ಕಾಂಗ್ರೆಸ್ ಗ್ಯಾರಂಟಿ ನಿಲ್ಲಿಸಲು ಬಿಜೆಪಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ: ಸಚಿವ ಚಲುವರಾಯಸ್ವಾಮಿ
ಪ್ರಪಂಚದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ರದ್ದುಗೊಳಿಸಲು ಬಿಜೆಪಿ-ಜೆಡಿಎಸ್ ನಾಯಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಮಂಡ್ಯ (ಏ.11): ಇಡೀ ಪ್ರಪಂಚದಲ್ಲಿಯೇ ಮೊದಲು ಕಾಂಗ್ರೆಸ್ ಪಕ್ಷದಿಂದ ಜಾರಿಗೆ ತರಲಾಗಿರುವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಕ್ಕಾಗಿ ಬಿಜೆಪಿ-ಜೆಡಿಎಸ್ ನಾಯಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಇಂಥವರಿಗೆ ನೀವು ವೋಟ್ ಹಾಕ್ತೀರಾ? ನಿಮ್ಮ ಗ್ಯಾರಂಟಿ ಮುಂದುವರೆಸುವ ಕಾಂಗ್ರೆಸ್‌ಗಾ? ಅಥವಾ ಗ್ಯಾರಂಟಿ ವಿರೋಧಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಗಾ? ಯೋಚನೆ ಮಾಡಿ ಮತ ಚಲಾವಣೆ ಮಾಡಿ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, 77 ವರ್ಷದ ನಂತರ ಮಂಡ್ಯ ಜಿಲ್ಲೆಗೆ ಸವಾಲು ಎದುರಾಗಿದೆ. ಸಮರ್ಥವಾಗಿ ಸವಾಲು ಎದುರಿಸುವ ಶಕ್ತಿ ಮಂಡ್ಯ ಜನರಿಗೆ ಇದೆ. ಇದು ಹಲವು ಬಾರಿ ನಿರೂಪಣೆ ಆಗಿದೆ. ಘಟಾನುಘಟಿಗಳನ್ನ ಸೋಲಿಸೋದು, ಗೆಲ್ಲಿಸೋದು ಜಿಲ್ಲೆಯ ಜನರಿಗೆ ಹೊಸದಲ್ಲ. ಸ್ವಾಭಿಮಾನ ವಿಚಾರ ಬಂದಾಗ ದುಡ್ಡು, ದೊಡ್ಡಸ್ತಿಕೆಯನ್ನ ಮಂಡ್ಯ ಜನ ನೋಡಲ್ಲ. ಮಂಡ್ಯ ಜನರು ನಿರ್ದಾಕ್ಷಿಣ್ಯವಾಗಿ ನಿರ್ಧಾರ ಮಾಡ್ತಾರೆ. ಸಿದ್ದರಾಮಯ್ಯ ಜಾತಿ ನಾಯಕ ಅಲ್ಲ. ಜಾತ್ಯಾತೀತವಾಗಿ ಎಲ್ಲಾ ಸಮುದಾಯಗಳಿಗೂ ಅನುದಾನ ನೀಡಿದ್ದಾರೆ ಎಂದರು.
ಪ್ರಪಂಚದಲ್ಲಿ ಮೊದಲನೆಯದಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಗ್ಯಾರಂಟಿ ಯೋಜನೆ ವಿರೋಧಿಸುವವರು ಬಿಜೆಪಿ ಮತ್ತು ಜೆಡಿಎಸ್. ಗ್ಯಾರಂಟಿ ನಿಲ್ಲಿಸಿ ಎನ್ನುವ ಬಿಜೆಪಿ ಜೆಡಿಎಸ್‌ಗೆ ಮತ ಹಾಕಬೇಕಾ? ಗ್ಯಾರಂಟಿ ನಿಲ್ಲಿಸಲು ಸುಪ್ರೀಂ ಕೋರ್ಟ್ ಮುಂದೆ ಹೋಗಿದ್ದಾರೆ. ಬಡವರ ಕಾರ್ಯಕ್ರಮ ನಿಲ್ಲಿಸಿ ಎನ್ನುವವರಿಗೆ ನಾಚಿಕೆ ಆಗಬೇಕು. ಕುಮಾರಸ್ವಾಮಿ ಅವರೇ ಜಿಲ್ಲೆಯ ಜನ ನಿಮ್ಮನ್ನು ಪ್ರೀತಿಸಿದ್ದಾರೆ. ನೀವು ಸಿಎಂ ಆಗಲು ಹೆಚ್ಚು ಸ್ಥಾನ ಗೆಲ್ಲಿಸಿದ್ದರು. ಆದರೆ, 2 ಬಾರಿ ಸಿಎಂ ಜಿಲ್ಲೆಗೆ ಏನು ಕೊಟ್ಟಿದ್ದೀರಿ? ಹೊಸ ಶುಗರ್ ಫ್ಯಾಕ್ಟರಿ ಕೊಟ್ರಾ? ಕೃಷಿ ವಿವಿ ಮಾಡಿದ್ರಾ? ಎಂದು ಪ್ರಶ್ನೆ ಮಾಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಮಂಡ್ಯದ ಸೊಸೆ ಸುಮಲತಾ ಅವರನ್ನ ಕೆ.ಆರ್.ಎಸ್ ಜಲಾಶಯಕ್ಕೆ ಅಡ್ಡಡ್ಡ ಮಲಗಿಸಿ ಎಂದಿದ್ದರು. ಅಂಬರೀಶ್ ಅವ್ರನ್ನ ಕೇಂದ್ರ, ರಾಜ್ಯದಲ್ಲಿ ಮಂತ್ರಿ ಮಾಡಿದ್ದು ಜೆಡಿಎಸ್ ಅಲ್ಲ ಕಾಂಗ್ರೆಸ್. ಇವತ್ತು ಸುಮಲತಾ ಮನೆಗೆ ಹೋಗಿ ಅಕ್ಕಾ ಅಂತಾರೆ. ಸುಮಲತಾ ಅವ್ರಿಗೆ ಬೆಂಬಲ ನೀಡ್ತಾರೋ ಇಲ್ವೋ ಅವರಿಗೆ ಬಿಟ್ಟ ವಿಚಾರ. ಸುಮಲತಾಗೆ ಇವರು ಯಾವ ರೀತಿ ಕಣ್ಣಲ್ಲಿ ನೀರು ಹಾಕಿಸಿದರು ನೆನಪು ಮಾಡಿಕೊಳ್ಳಲಿ. ಈಗ ಸಮರ್ಥ ನಾಯಕರಿಲ್ಲವೆಂದು ಮಂಡ್ಯಕ್ಕೆ ಬಂದಿದ್ದೀನಿ ಎಂದು ಹೇಳ್ತಾರೆ. ಪಕ್ಷ ಕಟ್ಟುವ ಶಕ್ತಿ ಮಂಡ್ಯ ಜೆಡಿಎಸ್ ನಾಯಕರಿಗೆ ಇಲ್ವಾ? ಜನ ಯಾವ ಕಾರಣಕ್ಕಾಗಿ ನಿಮಗೆ ಮತ ನೀಡಬೇಕು? ಎಂದು ಪ್ರಶ್ನಿಸುತ್ತಾ ಟೀಕೆ ಮಾಡಿದರು.
ಅಧಿಕಾರಕ್ಕಾಗಿ ಸುಳ್ಳು ಹೇಳುವ ಜಾಯಮಾನ ಕಾಂಗ್ರೆಸ್‌ನದಲ್ಲ: ಸಚಿವ ಡಿ.ಸುಧಾಕರ್
ಮುಂದಿನ ಸರದಿ ಡಿಕೆ ಶಿವಕುಮಾರ್‌ಗೂ ಇದೆ. ಬಿಜೆಪಿ, ಜೆಡಿಎಸ್‌ನಲ್ಲಿ ಒಕ್ಕಲಿಗರಿಗೆ ಅವಕಾಶ ಇದ್ಯಾ? ಪ್ರಜ್ವಲ್, ಕುಮಾರಸ್ವಾಮಿ, ಡಾ. ಮಂಜುನಾಥ್ ಎಲ್ಲರೂ ಒಂದೇ ಕುಟುಂಬದವರು. ಬಿಜೆಪಿಯಲ್ಲಿ ಡಾ. ಸುಧಾಕರ್, ಶೋಭಾ ಕರಂದ್ಲಾಜೆ ಬಿಟ್ಟರೆ ಬೇರೆ ಯಾವ ಒಕ್ಕಲಿಗರಿಗೆ ಅವಕಾಶ ಸಿಕ್ಕಿದೆ. ಒಕ್ಕಲಿಗರು ನಮ್ಮ ಪರ ಇದ್ದಾರೆ. ನನ್ನ ಆತ್ಮಸಾಕ್ಷಿ ಹೇಳುತ್ತಿದೆ ಎಲ್ಲಾ ವರ್ಗದ ಜನ ನಮ್ಮೊಂದಿಗಿದ್ದಾರೆ. ಯಾರಲ್ಲೂ ಅಸಮಾಧಾನ ಬೇಡ, ನೀವೆ ಅಭ್ಯರ್ಥಿ ರೀತಿ ಕೆಲಸ ಮಾಡಿ ಎಂದು ಕರೆ ನೀಡಿದರು.