ಪೊಲೀಸ್‌ ಇಲಾಖೆಯ ಕೇಸರೀಕರಣ ಮಾಡಲು ಹೊರಟಿದ್ದೀರಾ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಚ್ಚರಿಕೆಗೆ ಬಿಜೆಪಿ ನಾಯಕರು ಗರಂ ಆಗಿದ್ದಾರೆ. ಕಾಂಗ್ರೆಸ್‌ನವರು ಪೊಲೀಸ್‌ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರಿಹಾಯ್ದಿದ್ದಾರೆ. 

ಬೆಂಗಳೂರು (ಮೇ.25): ಪೊಲೀಸ್‌ ಇಲಾಖೆಯ ಕೇಸರೀಕರಣ ಮಾಡಲು ಹೊರಟಿದ್ದೀರಾ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಚ್ಚರಿಕೆಗೆ ಬಿಜೆಪಿ ನಾಯಕರು ಗರಂ ಆಗಿದ್ದಾರೆ. ಕಾಂಗ್ರೆಸ್‌ನವರು ಪೊಲೀಸ್‌ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರಿಹಾಯ್ದಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಮಂಗಳವಾರದ ಸಭೆಯಲ್ಲಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. 

ಕೇಸರೀಕರಣ ಮಾಡುವ ಅವಕಾಶ ಕೊಡಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ಇಡೀ ದೇಶದಲ್ಲಿ ಕರ್ನಾಟಕ ಪೊಲೀಸ್‌ ಉತ್ತಮ ಹೆಸರು ಮಾಡಿದೆ. ನಮ್ಮ ಪೊಲೀಸರು ಕೇಸರಿಕರಣ ಯಾವತ್ತೂ ಮಾಡಿಲ್ಲ ಎಂದರು. ಕಾಂಗ್ರೆಸ್‌ನವರು ಅವರ ಅಜೆಂಡಾ ಜಾರಿ ಮಾಡಲು ಈ ರೀತಿ ತೀರ್ಮಾನ ಮಾಡಿದ್ದಾರೆ. ಇದರಿಂದ ಪೊಲೀಸ್‌ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ತುಷ್ಟೀಕರಣ ರಾಜಕಾರಣ ಮಾಡಲು ಮೊದಲ ದಿನದಿಂದ ಕಾಂಗ್ರೆಸ್‌ ಮುಂದಾಗಿದೆ ಎಂದು ಕಿಡಿಕಾರಿದರು.

ಕೇಸರೀಕರಣಕ್ಕೆ ಬೊಮ್ಮಾಯಿ ಬೆಂಬಲ ನೀಡಿದ್ದರು: ಡಿ.ಕೆ.ಶಿವಕುಮಾರ್‌ ಆರೋಪ

ಅಜೆಂಡಾ ಹೇರಿಕೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ತನ್ನ ಹಿಂದೂ ವಿರೋಧಿ ನೀತಿಯನ್ನು ಪ್ರಕಟಿಸಿದರೆ ನಾವು ಹೋರಾಟದ ಮೂಲಕ ಕಾಂಗ್ರೆಸ್‌ಗೆ ಉತ್ತರ ಕೊಡುತ್ತೇವೆ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಿಗಳನ್ನು ಕಂಟ್ರೋಲ್‌ ಮಾಡಿ ಕಾಂಗ್ರೆಸ್‌ ಅಜೆಂಡಾ ಹೇರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹಿಂದಿನ ಎಲ್ಲ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದರಿಂದ ರಾಜ್ಯ ಅಭಿವೃದ್ಧಿ ಆಗಿದೆ. ಅಂತಹ ಅಧಿಕಾರಿಗಳನ್ನು ಬೆದರಿಸುವ ತಂತ್ರಗಾರಿಕೆಯನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ನಾವು ಹೋರಾಟದ ಮೂಲಕ ಕಾಂಗ್ರೆಸ್‌ಗೆ ಉತ್ತರ ಕೊಡುತ್ತೇವೆ ಎಂದರು.

ಸಾಂವಿಧಾನಾತ್ಮಕವಾಗಿ ಎಲ್ಲ ಇಲಾಖೆಗಳಲ್ಲೂ ಪ್ರತಿ ನಾಗರಿಕನಿಗೂ ಅವರವರ ಧರ್ಮದ ಅನುಷ್ಠಾನದ ಹಕ್ಕಿದೆ. ನಂಬಿಕೆಗಳ ಆಧಾರದಲ್ಲಿ ಕೆಎಸ್ಸಾರ್ಟಿಸಿ, ಪೊಲೀಸ್‌ ಠಾಣೆಗಳಲ್ಲಿ ಆಯುಧ ಪೂಜೆ ಮಾಡುತ್ತಾರೆ. ಇಂತಹ ಧಾರ್ಮಿಕ ಕಾರ್ಯಗಳನ್ನು ಮಾಡುವ ಪೊಲೀಸರನ್ನು ಒಂದು ಪಕ್ಷಕ್ಕೆ ಸೀಮಿತ ಮಾಡುವ ಹೀನ ರಾಜಕಾರಣ ಕಾಂಗ್ರೆಸ್‌ನಿಂದ ಆಗುತ್ತಿದೆ. ಮುಖ್ಯಮಂತ್ರಿಯು ಸಾಂವಿಧಾನಿಕವಾಗಿ ಧಾರ್ಮಿಕ ಆಚರಣೆಗೆ ಅಡ್ಡಿ ಬರೋದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕೇಸರಿಗೆ ಈ ರಾಜ್ಯದಲ್ಲಿ ನಿಷೇಧ ಇಲ್ಲ. ಕರ್ತವ್ಯದಲ್ಲಿ ಇದ್ದಾಗ ಯಾರೂ ಕೇಸರಿ ಪ್ರಯೋಗ ಮಾಡಿಲ್ಲ. 

ನಾನೇ ಕನಕಪುರಕ್ಕೆ ಬರುತ್ತೇನೆ, ನೀವು ಬೆಂಗಳೂರಿಗೆ ಬರಬೇಡಿ ಎಂದು ಡಿಕೆಶಿ ಮನವಿ ಮಾಡಿದ್ದೇಕೆ?

ಅವರ ಖಾಸಗಿ ಜೀವನದಲ್ಲಿ ಅವರ ಉಡುಪುಗಳ ಬಗ್ಗೆ ಪ್ರಶ್ನೆ ಮಾಡಿ ಶಿವಕುಮಾರ್‌ ದ್ವೇಷ ತೀರಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ದ್ವೇಷ ಸಾಧಿಸುವ ವಾತಾವರಣ ಕಂಡು ಬರುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರಲ್ಲ. ಯಾರನ್ನಾದರೂ ಓಲೈಕೆ ಮಾಡಲು ಹಿಂದುತ್ವದ ಚಟುವಟಿಕೆಗಳನ್ನು ನಿಷೇಧ ಮಾಡುವುದು ಸರಿಯಲ್ಲ ಎಂದರು. ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪೊಲೀಸ್‌ ಠಾಣೆಗಳನ್ನು ಹಸಿರೀಕರಣ ಮಾಡಲು ಹೊರಟಿದ್ದಾರೆಯೋ ಅಥವಾ ಪಾಕಿಸ್ತಾನ ಮಾಡಲು ಹೊರಟಿದ್ದಾರೆಯೋ? ಕೇಸರೀಕರಣದ ಬಗ್ಗೆ ಯಾಕೆ ಇಷ್ಟುದ್ವೇಷ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.