'ಸಿದ್ದರಾಮಯ್ಯರನ್ನು ಅಪಮಾನಿಸಲು ಮುಂದಾದರೇ ಉಗ್ರ ಹೋರಾಟ'
ದೇಶದಲ್ಲಿ ಮಾತ್ರವಲ್ಲದೇ ರಾಜ್ಯದಲ್ಲೂ ಸಹ ಬಿಜೆಪಿ ಸರ್ಕಾರ ಜನಸಾಮಾನ್ಯರಿಗೆ ಉತ್ತಮ ಯೋಜನೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ: ತಾರನಾಳ
ಮುದ್ದೇಬಿಹಾಳ(ಆ.19): ಮಡಿಕೇರಿಯಲ್ಲಿ ಪಕ್ಷದ ಸಂಘಟನಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಬಾಡಿಗೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಸೇರಿದಂತೆ ಇತರೇ ವಸ್ತುಗಳ ಎಸೆದು ಅಪಮಾನ ಮಾಡುವ ಮೂಲಕ ವಿಕೃತ ಮೆರೆದಿದ್ದಾರೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಗುರು ತಾರನಾಳ ಹೇಳಿದರು.
ಪಟ್ಟಣದ ಹುಡ್ಕೋ ಬಡಾವಣೆಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮಾತ್ರವಲ್ಲದೇ ರಾಜ್ಯದಲ್ಲೂ ಸಹ ಬಿಜೆಪಿ ಸರ್ಕಾರ ಜನಸಾಮಾನ್ಯರಿಗೆ ಉತ್ತಮ ಯೋಜನೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ನಿರುದ್ಯೋಗ ತಾಂಡವಾಡುತ್ತಿದೆ. ಭ್ರಷ್ಟಾಚಾರ ಹೆಚ್ಚಾಗಿದೆ. ಹೀಗೆ ಅನೇಕ ರೀತಿ ಬಿಜೆಪಿ ವೈಫಲ್ಯಗಳು ದುರಾಡಲಿತ ಜನರಿಗೆ ಗೊತ್ತಾಗಬಾರದು ಎಂದು ಎಲ್ಲೆಂದರಲ್ಲಿ ಜಾತಿ ಧರ್ಮಗಳ ಮಧ್ಯ ಕೋಮು ಭಾವನೆ ಕೆರಳಿಸಿ ಜನರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರದಿಂದ ಡಿಕೆಶಿ ವಿರುದ್ಧ ಹೊಸ ತನಿಖಾಸ್ತ್ರ: ಕನಕಪುರ ಬಂಡೆಗೆ ಮತ್ತೆ ಕಂಟಕ?
ದಾವಣಗೇರಿಯಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಸಿದ್ದಮಯ್ಯನವರ 75ನೇ ಜನ್ಮದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಲಕ್ಷಾಂತರ ಜನರು ಸೇರುವ ಮೂಲಕ ವ್ಯಾಪಕ ಬೆಂಬಲ ನೀಡಿದ್ದನ್ನು ಕಂಡು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಸಾಧ್ಯವಾಗದೇ ಸಿದ್ದರಾಮಯ್ಯನವರ ಮೇಲೆ ಈ ರೀತಿ ಪ್ರತಿಭಟನೆ ನಡೆಸುವ ಮೂಲಕ ಹೇಡಿತನ ರಾಜಕಾರಣ ಪ್ರದರ್ಶಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯನವರೊಬ್ಬ ಹಿಂದುಳಿದ ನಾಯಕರು ಮಾತ್ರವಲ್ಲದೇ ಮುಖ್ಯಮಂತ್ರಿಯಾಗಿ ಹಲವಾರು ಭಾಗ್ಯಗಳನ್ನು ನೀಡುವ ಮೂಲಕ ಉತ್ತಮ ಜನಪರ ಆಡಳಿತ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಜೊತೆಗೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯನವರ ಜೊಡಿ ನಾಯಕತ್ವ ಕಾಂಗ್ರೆಸ್ ಪಕ್ಷ ಬಲಿಷ್ಠಗೊಳ್ಳುತ್ತಿದೆ ಎಂಬುವುದನ್ನು ಅರಿತ ಬಿಜೆಪಿಯವರು ಇಂತಹ ಕುತಂತ್ರ ಬುದ್ದಿ ತೋರಿಸಿದ್ದಾರೆ ಎಂದು ದೂರಿದರು.
ಕೋಮುವಾದಿ ಬಿಜೆಪಿ ಪಕ್ಷದ ಸರ್ಕಾರವನ್ನು ಕಿತ್ತೆಸೆಯಲು ಈಗಾಗಲೇ ಜನರು ತಿರ್ಮಾನಿಸಿದ್ದಾರೆ. ಹಾಗೊಂದು ವೇಳೆ ಸಿದ್ದರಾಮಯ್ಯನವರನ್ನು ಅಪಮಾನಿಸಲು ಮುಂದಾದರೇ ಇಡೀ ರಾಜ್ಯದಲ್ಲೆಡೆ ಕಾಂಗ್ರೆಸ್ ಪಕ್ಷ ಮಾತ್ರವಲ್ಲ ಸಿದ್ದರಾಮ್ಯನವರ ಕೋಟ್ಯಂತರ ಜನ ಅಭಿಮಾನಿಗಳು ಸೇರಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಅಂತ ತಾಲೂಕು ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಗುರು ತಾರನಾಳ ತಿಳಿಸಿದ್ದಾರೆ.