ನಾರಾಯಣಗೌಡರು ಕಾಂಗ್ರೆಸ್‌ ಪಕ್ಷ ಸೇರುವುದು ಖಚಿತವಾದಲ್ಲಿ ಕೈ ಟಿಕೆಟ್‌ ಆಕಾಂಕ್ಷಿಗಳಾಗಿರುವ ಆರು ಮಂದಿ ಸೇರಿ ಒಂದು ನಿರ್ಣಯ ಕೈಗೊಳ್ಳುವುದಕ್ಕೆ ನಿರ್ಧರಿಸಿದ್ದಾರೆ. ಈಗಾಗಲೇ ಸ್ಥಳೀಯ ಮುಖಂಡರು, ಕಾರ್ಯಕರ್ತರೊಂದಿಗೆ ರಹಸ್ಯ ಸಭೆ ನಡೆಸುತ್ತಾ ಆರು ಮಂದಿ ಕೈಗೊಳ್ಳುವ ನಿರ್ಣಯಕ್ಕೆ ಬದ್ಧರಾಗಿರುವಂತೆ ಮನವೊಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. 

ಮಂಡ್ಯ(ಮಾ.09): ಜಿಲ್ಲೆಯೊಳಗೆ ಮೊದಲ ಬಾರಿಗೆ ಕೆ.ಆರ್‌.ಪೇಟೆಯಲ್ಲಿ ಕಮಲ ಅರಳಿಸಿದ ಕ್ಷೇತ್ರದ ಶಾಸಕ ಕೆ.ಸಿ.ನಾರಾಯಣಗೌಡ ಮತ್ತೊಮ್ಮೆ ಪಕ್ಷಾಂತರಕ್ಕೆ ಸಿದ್ಧರಾಗಿದ್ದಾರೆ. ಬಿಎಸ್‌ಪಿ, ಜೆಡಿಎಸ್‌, ಬಿಜೆಪಿ ಪಕ್ಷಗಳ ಬಳಿಕ ಇದೀಗ ಕಾಂಗ್ರೆಸ್‌ ಸೇರುವ ತವಕದಲ್ಲಿದ್ದಾರೆ. ಮಾ.12ರಂದು ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದು ಹೋದ ಬಳಿಕ ಪಕ್ಷಾಂತರಕ್ಕೆ ವೇದಿಕೆ ರೆಡಿ ಮಾಡಿಕೊಂಡಿದ್ದಾರೆ.

ಭಾರತೀಯ ಜನತಾ ಪಕ್ಷದೊಂದಿಗೆ ಈಗಾಗಲೇ ಬಹುತೇಕ ಅಂತರ ಕಾಯ್ದುಕೊಂಡಿರುವ ಕೆ.ಸಿ.ನಾರಾಯಣಗೌಡರು ಜಿಲ್ಲೆಯವರೇ ಆಗಿ ಮೋದಿ ಕಾರ್ಯಕ್ರಮದ ಯಾವುದೇ ಪೂರ್ವಭಾವಿ ಸಭೆಗಳಲ್ಲೂ ಭಾಗವಹಿಸುತ್ತಿಲ್ಲ. ನಾರಾಯಣಗೌಡ ಪಕ್ಷ ಬಿಡುವುದನ್ನು ಖಚಿತ ಪಡಿಸಿಕೊಂಡಿರುವ ಬಿಜೆಪಿ ನಾಯಕರು ಅವರಿಗೆ ಯಾವುದೇ ಜವಾಬ್ದಾರಿ ವಹಿಸದೆ ದೂರವೇ ಇಟ್ಟಿದ್ದಾರೆ. ಮಂಗಳವಾರ ಕೆ.ಆರ್‌.ಪೇಟೆಯಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆಗೆ ನಾರಾಯಣಗೌಡರು ಯಾವುದೇ ಪೂರ್ವಸಿದ್ಧತೆ ಮಾಡಿಕೊಂಡಿರಲಿಲ್ಲ. ಜನರನ್ನು ಸಂಘಟಿಸಿಕೊಂಡು ಯಾತ್ರೆಗೂ ಕರೆತಂದಿರಲಿಲ್ಲ. ಇದರಿಂದ ಬೇಸರಗೊಂಡ ಮಾಜಿ ಪ್ರಧಾನಿ ಡಿ.ವಿ. ಸದಾನಂದಗೌಡ ಮತ್ತಿತರ ಬಿಜೆಪಿ ನಾಯಕರು ಯಾತ್ರೆಯನ್ನು ಅರ್ಧಕ್ಕೆ ಕೈಬಿಟ್ಟು ಹೊರಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಮಾ.12ರಂದು ದಶಪಥ ಹೆದ್ದಾರಿ ಉದ್ಘಾಟನೆ: ಮಂಡ್ಯ ಮಾರ್ಗದ ವಾಹನ ಸಂಚಾರ ಬದಲಾವಣೆ

21ಕ್ಕೆ ಬೃಹತ್‌ ಕಾರ್ಯಕ್ರಮ:

ಬಿಜೆಪಿ ತೊರೆಯಲು ಮಾನಸಿಕವಾಗಿ ಸಿದ್ಧರಾಗಿರುವ ಕೆ.ಸಿ.ನಾರಾಯಣಗೌಡರು ಕೆ.ಆರ್‌.ಪೇಟೆಯಲ್ಲಿ ಮಾ.21ರಂದು ಬೃಹತ್‌ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಒಳಾಂಗಣ ಕ್ರೀಡಾಂಗಣ ಮತ್ತು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿಗೆ ವಿಧಾನಸಭೆ ಮಾಜಿ ಸಭಾಪತಿ ಕೃಷ್ಣ ಹೆಸರನ್ನು ನಾಮಕರಣ ಮಾಡಿ ತಮ್ಮ ಅವಧಿಯ ಅಂತಿಮ ಕಾರ್ಯಕ್ರಮ ನಡೆಸುತ್ತಿದ್ದಾರೆ. ಭಾರೀ ಸಂಖ್ಯೆಯಲ್ಲಿ ಜನರ ಸೇರಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮ ಮುಗಿದ ಮರು ದಿನವೇ ಶಾಸಕ ಹಾಗೂ ಸಚಿವ ಸ್ಥಾನಕ್ಕೆ ನಾರಾಯಣಗೌಡರು ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ನತ್ತ ಚಿತ್ತ:

ಕೆ.ಸಿ.ನಾರಾಯಣಗೌಡರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಪ್ರಕ್ರಿಯೆಗಳೆಲ್ಲವೂ ಮುಗಿದುಹೋಗಿವೆ. ನಾರಾಯಣಗೌಡರ ಕಾಂಗ್ರೆಸ್‌ ಸೇರ್ಪಡೆಗೆ ಸ್ಥಳೀಯ ಕಾಂಗ್ರೆಸ್‌ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾ.13ರಂದು ನಡೆಯಬೇಕಿದ್ದ ಪ್ರಜಾಧ್ವನಿ ಸಮಾವೇಶವನ್ನು ಮುಂದೂಡಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮಾ.13ರಂದೇ ನಾರಾಯಣಗೌಡರು ಕಾಂಗ್ರೆಸ್‌ ಸೇರುತ್ತಿದ್ದರು. ಅವರಿಗಾಗಿ ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಾರ್ಯಕ್ರಮವನ್ನೇ ಮುಂದೂಡಿದ್ದಾರೆ. ಸ್ಥಳೀಯ ಮುಖಂಡರನ್ನು ಸಮಾಧಾನಪಡಿಸುವ ಪ್ರಕ್ರಿಯೆಯೂ ರಾಜ್ಯ ನಾಯಕರಿಂದ ನಡೆದಿರುವುದಾಗಿ ಹೇಳಲಾಗುತ್ತಿದೆ.

ಮತ್ತೊಂದು ದಾಖಲೆಗೆ ಸಿದ್ಧತೆ?

ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದಿಂದ ಈಗಾಗಲೇ ಜೆಡಿಎಸ್‌ ಪಕ್ಷದಿಂದ ಎರಡು ಬಾರಿ, ಬಿಜೆಪಿಯಿಂದ ಒಂದು ಬಾರಿ ಸತತ ಮೂರು ಬಾರಿ ಹ್ಯಾಟ್ರಿಕ್‌ ಜಯ ಸಾಧಿಸಿರುವುದು ಒಂದು ದಾಖಲೆಯಾದರೆ, ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಕಮಲ ಅರಳುವಂತೆ ಮಾಡಿದ್ದು ನಾರಾಯಣಗೌಡರ ಐತಿಹಾಸಿಕ ದಾಖಲೆ. ಇದೀಗ ಕಾಂಗ್ರೆಸ್‌ ಪಕ್ಷ ಸೇರಿ ಅಲ್ಲಿಯೂ ದಿಗ್ವಿಜಯ ಸಾಧಿಸಿದರೆ ನಾರಾಯಣಗೌಡರ ದಾಖಲೆಯನ್ನು ಸರಿಗಟ್ಟುವವರೇ ಇಲ್ಲದಂತಾಗುತ್ತದೆ.

ಒಕ್ಕಲಿಗರು ಒಗ್ಗಟ್ಟಿನಿಂದ ಕಾಂಗ್ರೆಸ್‌ ಬೆಂಬಲಿಸಿ: ಸಂಸದ ಡಿ.ಕೆ.ಸುರೇಶ್‌

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಡಕ್ಕೆ ಮಣಿದಿರುವ ಸ್ಥಳೀಯ ಕಾಂಗ್ರೆಸ್ಸಿಗರು ಒಲ್ಲದ ಮನಸ್ಸಿನಿಂದಲೇ ಕೆ.ಸಿ.ನಾರಾಯಣಗೌಡರ ಪಕ್ಷ ಸೇರ್ಪಡೆಯನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಇದರ ನಡುವೆಯೂ ಚುನಾವಣೆ ವೇಳೆಗೆ ಎಲ್ಲರನ್ನೂ ಸಮಾಧಾನಪಡಿಸಿಕೊಂಡು ಒಟ್ಟಿಗೆ ಕರೆದೊಯ್ಯುವುದಕ್ಕೆ ರಾಜ್ಯ ನಾಯಕರು ತಂತ್ರಗಾರಿಕೆ ರೂಪಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಆರು ಆಕಾಂಕ್ಷಿಗಳ ನಿರ್ಣಯ

ನಾರಾಯಣಗೌಡರು ಕಾಂಗ್ರೆಸ್‌ ಪಕ್ಷ ಸೇರುವುದು ಖಚಿತವಾದಲ್ಲಿ ಕೈ ಟಿಕೆಟ್‌ ಆಕಾಂಕ್ಷಿಗಳಾಗಿರುವ ಆರು ಮಂದಿ ಸೇರಿ ಒಂದು ನಿರ್ಣಯ ಕೈಗೊಳ್ಳುವುದಕ್ಕೆ ನಿರ್ಧರಿಸಿದ್ದಾರೆ. ಈಗಾಗಲೇ ಸ್ಥಳೀಯ ಮುಖಂಡರು, ಕಾರ್ಯಕರ್ತರೊಂದಿಗೆ ರಹಸ್ಯ ಸಭೆ ನಡೆಸುತ್ತಾ ಆರು ಮಂದಿ ಕೈಗೊಳ್ಳುವ ನಿರ್ಣಯಕ್ಕೆ ಬದ್ಧರಾಗಿರುವಂತೆ ಮನವೊಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳೀಯ ಕಾಂಗ್ರೆಸ್ಸಿಗರ ವಿರೋಧದ ನಡುವೆಯೂ ಕೈ ಪಾಳಯ ಸೇರುವುದಕ್ಕೆ ಮುಂದಾಗಿರುವ ಕೆ.ಸಿ.ನಾರಾಯಣಗೌಡರ ರಾಜಕೀಯ ಭವಿಷ್ಯ ಏನಾಗಬಹುದು ಎನ್ನುವುದು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ.