ಬೆಂಗಳೂರು [ನ.04]:  ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಯಡಿ ಯೂರಪ್ಪ ನೀಡಿದ್ದಾರೆನ್ನಲಾದ ಹೇಳಿಕೆಯ ಆಡಿಯೋ ಬಹಿರಂಗಗೊಂಡ ಬಗ್ಗೆ ಆಂತರಿಕ ತನಿಖೆ ನಡೆಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಬಿಜೆಪಿ ಕಚೇರಿ ಯಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತ ನಾಡಿದ ಅವರು, ಪಕ್ಷದ ಆಂತರಿಕ ಸಭೆಯ ಹೇಳಿಕೆಯ ಆಡಿಯೋ ಬಹಿರಂಗ ಮಾಡಿರುವ ಸಂಬಂಧ ಎಲ್ಲವನ್ನೂ ಹೊರಗೆ ತರುತ್ತೇವೆ. ಆಂತರಿಕ ತನಿಖೆ ಸಹ ನಡೆಸಲಾಗುವುದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಿಯೋ ಮಾಡಿದ್ದು ಬಿಜೆಪಿಯವರೇ ಎನ್ನುವುದು ಸ್ಪಷ್ಟವಾಗಿಲ್ಲ. ಆಡಿಯೋ ಮಾಡಿದವರು ಬಿಜೆಪಿ ಕಾರ್ಯಕರ್ತರೇ ಎಂಬುದು ಎಲ್ಲಿ ಸ್ಪಷ್ಟವಾಗಿದೆ? ಪಕ್ಷದ ಕಡೆಯಿಂದ ಆಡಿಯೋ ಬಗ್ಗೆ ತನಿಖೆ ನಡೆಸುತ್ತೇವೆ ಎಂದರು.

‘ಅನರ್ಹರ ರಾಜೀನಾಮೆಗೂ ನನಗೂ ಸಂಬಂಧವಿಲ್ಲ’...

ಆಡಿಯೋ ಬಗ್ಗೆ ನಾವು ಚಿಂತೆ ಮಾಡುತ್ತಿಲ್ಲ. ಆಡಿಯೋ ಲಾಭ ಪಡೆದುಕೊಳ್ಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ಅದರಲ್ಲಿ ಅವರು ಯಶಸ್ವಿಯಾಗುವುದಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನರ್ಹರ  ಕುರಿತು ನೀಡಿರುವ ಹೇಳಿಕೆಯ ಆಡಿಯೋ ವಿರುದ್ಧ ಕಾಂಗ್ರೆಸ್ ಕಾನೂನು ಸಮರ ಮಾಡಬಹುದು. ಸಿದ್ದರಾಮಯ್ಯ ಕಾನೂನನ್ನು ಸರಿಯಾಗಿ ತಿಳಿದುಕೊಂಡಿಲ್ಲ. ಸುಳ್ಳು ಪ್ರಚಾರ ಮಾಡಲು ಹೊರಟ್ಟಿದ್ದಾರೆ. ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ. ಬಿಜೆಪಿ ಸರ್ಕಾರ ಪತನವಾದರೆ ಮುಖ್ಯಮಂತ್ರಿಯಾಗುವುದಾಗಿ ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದು, ದ್ರಾಕ್ಷಿ ಸಿಗದ ನರಿಯಂತಾಗಿದ್ದಾರೆ ಎಂದರು.