Asianet Suvarna News Asianet Suvarna News

ವಿಜಯಪುರ ಕಾಂಗ್ರೆಸ್‌ ಕಚೇರಿಗೆ ಸಾವರ್ಕರ್‌ ಫೋಟೋ ಅಂಟಿಸಿದ ಬಿಜೆಪಿಗ!

ರಾಜ್ಯದಲ್ಲಿ ವೀರ ಸಾವರ್ಕರ್‌ ಮತ್ತು ಟಿಪ್ಪು ಸುಲ್ತಾನ್‌ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಿನ ತಿಕ್ಕಾಟ ತೀವ್ರವಾಗಿರುವ ಹೊತ್ತಲ್ಲೇ ಜಿಲ್ಲಾ ಕಾಂಗ್ರೆಸ್‌ ಕಚೇರಿಯ ಗೋಡೆ ಮೇಲೆ ಬಿಜೆಪಿ ಮುಖಂಡರೊಬ್ಬರು ಸಾವರ್ಕರ್‌ ಭಾವಚಿತ್ರ ಅಂಟಿಸಿರುವ ಘಟನೆ ವಿಜಯಪುರದಿಂದ ವರದಿಯಾಗಿದೆ. 

bjp leader sticked savarkar photo vijayapura congress office gvd
Author
Bangalore, First Published Aug 23, 2022, 3:45 AM IST

ವಿಜಯಪುರ (ಆ.23): ರಾಜ್ಯದಲ್ಲಿ ವೀರ ಸಾವರ್ಕರ್‌ ಮತ್ತು ಟಿಪ್ಪು ಸುಲ್ತಾನ್‌ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಿನ ತಿಕ್ಕಾಟ ತೀವ್ರವಾಗಿರುವ ಹೊತ್ತಲ್ಲೇ ಜಿಲ್ಲಾ ಕಾಂಗ್ರೆಸ್‌ ಕಚೇರಿಯ ಗೋಡೆ ಮೇಲೆ ಬಿಜೆಪಿ ಮುಖಂಡರೊಬ್ಬರು ಸಾವರ್ಕರ್‌ ಭಾವಚಿತ್ರ ಅಂಟಿಸಿರುವ ಘಟನೆ ವಿಜಯಪುರದಿಂದ ವರದಿಯಾಗಿದೆ. ಸೋಮವಾರ ನಸುಕಿನಲ್ಲಿ ಘಟನೆ ನಡೆದಿದ್ದು, ಸಾವರ್ಕರ್‌ ಫೋಟೋ ಅಂಟಿಸಿರುವುದು ನಾನೇ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ ಬಹಿರಂಗಪಡಿಸಿದ್ದಾರೆ. ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿರುವ ಕಾಂಗ್ರೆಸ್‌, ಬಸವರಾಜ ಹೂಗಾರ ಅವರನ್ನು ಬಂಧಿಸುವಂತೆ ಆಗ್ರಹಿಸಿದೆ. 

ಏತನ್ಮಧ್ಯೆ ಘಟನೆಗೆ ಸಂಬಂಧಿಸಿ ಬಸವರಾಜ್‌ ಹೂಗಾರ್‌ ವಿರುದ್ಧ ವಿಜಯಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಸೋಮವಾರ ಕಾಂಗ್ರೆಸ್‌ ಕಚೇರಿಗೆ ಸಾವರ್ಕರ್‌ ಭಾವಚಿತ್ರ ಅಂಟಿಸಿದ ವಿಡಿಯೋ ವೈರಲ್‌ ಆಗಿತ್ತು. ಸುದ್ದಿ ತಿಳಿದ ತಕ್ಷಣ ಪೊಲೀಸರು ಕಾಂಗ್ರೆಸ್‌ ಕಚೇರಿ ಮೇಲೆ ಅಂಟಿಸಿದ ಸಾವರ್ಕರ್‌ ಭಾವಚಿತ್ರವನ್ನು ತೆರವುಗೊಳಿಸಿ ಕಾಂಗ್ರೆಸ್‌ ಕಚೇರಿಗೆ ಭದ್ರತೆ ನೀಡಿದರು. ನಂತರ ಜಿಲ್ಲಾ ಕಾಂಗ್ರೆಸ್‌ ಕಚೇರಿ ಗೋಡೆ ಮೇಲೆ ಸಾವರ್ಕರ್‌ ಫೋಟೋ ಅಂಟಿಸಿರುವುದು ನಾನೇ ಎಂದು ಬಿಜೆಪಿಯ ಬಸವರಾಜ ಹೂಗಾರ ಕೃತ್ಯವನ್ನು ಸಮರ್ಥಿಸಿಕೊಂಡರು.

'ಸಿದ್ದರಾಮಯ್ಯರನ್ನು ಅಪಮಾನಿಸಲು ಮುಂದಾದರೇ ಉಗ್ರ ಹೋರಾಟ'

ಹೂಗಾರ ಸಮರ್ಥನೆ: ಈ ಸಂದರ್ಭದಲ್ಲಿ ಮಾತನಾಡಿದ ಹೂಗಾರ, ಕಾಂಗ್ರೆಸ್‌ನವರು ಪದೇ ಪದೇ ಸಾವರ್ಕರ್‌ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ಹೇಳಿಕೆ ನೀಡುವ ಮೂಲಕ ಅವಮಾನ ಮಾಡುತ್ತಿದ್ದಾರೆ. ಅಲ್ಲದೆ ಸಾವರ್ಕರ್‌ ಫೋಟೋ ಸುಟ್ಟು ಹಾಕಿದ್ದಾರೆ. ಇದು ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್‌ ಅವರಿಗೆ ಮಾಡಿದ ದೊಡ್ಡ ಅಪಮಾನ. ಹೀಗಾಗಿ ಸಾವರ್ಕರ್‌ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಖಂಡಿಸಿ ಈ ನಿರ್ಧಾರ ಕೈಗೊಂಡಿರುವೆ ಎಂದರು. ಜೊತೆಗೆ ಕಾಂಗ್ರೆಸ್‌ನವರು ಸಾವರ್ಕರ್‌ ಅವರನ್ನು ಗೌರವಿಸಬೇಕು. ಅವರ ಪುಸ್ತಕ ಓದಬೇಕು. ಕಾಂಗ್ರೆಸ್‌ನವರು ಸಾವರ್ಕರ್‌ ಬಗ್ಗೆ ಅಪಪ್ರಚಾರ ನಿಲ್ಲಿಸಬೇಕು. ಇಲ್ಲವಾದರೆ ಕಾಂಗ್ರೆಸ್‌ ನಾಯಕರ ಮನೆ ಮೇಲೆಯೂ ಫೋಟೋ ಅಂಟಿಸಬೇಕಾಗುತ್ತದೆ ಎಂದು ಹೂಗಾರ ಎಚ್ಚರಿಕೆ ನೀಡಿದರು.

ಅಲಗೂರ ಖಂಡನೆ: ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ಮಾಜಿ ಶಾಸಕ ರಾಜು ಅಲಗೂರ, ಕಾಂಗ್ರೆಸ್‌ ಕಚೇರಿ ಗೋಡೆಯ ಮೇಲೆ ಸಾವರ್ಕರ್‌ ಭಾವಚಿತ್ರ ಅಂಟಿಸಿರುವುದು ಅಕ್ಷಮ್ಯ ಅಪರಾಧ. ಸಾವರ್ಕರ್‌ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ ಎರಡೂ ಅಲ್ಲ. ಅಂಥವರ ಭಾವಚಿತ್ರ ಕಾಂಗ್ರೆಸ್‌ ಕಚೇರಿ ಮೇಲೆ ಹಾಕಿರುವುದು ಸರಿಯಲ್ಲ. ಕೂಡಲೇ ಈ ಕೃತ್ಯವೆಸಗಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರನ್ನು ಬಂಧಿಸಬೇಕು. ಇಲ್ಲದಿದ್ದರೆ ಅದಕ್ಕೆ ಕಾಂಗ್ರೆಸ್‌ ಪಕ್ಷ ಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ. ಇಂತಹ ಘಟನೆ ಮರುಕಳಿಸಿದರೇ ನಾವು ಕೂಡ ಅವರಿಗೆ ಬೇಡವಾದ ನಾಯಕರ ಭಾವಚಿತ್ರವನ್ನು ಬಿಜೆಪಿ ನಾಯಕರ ಮನೆ ಮೇಲೆ ಅಂಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್‌ನವರು ಸಾಚಾ ಇದ್ದಾರಾ?: ಬಸನಗೌಡ ಪಾಟೀಲ ಯತ್ನಾಳ

ಕಾಂಗ್ರೆಸ್‌, ಬಿಜೆಪಿ ಪ್ರತಿಭಟನೆ: ಈ ಘಟನೆಯನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಗಾಂಧಿ ವೃತ್ತದಲ್ಲಿ ದಿಢೀರ್‌ ಪ್ರತಿಭಟನೆಗೆ ಮುಂದಾದರು. ಇತ್ತ ಬಿಜೆಪಿ ಕಾರ್ಯಕರ್ತರು ಸಹ ಕಾಂಗ್ರೆಸ್‌ ಮುಖಂಡರು ವೀರ ಸಾವರ್ಕರ್‌ ಅವರನ್ನು ನಿರಂತರವಾಗಿ ಅವಹೇಳನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸ್‌ ಬ್ಯಾರಿಕೇಡ್‌ ಅನ್ನು ತಳ್ಳಿ ಕಾಂಗ್ರೆಸ್‌ ಕಾರ್ಯಾಲಯದ ಬ್ಯಾನರ್‌ ಮೇಲೆ ಸಾವರ್ಕರ್‌ ಅವರ ಫೋಟೋ ಅಂಟಿಸಲು ಮುಂದಾದರು. ತಕ್ಷಣವೇ ಪೊಲೀಸರು ಮಧ್ಯ ಪ್ರವೇಶಿಸಿ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು.

Follow Us:
Download App:
  • android
  • ios