ಆಡಳಿತ ಯಂತ್ರ ಕುಸಿದಿರುವುದಕ್ಕೆ ಸಿದ್ದು ಜನಸ್ಪಂದನ ಕಾರ್ಯಕ್ರಮ ಸಾಕ್ಷಿ: ಆರ್.ಅಶೋಕ್ ಕಿಡಿ
‘ವಿಧಾನಸೌಧದ ಮುಂದೆ ನಡೆದ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ಮಹಾ ದೊಡ್ಡ ಸಾಧನೆ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೆರೆಯುತ್ತಿದ್ದಾರೆ. ಅಸಲಿಗೆ ಅದು ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿರುವುದಕ್ಕೆ ಜೀವಂತ ನಿದರ್ಶನ’ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರು (ಫೆ.10): ‘ವಿಧಾನಸೌಧದ ಮುಂದೆ ನಡೆದ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ಮಹಾ ದೊಡ್ಡ ಸಾಧನೆ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೆರೆಯುತ್ತಿದ್ದಾರೆ. ಅಸಲಿಗೆ ಅದು ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿರುವುದಕ್ಕೆ ಜೀವಂತ ನಿದರ್ಶನ’ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸೇರಿದಂತೆ 34 ಸಚಿವರಿದ್ದಾರೆ. ಪ್ರತಿ ಜಿಲ್ಲೆಗೆ ಒಬ್ಬ ಉಸ್ತುವಾರಿ ಸಚಿವರಿದ್ದಾರೆ.
ಸಂಪುಟ ದರ್ಜೆ ಸ್ಥಾನಮಾನದ 34 ನಿಗಮ- ಮಂಡಳಿಗಳ ಅಧ್ಯಕ್ಷರಿದ್ದಾರೆ. ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒಗಳು ಇದ್ದಾರೆ. ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಪಂಚಾಯಿತಿಗಳು ಇವೆ. ಇಷ್ಟೆಲ್ಲ ವ್ಯವಸ್ಥೆ ಇದ್ದರೂ ಒಬ್ಬ ಬಡ ವ್ಯಕ್ತಿ ತನ್ನ ಸಮಸ್ಯೆ ಬಗೆಹರಿಸಿಕೊಳ್ಳಲು ದೂರದ ಊರುಗಳಿಂದ ಬಸ್, ರೈಲು ಚಾರ್ಜ್ ಕೊಟ್ಟು ಅರ್ಜಿ ಹಿಡಿದುಕೊಂಡು ವಿಧಾನಸೌಧಕ್ಕೆ ಬಂದು ದಿನವೆಲ್ಲ ಕಾದು ಮುಖ್ಯಮಂತ್ರಿ ಮುಂದೆ ಕೈಚಾಚಬೇಕಾದ ಪರಿಸ್ಥಿತಿ ಇದೆ ಎಂದರೆ ಅದು ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಎಂದು ಲೇವಡಿ ಮಾಡಿದ್ದಾರೆ.
ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವುದೇ ಸರ್ಕಾರದ ಗುರಿ: ಸಚಿವ ಡಾ.ಜಿ.ಪರಮೇಶ್ವರ್
ಅರ್ಜಿ ಹಿಡಿದು ಕೈಚಾಚುವ ಜನರ ಗೋಳನ್ನು ನಿಮ್ಮ ಬಿಟ್ಟಿ ಪ್ರಚಾರದ ಗೀಳಿಗೆ ಬಳಸಿಕೊಳ್ಳುತ್ತಿದ್ದೀರಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮಗೆ ನಿಜಕ್ಕೂ ನಾಚಿಕೆಯಾಗಬೇಕು. ಜನಸ್ಪಂದನ ಅಂತ ಪ್ರಚಾರಕ್ಕಾಗಿ ನಾಟಕ ಆಡುವ ಬದಲು ಮುಖ್ಯಮಂತ್ರಿಗಳು ತಮ್ಮ ಉಸ್ತುವಾರಿ ಮಂತ್ರಿಗಳಿಗೆ ಆಯಾ ಜಿಲ್ಲಾ ಕೇಂದ್ರಗಳಿಗೆ, ತಾಲ್ಲೂಕು ಕೇಂದ್ರಗಳಿಗೆ ಹೋಗಿ ಜನರ ಸಮಸ್ಯೆ ಆಲಿಸುವಂತೆ ಸೂಚನೆ ನೀಡಬೇಕು. ಶಾಸಕರು ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒ ಸಮ್ಮುಖದಲ್ಲಿ ಸ್ಥಳೀಯ ಮಟ್ಟದಲ್ಲೇ ಜನತಾ ದರ್ಶನ ನಡೆಸಿ ಅಲ್ಲೇ ಜನರ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಶೋಕ್ ಅವರು ಸಾಮಾಜಿಕ ಜಾಲತಾಣದ ಮೂಲಕ ಆಗ್ರಹಿಸಿದ್ದಾರೆ.
ಪ್ರತಿಭಟನೆ ಹೆಸರಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ಸಿಗರು ಮಜಾ: ರಾಜ್ಯದಲ್ಲಿ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ದೆಹಲಿಯಲ್ಲಿ ಕಾಂಗ್ರೆಸ್ಸಿಗರು ಪ್ರತಿಭಟನೆಯ ಹೆಸರಲ್ಲಿ ಮಜಾ ಮಾಡುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ. ಬಿಜೆಪಿ ಶಾಸಕರ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳ ಜೊತೆಗೆ ಜನರಿಗೆ ನಾಮ ಹಾಕುವ ಗ್ಯಾರಂಟಿಯನ್ನೂ ನೀಡಿದೆ. ಖಜಾನೆ ಖಾಲಿ ಮಾಡಿಕೊಂಡ ಸರ್ಕಾರ ಬೀಗ ಹಾಕಿಕೊಳ್ಳುವ ಸ್ಥಿತಿ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯಲ್ಲಿ ಈಶ್ವರಪ್ಪ ಆಟಕ್ಕುಂಟು ಲೆಕ್ಕಕ್ಕಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ
ಕಾಂಗ್ರೆಸ್ ನಾಯಕರು ದೆಹಲಿಗೆ ಮಜಾ ಮಾಡಲು ಹೋಗಿದ್ದು, ವಿಧಾನಸೌಧ ಖಾಲಿಯಾಗಿ ಅಧಿಕಾರಿಗಳಿಗೆ ಕೆಲಸವಿಲ್ಲದಂತಾಗಿದೆ. ಬೆಂಗಳೂರಿನಲ್ಲಿ ಶೇ.30ರಷ್ಟು ಕಾವೇರಿ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಂಟು ಟಿಎಂಸಿ ನೀರು ಹೆಚ್ಚುವರಿಯಾಗಿತ್ತು. ಆದರೆ ಈಗ ತಮಿಳುನಾಡಿಗೆ ನೀರು ನೀಡಲಾಗಿದೆ. ಬರಗಾಲದ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯೂ ಇದೆ ಎಂದು ಕಿಡಿಕಾರಿದರು.