ಬೆಂಗಳೂರು[ಮಾ.10]: ಸಚಿವ ಸ್ಥಾನ ಪಡೆದಿರುವವರೂ ಸೇರಿದಂತೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಇತ್ತೀಚೆಗೆ ವಲಸೆ ಬಂದು ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ 15 ಮಂದಿಯಿಂದಲೂ ಬಿಜೆಪಿ ಕಚೇರಿಯ ಕಸ ಗುಡಿಸುವ ಕೆಲಸ ಮಾಡಿಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ ಘಟನೆ ಸೋಮವಾರ ವಿಧಾನಭೆಯಲ್ಲಿ ನಡೆಯಿತು.

ಸಂವಿಧಾನದ ವಿಚಾರ ಚರ್ಚೆ ವೇಳೆ, ಕಾಂಗ್ರೆಸ್‌ನ ಡಾ.ಜಿ.ಪರಮೇಶ್ವರ್‌ ಅವರು, ಇಂದು ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ನಿಮಗೆ ಅಧಿಕಾರ ನೀಡಿದ್ದು ಸಂವಿಧಾನ. ಆದರೆ, ಸಾಕಷ್ಟು ಚುನಾವಣೆಗಳಲ್ಲಿ ಬಿಜೆಪಿಯವರು ಅಲ್ಪಸಂಖ್ಯಾತ ಸಮುದಾಯದ ಒಬ್ಬ ಅಭ್ಯರ್ಥಿಗೂ ಸ್ಪರ್ಧೆಗೆ ಅವಕಾಶ ನೀಡದ ಉದಾಹರಣೆಗಳಿವೆ. ಅಲ್ಪಸಂಖ್ಯಾತರಾರ‍ಯರೂ ನಿಮ್ಮ ಸಹೋದರರಲ್ಲವೇ ಎಂದು ಪ್ರಶ್ನಿಸಿದರು.

ಈ ವೇಳೆ, ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಮಾತನಾಡಿ ಮುಸಲ್ಮಾನರಿಗೆ ಬಿಜೆಪಿಯಿಂದ ಚುನಾವಣಾ ಸ್ಪರ್ಧೆಗೆ ಟಿಕೆಟ್‌ ಕೊಡುವುದಿಲ್ಲ ಎಂದಿಲ್ಲ. ಆದರೆ, ಈ ಸದನಕ್ಕೆ ಗೆದ್ದು ಬಂದಿರುವವರೆಲ್ಲಾ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಿ ಬಂದವರು. ಹಾಗೇ ಅಲ್ಪಸಂಖ್ಯಾತರೂ ಬಂದು ಪಕ್ಷದ ಕಚೇರಿಯಲ್ಲಿ ಕಸ ಗುಡಿಸಲಿ ಟಿಕೆಟ್‌ ಕೊಡುತ್ತೇವೆ ಎಂದರು.

ಆಗ ಕಾಂಗ್ರೆಸ್‌ನ ಎಚ್‌.ಕೆ.ಪಾಟೀಲ್‌ ಅವರು, ಕೆಲ ತಿಂಗಳ ಹಿಂದೆ ನಿಮ್ಮ ಪಕ್ಷಕ್ಕೆ ಬಂದರಲ್ಲಾ 15ಮಂದಿ, ಅವರೆಲ್ಲರೂ ಬಿಜೆಪಿ ಕಚೇರಿ ಕಸ ಹೊಡೆದಿದ್ದರಾ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು, ಅವರೆಲ್ಲಾ ಈಗ ಕಸ ಗುಡಿಸುತ್ತಾರೆ. ಗುಡಿಸುವಂತೆ ಮಾಡುತ್ತೇವೆ ಎಂದರು.