ಬೆಂಗಳೂರು (ಡಿ.03):  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ಗೆ ಮಂತ್ರಿ ಸ್ಥಾನ ನೀಡುವುದಾಗಿ ಹೇಳಿದ್ದು ನನಗೆ ಅಘಾತ ಉಂಟು ಮಾಡಿದೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

"

ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ತಮ್ಮ ಅಹವಾಲು ಸಲ್ಲಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಯಾವ ಕಾರಣಕ್ಕೆ ಯೋಗೇಶ್ವರ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೋ ನನಗೆ ಗೊತ್ತಿಲ್ಲ. ಆದರೆ ಯೋಗೇಶ್ವರ್‌ಗೆ ಮಂತ್ರಿ ಸ್ಥಾನ ನೀಡುತ್ತೇನೆ ಎಂಬ ಮುಖ್ಯಮಂತ್ರಿಗಳ ಭರವಸೆಯ ಮಾತು ನನಗೆ ಅಘಾತ ತಂದಿರುವುದು ನಿಜ ಎಂದರು.

ಯೋಗೇಶ್ವರ್‌ಗೆ ಯೋಗ: ಸಿಎಂ ಆಪ್ತ ರೇಣುಕಾಚಾರ್ಯಗೆ ಮುಖಭಂಗ..! .

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಇನ್ನು ಮುಂದೆ ಯೋಗೇಶ್ವರ್‌ ಕುರಿತು ಯಾವ ವಿಚಾರವನ್ನೂ ನನ್ನ ಬಳಿ ಕೇಳಬೇಡಿ. ಯೋಗೇಶ್ವರ್‌ ಅವರೇನು ಅಮೀತ್‌ ಶಾನಾ, ಜೆ.ಪಿ ನಡ್ಡಾನಾ ಅಥವಾ ಪ್ರಧಾನಿ ನರೇಂದ್ರ ಮೋದಿಯಾ? ಇಲ್ಲಾ ಮುಖ್ಯಮಂತ್ರಿಯಾ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ರೇಣುಕಾಚಾರ್ಯ, ನಾವು ರೆಸಾರ್ಟ್‌ಗೆ ಹೋಗಿಲ್ಲ. ಬದಲಿಗೆ ಶಾಸಕರ ಜೊತೆ ಮನೆಯಲ್ಲೇ ತಿಂಡಿ ಕಾಫಿ ಸವಿದು ಚರ್ಚಿಸಿದ್ದೇವೆ. ಅಲ್ಲದೇ ನಮ್ಮ ಅಭಿಪ್ರಾಯಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಬಳಿ ತಿಳಿಸಿದ್ದೇವೆ. ಗ್ರಾಮ ಪಂಚಾಯತಿ ಚುನಾವಣೆ, ಅಭ್ಯರ್ಥಿಗಳ ಗೆಲುವು, ಪಕ್ಷ ಸಂಘಟನೆ ಸೇರಿ ನಾನಾ ವಿಚಾರಗಳನ್ನು ಚರ್ಚಿಸಿದ್ದೇವೆ. ಇದಕ್ಕೆ ರಾಜ್ಯಾಧ್ಯಕ್ಷರು ಕೆಲವು ಸಲಹೆಗಳನ್ನು ನೀಡಿದ್ದಾರೆ ಎಂದ ತಿಳಿಸಿದರು.