ಬೆಂಗಳೂರಿನಲ್ಲಿ 40 ಲಕ್ಷ ಲಂಚ ಪಡೆಯುವಾಗ ಬಿಡಬ್ಲ್ಯುಎಸ್‌ಎಸ್‌ ಮುಖ್ಯಲೆಕ್ಕ ಪರಿಶೋಧಕ, ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಪುತ್ರ ಎಂ.ವಿ.ಪ್ರಶಾಂತ್‌ ಮೇಲಿನ ಲೋಕಾಯುಕ್ತ ದಾಳಿ ರಾಜಕೀಯ ಜಟಾಪಟಿಗೆ ಕಾರಣವಾಗಿದ್ದು, ಕಾಂಗ್ರೆಸ್‌ ಅನಗತ್ಯವಾಗಿ ಈ ಪ್ರಕರಣವನ್ನು ರಾಜಕೀಯಗೊಳಿಸುತ್ತಿದೆ ಎಂದು ಬಿಜೆಪಿ ಮುಖಂಡರು ಟೀಕಿಸಿದ್ದಾರೆ. 

ಬೆಂಗಳೂರು (ಮಾ.04): ಬೆಂಗಳೂರಿನಲ್ಲಿ 40 ಲಕ್ಷ ಲಂಚ ಪಡೆಯುವಾಗ ಬಿಡಬ್ಲ್ಯುಎಸ್‌ಎಸ್‌ ಮುಖ್ಯಲೆಕ್ಕ ಪರಿಶೋಧಕ, ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಪುತ್ರ ಎಂ.ವಿ.ಪ್ರಶಾಂತ್‌ ಮೇಲಿನ ಲೋಕಾಯುಕ್ತ ದಾಳಿ ರಾಜಕೀಯ ಜಟಾಪಟಿಗೆ ಕಾರಣವಾಗಿದ್ದು, ಕಾಂಗ್ರೆಸ್‌ ಅನಗತ್ಯವಾಗಿ ಈ ಪ್ರಕರಣವನ್ನು ರಾಜಕೀಯಗೊಳಿಸುತ್ತಿದೆ ಎಂದು ಬಿಜೆಪಿ ಮುಖಂಡರು ಟೀಕಿಸಿದ್ದಾರೆ. ಅಲ್ಲದೆ, ಮಗ ಲಂಚ ತೆಗೆದುಕೊಂಡರೆ ಅಪ್ಪ ಏನು ಮಾಡಲು ಸಾಧ್ಯ ಎನ್ನುವ ಮೂಲಕ ಶಾಸಕರ ಪರ ಬ್ಯಾಟ್‌ ಬೀಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಕಾನೂನು ಸಚಿವ ಮಾಧುಸ್ವಾಮಿ, 40% ದಂಧೆ ಮಾಡೋಕೆ ಪ್ರಶಾಂತ್‌ ಮಂತ್ರಿಯಲ್ಲ. ಮಗ ಲಂಚ ತೆಗೆದುಕೊಂಡರೆ ಅಪ್ಪ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಈಶ್ವರಪ್ಪ, ತಿಹಾರ್‌ ಜೈಲಿಗೆ ಹೋಗಿ ಬಂದಿರುವ ಡಿ.ಕೆ.ಶಿವಕುಮಾರ್‌ಗೆ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಹಾಗೂ ಬೊಮ್ಮಾಯಿಯವರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ. ಕಾಂಗ್ರೆಸ್‌ ಅನಗತ್ಯವಾಗಿ ಈ ಪ್ರಕರಣವನ್ನು ರಾಜಕೀಯಗೊಳಿಸುತ್ತಿದೆ ಎಂದು ತಿರುಗೇಟು ನೀಡಿದರು.

ಇವರು ನಾಯಕರಾ? ನಾಲಾಯಕರಾ ಜನರೇ ತೀರ್ಮಾನ ಮಾಡಬೇಕು: ಸಿದ್ದರಾಮಯ್ಯ

ಶಿವಮೊಗ್ಗದಲ್ಲಿ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಬೀದರ್‌ನಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌, ನಮ್ಮ ಸರ್ಕಾರ ಲೋಕಾಯುಕ್ತಕ್ಕೆ ಪುನರ್‌ ಜನ್ಮ ನೀಡುವ ಕೆಲಸ ಮಾಡಿದೆ. ಲೋಕಾಯುಕ್ತ ಆಗಲೇ ಇದ್ದಿದ್ದರೆ ಕಾಂಗ್ರೆಸ್‌ನವರೆಲ್ಲ ಜೈಲಿನಲ್ಲಿರಬೇಕಾಗಿತ್ತು. ಕಾಂಗ್ರೆಸ್‌ನವರಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ ಎಂದು ಹರಿಹಾಯ್ದಿದ್ದಾರೆ. ಇದೇ ವೇಳೆ, ಕೃಷಿ ಸಚಿವ ಸಿ.ಸಿ.ಪಾಟೀಲ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಇನ್ನಿತರ ಸಚಿವರು, ಬಿಜೆಪಿ ನಾಯಕರು ಶಾಸಕರ ಪರ ಬ್ಯಾಟ್‌ ಬೀಸಿದ್ದಾರೆ.

ಮಾಡಾಳ್‌ ತಂದೆ, ಮಗನಿಗೆ ‘ಲೆಕ್ಕದ ಚೀಟಿ’ ಕಂಟಕ: ಭ್ರಷ್ಟಾಚಾರದ ಸುಳಿಗೆ ಸಿಲುಕಿರುವ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಮಾಡಾಳ್‌ ಪ್ರಶಾಂತ್‌ ಅವರ ಪಾಲಿಗೆ ‘ಚೀಟಿ’ಯೊಂದರಲ್ಲಿ ಬರೆದಿದ್ದ ಲೆಕ್ಕವು ಈಗ ಕಂಟಕವಾಗಿ ಪರಿಣಮಿಸಿದೆ. ನಗರದ ಕ್ರೆಸೆಂಟ್‌ ರಸ್ತೆಯಲ್ಲಿರುವ ಪ್ರಶಾಂತ್‌ಗೆ ಸೇರಿದ ಖಾಸಗಿ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ಸಂಜೆ ದಾಳಿ ನಡೆಸಿದ್ದಾಗ ಕಂತೆ ಕಂತೆ ಹಣ ಮತ್ತು ದಾಖಲೆಗಳ ಜತೆ ‘ಚೀಟಿ’ಯೊಂದು ಪತ್ತೆಯಾಗಿದೆ. ಈ ಚೀಟಿಯಲ್ಲಿ ಕೆಲವರ ಹೆಸರು ಬರೆದು ಅದರ ಮುಂದೆ ಲಕ್ಷಗಳಲ್ಲಿ ಹಣ ನಮೂದಿಸಲಾಗಿದೆ. 

ಎಲ್ಲೆಲ್ಲೋ ನಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣ ನಮಗೇಕೆ? ಜಿಲ್ಲೆಯಲ್ಲೇ ಸಾಕಷ್ಟು ಹಗರಣಗಳಿವೆ: ಸುಮಲತಾ

ಈ ಚೀಟಿ ಮುಂದಿಟ್ಟು ಲೋಕಾಯುಕ್ತ ಪೊಲೀಸರು ಶೋಧನೆಗೆ ಮುಂದಾಗಿರುವುದು ತಂದೆ-ಮಗನಿಗೆ ಮತ್ತಷ್ಟುಸಂಕಷ್ಟತಂದೊಡ್ಡಿದೆ ಎಂದು ಮೂಲಗಳು ತಿಳಿಸಿವೆ. ಪ್ರಶಾಂತ್‌ ಕಚೇರಿಯಲ್ಲಿ ಪತ್ತೆಯಾದ ಚೀಟಿಯಲ್ಲಿ ಪ್ರಸ್ತಾಪಿಸಿರುವ ಹೆಸರಿನ ವ್ಯಕ್ತಿಗಳ ಬಗ್ಗೆ ತನಿಖೆ ನಡೆದಿದೆ. ಈ ಚೀಟಿಯಲ್ಲಿ ನಮೂದಿಸಿರುವ ಹಣದ ವಹಿವಾಟಿನ ಮೂಲವನ್ನು ಪತ್ತೆ ಹಚ್ಚಲಾಗುತ್ತದೆ. ಡಿ.ಕೆ.ಶಿವಕುಮಾರ್‌ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಬಿಡದಿ ಈಗಲ್‌ಟನ್‌ ರೆಸಾರ್ಚ್‌ನಲ್ಲಿ ಸಿಕ್ಕಿದ ಹರಿದು ಬಿಸಾಕಿದ್ದ ಚೀಟಿಗಳು ಕೊನೆಗೆ ಶಿವಕುಮಾರ್‌ ಅವರಿಗೆ ಕಂಕಟವಾಗಿದ್ದವು.