿದ ಬಿಜೆಪಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರ ವಿಶ್ವಾಸದ ಹೃದಯಕ್ಕೆ ಘಾತುಕತನದಿಂದ ಇರಿಯುವ ದೂರ್ತತನ ಪ್ರದರ್ಶಿಸುತ್ತಿದ್ದೀರಿ. ಯಡಿಯೂರಪ್ಪ ಅವರ ವಯಸ್ಸಿನ ಬಗ್ಗೆ ಮಾತನಾಡುತ್ತಿರುವ ನಿಮಗೆಷ್ಟುವಯಸ್ಸು? ನೀವೊಬ್ಬ ಆದರ್ಶ ಪ್ರತಿಪಾದಿಸುವ ವ್ಯಕ್ತಿತ್ವದವರೇ ಆಗಿದ್ದರೆ ಬೆನ್ನುಹತ್ತಿದ ಬೇತಾಳದಂತೆ ಪರಿಪರಿಯಾಗಿ ಅಂಗಲಾಚಿ ಸಾಹಿತ್ಯ ಕ್ಷೇತ್ರದ ಧೀಮಂತರಿಗೆ ದಕ್ಕಬೇಕಾಗಿದ್ದ ವಿಧಾನಪರಿಷತ್ ಸದಸ್ಯತ್ವವನ್ನು ಇನ್ನೊಬ್ಬರಿಂದ ಬರೆಸಿಕೊಡ ಒಂದೆರಡು ಕಳಪೆ ಪುಸ್ತಕಗಳನ್ನು ಮುಂದಿಟ್ಟುಕೊಂಡು ಸಾಹಿತಿ ಎಂಬ ಹಣೆಪಟ್ಟಿ ಹಚ್ಚಿಕೊಂಡು ಎಂಎಲ್‌ಸಿ ಸ್ಥಾನವನ್ನು ಕಸಿದುಕೊಂಡಿದ್ದನ್ನು ಈ ರಾಜ್ಯದ ಜನತೆ ಹಾಗೂ ಸಾಹಿತ್ಯ ವಲಯ ಮರೆಯಲು ಸಾಧ್ಯವಿಲ್ಲ ಎಂದು ಆಪಾದಿಸಿದ್ದಾರೆ.