ಬಾಂಗ್ಲಾ, ಪಾಕಿಸ್ತಾನ ಮತ್ತೆ ಭಾರತಕ್ಕೆ ಸೇರಿಸಿ ಅಖಂಡ ಭಾರತ ನಿರ್ಮಿಸಿದಲ್ಲಿ ಯಾತ್ರೆಗೆ ಅರ್ಥ, ಪ್ರಿಯಾಂಕ ಗಾಂಧಿ, ರಾಬರ್ಟ್‌ ವಾದ್ರಾ ಭಾವಚಿತ್ರ ಹಾಕಿಕೊಂಡಿದ್ದಾರೆ: ಕೆ.ಎಸ್‌. ಈಶ್ವರಪ್ಪ ವ್ಯಂಗ್ಯ

ಶಿವಮೊಗ್ಗ(ಸೆ.09):  ಅಖಂಡ ಭಾರತವನ್ನು ತುಂಡು ಮಾಡಿದ ಪಾಪದ ಪ್ರಾಯಶ್ಚಿತ್ತವಾಗಿ ಭಾರತ್‌ ಜೋಡೋ ಹೆಸರಿನಲ್ಲಿ ಕಾಂಗ್ರೆಸ್‌ ಪಾದಯಾತ್ರೆ ನಡೆಸುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಹಾಲಿ ಶಾಸಕ ಕೆ.ಎಸ್‌. ಈಶ್ವರಪ್ಪ ವ್ಯಂಗ್ಯವಾಡಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಳೆದುಕೊಂಡ ಪಾಕಿಸ್ತಾನ, ಬಾಂಗ್ಲಾದೇಶವನ್ನು ಒಗ್ಗೂಡಿಸಿ ಭಾರತ್‌ ಜೋಡೋ ಯಾತ್ರೆ ಮಾಡಿ ಅಖಂಡ ಭಾರತವನ್ನಾಗಿಸಲಿ. ಆಗ ಭಾರತ್‌ ಜೋಡೋ ಯಾತ್ರೆ ನಡೆಸಿದ್ದಕ್ಕೂ ಸಾರ್ಥಕತೆ ಸಿಗುತ್ತದೆ. ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಆತ್ಮಕ್ಕೂ ತೃಪ್ತಿ ಸಿಗುತ್ತದೆ ಎಂದು ಹೇಳಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಸಾವಿರಾರು ಜೀವಗಳಿಗೆ ಬೆಲೆಯೇ ಇಲ್ಲ ಎನ್ನುವ ಹಾಗೆ ಅಖಂಡ ಭಾರತವನ್ನು ಮೂರು ತುಂಡಾಗಿಸಿ ಪಾಪದ ಕೆಲಸ ನಡೆಸಿದ್ದಲ್ಲದೆ, ಭಾರತಾಂಬೆಯನ್ನೇ ಸೀಳಿ ಹಾಕಿದ್ದರು. ಅನೇಕರಿಗೆ ಕಾಂಗ್ರೆಸ್‌ ಮೇಲೆ ಸಿಟ್ಟಿದೆ. ಕಾಂಗ್ರೆಸ್‌ ನಾಶ ಆಗಬೇಕು ಎಂದು ಹಲವರು ಶಾಪ ಹಾಕಿದ್ದಾರೆ. ಅವರ ಶಾಪದಂತೆ ದೇಶದಲ್ಲಿ ಕಾಂಗ್ರೆಸ್‌ ನಾಶ ಆಗುತ್ತಿದೆ. ಆದರೂ ಅಲ್ಲೊಂದು ಚೂರು, ಇಲ್ಲೊಂದು ಚೂರು ಎಂಬಂತೆ ಉಳಿದಿರುವ ಕಾಂಗ್ರೆಸ್‌ ಭಾರತವನ್ನು ಮತ್ತೆ ಜೋಡಿಸಲು ಹೊರಟಿರುವುದು ನಿಜಕ್ಕೂ ಒಳ್ಳೆಯ ನಿರ್ಧಾರ ಎಂದರು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅರ್ಕಾವತಿ ಯೋಜನೆ ಭ್ರಷ್ಟಾಚಾರ ನಡೆದಿಲ್ಲವೇ?: ಈಶ್ವರಪ್ಪ ಪ್ರಶ್ನೆ

ಭಾರತ್‌ ಜೋಡೋ ಯಾತ್ರೆಯಲ್ಲಿ ಪ್ರಿಯಾಂಕ ಗಾಂಧಿ, ರಾಬರ್ಚ್‌ ವಾದ್ರಾ ಅವರದ್ದೆಲ್ಲ ಭಾವಚಿತ್ರ ಹಾಕಿಕೊಂಡಿದ್ದಾರೆ. ಪಾಪ ಅವರೂ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಎಂದು ವ್ಯಂಗ್ಯವಾಡಿದ ಈಶ್ವರಪ್ಪ ಅವರು, ರಾಬರ್ಟ್‌ ವಾದ್ರಾ ಅಂತೂ ದೇಶಕ್ಕಾಗಿ ಎಷ್ಟು ಬಲಿದಾನ ಮಾಡಿದ್ದಾರೆಂಬುದು ಎಲ್ಲರಿಗೂ ಗೊತ್ತಾಗಿದೆ. ಆ ಕುಟುಂಬದ ಬಗ್ಗೆ ಮಾತನಾಡಿ ಸಾಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ಬಲಿದಾನ ಮಾಡಿದ್ದಾರಲ್ಲ ಅವರ ಪ್ರಾಣಕ್ಕೆ ಬೆಲೆಯೇ ಇಲ್ಲವೇ? ಅಧಿಕಾರಕ್ಕಾಗಿ ಕಾಂಗ್ರೆಸ್‌ನವರು ದೇಶವನ್ನು ಭಾರತ, ಪಾಕಿಸ್ತಾನ, ಬಾಂಗ್ಲಾ ಎಂದು ಮೂರು ತುಂಡು ಮಾಡಿದರಲ್ಲ, ಇದಕ್ಕೆಲ್ಲ ರಾಹುಲ್‌ ಗಾಂಧಿ ಉತ್ತರ ಕೊಡುತ್ತಾರೆಯೇ ಎಂದು ಪ್ರಶ್ನಿಸಿದರು.