ಬೆಂಗಳೂರು : ದಿನೇ ದಿನೇ ರೋಚಕವಾಗುತ್ತಿರುವ ಕರ್ನಾಟಕ ರಾಜಕೀಯ ವಿಪ್ಲವ ಶುಕ್ರವಾರ ಮಹತ್ವದ ತಿರುವು ಪಡೆದಿದ್ದು, ಬಿಜೆಪಿ ಶಾಸಕರ ರೆಸಾರ್ಟ್ ವಾಸ್ತವ್ಯಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ರೆಸಾರ್ಟ್ ರಾಜಕಾರಣಕ್ಕೆ ಶರಣಾಗಿದೆ. ಒಗ್ಗಟ್ಟು ಪ್ರದರ್ಶಿಸಲು ಕಾಂಗ್ರೆಸ್ ಆಯೋಜಿಸಿದ್ದ ಶಾಸಕಾಂಗ ಪಕ್ಷದ ಸಭೆಗೆ ನಾಲ್ವರು ಅತೃಪ್ತ ಶಾಸಕರು ಗೈರು ಹಾಜರಾದರು. 

ಅಷ್ಟೇ ಅಲ್ಲ, ಸಭೆಗೆ ಹಾಜರಾದ ಅತೃಪ್ತರ ಪೈಕಿ ಐವರು ಮತ್ತೆ ಬಿಜೆಪಿಯ ತೆಕ್ಕೆಗೆ ಹಾರುವ ಭೀತಿ ತೀವ್ರವಾಗಿ ಕಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಈ ರೆಸಾರ್ಟ್ ವಾಸ್ತ ವ್ಯಕ್ಕೆ ಮುಂದಾಗಿದ್ದಾರೆ.

ತನ್ಮೂಲಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆಪರೇಷನ್ ಕಮಲ ಪ್ರಹಸನಕ್ಕೆ ಇತಿಶ್ರೀ ಹಾಡುತ್ತದೆ ಎಂಬ ನಿರೀಕ್ಷೆ ಸಂಪೂರ್ಣ ಹುಸಿಹೋಗಿದೆ. ಅಷ್ಟೇ ಅಲ್ಲ, ಆಪರೇಷನ್ ಕಮಲ ಕಮರಿದೆ ಎಂಬುದು ಸಂಪೂರ್ಣ ಸತ್ಯವಲ್ಲ. ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಕಾರ್ಯತಂತ್ರ ಇನ್ನು ಗುಪ್ತಗಾಮಿ ನಿಯಾಗಿದೆ ಎಂಬ ಭಾವವನ್ನು ಸಾರ್ವತ್ರಿಕವಾಗಿ ಬಿತ್ತಿದೆ. 

ರೆಸಾರ್ಟ್‌ಗೆ ಹೋಗದೆ ಮತ್ತೇನು ಮಾಡೋನ್ರಿ? ಬಿಜೆಪಿ ನಾಯಕರು ಹಣದ ಥೈಲಿ ಹಿಡಿದು 25 ಕೋಟಿ, 50  ಕೋಟಿ, 100 ಕೋಟಿ ರು. ಕೊಡುತ್ತೇನೆ. ಮಂತ್ರಿಗಿರಿ ನೀಡುತ್ತೇವೆ. ಅನಂತರ ಚುನಾವಣೆಗೂ ಸಹಾಯ ಮಾಡುತ್ತೇವೆ ಬನ್ನಿ ಬನ್ನಿ ಅಂತ ನಿಂತು ಬಿಟ್ಟಿದ್ದಾರಲ್ಲ. ನಮ್ಮ ಶಾಸಕರನ್ನ ಇದರಿಂದ ಬಚಾವ್ ಮಾಡಬಾರದಾ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹೇಳಿದ್ದಾರೆ.