ಮೈಸೂರು, (ಜೂನ್.02): ರಾಜ್ಯ ರಾಜಕೀಯ ಬೆಳವಣಿಗೆ ಬೆನ್ನಲ್ಲೆ ಬಿಜೆಪಿ ನಾಯಕರಾದ ಶ್ರೀನಿವಾಸ್​ ಪ್ರಸಾದ್ ಹಾಗೂ ಎಚ್‌.ವಿಶ್ವನಾಥ್​ ಭೇಟಿ ಮಾಡಿ ಗಂಭೀರ ಚರ್ಚೆ ನಡೆಸಿದ್ದಾರೆ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲಿಗೆ, ಸಮ್ಮಿಶ್ರ ಸರ್ಕಾರ ಪತನ, ಯಡಿಯೂರಪ್ಪ ಸಿಎಂ ಆಗಲು ಸೇರಿದಂತೆ ಹಲವು ವಿಚಾರಗಳಿಗೆ ಸಂಸದ ಶ್ರೀನಿವಾಸ್​ ಪ್ರಸಾದ್​ ಮನೆಯಲ್ಲಿ ಮುಹೂರ್ತ ಇಡಲಾಗಿತ್ತು ಎಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ತಂದಿದ್ದಕ್ಕೆ ವ್ಯಥೆ : ಬಿಜೆಪಿ ಮುಖಂಡ

ಸಂಸದ ಶ್ರೀನಿವಾಸ್​ ಪ್ರಸಾದ್​ ಮನೆ ಹಲವು ಬೆಳವಣಿಗೆಗೆ ಸಾಧ್ಯವಾಗಿದೆ. ಈಗಲೂ ಶ್ರೀನಿವಾಸ್​ ಪ್ರಸಾದ್ ಮನೆಯಲ್ಲಿ ರಾಜಕೀಯ ಮತ್ತು ಜಿಲ್ಲೆಯ ವಿದ್ಯಾಮಾನಗಳ ಕುರಿತು ಮಾತನಾಡಿದ್ದೇವೆ. ಸದ್ಯಕ್ಕೆ ಯಾವ ವಿಚಾರಕ್ಕೆ ಮೂಹರ್ತ ಇಟ್ಟಿದ್ದೇವು ಎಂದು ಹೇಳುವುದಿಲ್ಲ. ಈ ಬಗ್ಗೆ ಕಾದು ನೋಡಣ ಎಂದರು.

ಯಡಿಯೂರಪ್ಪ ಆರೋಗ್ಯ ಸರಿಯಿಲ್ಲ. ಅವರ ಆರೋಗ್ಯ ಸರಿಯಾಗಬೇಕು. ಅದರ ಜೊತೆ ರಾಜ್ಯದ ಆಡಳಿತದ ಆರೋಗ್ಯವು ಸರಿಯಾಗಬೇಕು. ಇದಕ್ಕಾಗಿ ಹೈಕಮಾಂಡ್ ಶೀಘ್ರವೇ ಒಂದು ತೀರ್ಮಾನ ಕೈಗೊಳ್ಳಬೇಕು ಎನ್ನುವ ಮೂಲಕ ಯಡಿಯೂರಪ್ಪ ನಾಯಕತ್ವ ಬದಲಾವಣೆ ಕುರಿತು ಪರೋಕ್ಷವಾಗಿ ಸಹಮತ ಸೂಚಿಸಿದರು.

ರಾಜ್ಯ ರಾಜಕಾರಣಿದಲ್ಲಿ ಸ್ವಲ್ಪ ಗೊಂದಲ ಇದೆ. ಕೆಲವರು ದೆಹಲಿಗೆ ಹೋಗಿದ್ದಾರೆ. ಇನ್ನು‌ ಕೆಲವರು ಹೇಳಿಕೆ‌ ಕೊಡುತ್ತಿದ್ದಾರೆ. ಈ ಮಧ್ಯೆ ಯಡಿಯೂರಪ್ಪನವರು ಏನೂ ಮಾತನಾಡುತ್ತಿಲ್ಲ. ಯಾರು ಏನೇ ಮಾಡಿದರೂ ತೀರ್ಮಾನ ಮಾಡುವುದು ಹೈಕಮಾಂಡ್. ಹಾಗಾಗಿ ಹೈಕಮಾಂಡ್ ಸೂಕ್ತ ತೀರ್ಮಾನ ಮಾಡಲಿದೆ ಎಂದು ವಿಶ್ವಾಸ ಹೊಂದಿದ್ದೇವೆ ಎಂದು ಹೇಳಿದರು.

ಮೈಸೂರಿನಲ್ಲಿ ಸಂಸದ ಹಾಗೂ ಜಿಲ್ಲಾಧಿಕಾರಿ ರಂಪಾಟ ವಿಚಾರ : ಮೈಸೂರು ಜಿಲ್ಲೆ ನಿಮ್ಮಿಬ್ಬರದ್ದೇ ಅಲ್ಲ. ಮೈಸೂರು ಜಿಲ್ಲೆ ಪ್ರತಾಪ್ ಸಿಂಹಾಗೋ ರೋಹಿಣಿ ಸಿಂಧೂರಿಗೊ ಸೀಮಿತವಾಗಿಲ್ಲ.  ಇಬ್ಬರೂ ಹಾದಿರಂಪ ಬೀದಿರಂಪ ಬಿಡಿ ಎಂದು ವಿಶ್ವನಾಥ್ ಸಲಹೆ ನೀಡಿದರು. 

 ನಾನು, ಶ್ರೀನಿವಾಸ್ ಪ್ರಸಾದ್, ರಾಮದಾಸ್, ನಾಗೇಂದ್ರ, ತನ್ವೀರ್ ಸೇಠ್ ರಂತಹ ಹಿರಿಯರಿದ್ದೀವಿ‌. ನೀವಿಬ್ಬರೇ ಬೀದಿಯಲ್ಲಿ ಜಗಳ ಆಡಿದರೆ ಹೇಗೆ?  ಜಿಲ್ಲಾ ಉಸ್ತುವಾರಿ ಸಚಿವರು ಮೊದಲು ಇದಕ್ಕೆ ಫುಲ್ ಸ್ಟಾಪ್ ಇಡಬೇಕು.  ಡಿಸಿ ಅವರನ್ನ ರಸ್ತೆಯಲ್ಲಿ ನಿಂತು ಲೆಕ್ಕ ಕೇಳುವುದು ಸರಿಯಲ್ಲ. ಲೆಕ್ಕ ಕೇಳೋದು ತಪ್ಪಲ್ಲ ಬದಲಿಗೆ ರಸ್ತೆಯಲ್ಲಿ ನಿಂತು ಕೇಳೋದು ತಪ್ಪು.

ಮೊದಲು ಈ ಬಗ್ಗೆ ಉಸ್ತುವಾರಿ ಸಚಿವರು ಸಭೆ ಕರೆದು ಈ‌ ಮಾತಾಡಬೇಕು. ನನ್ನನ್ನು ಸೇರಿ, ಎಲ್ಲ ನಾಯಕರನ್ನ ಕರೆದು ಉಸ್ತುವಾರಿ ಸಚಿವರು ಮಾತಾಡಲಿ. ಡೀಸಿ ಆದವರಿಗೆ ಅವರದೇ ಆದ ಒಂದು ಗೌರವ ಇರುತ್ತದೆ. ಸಂಸದರಿಗೂ ಕೂಡ ಒಂದು ವಿಶೇಷವಾದ ಗೌರವ ಇದೆ ಅದನ್ನ ಉಳಿಸಿಕೊಳ್ಳಿ ಎಂದು  ಮೈಸೂರಿನಲ್ಲಿ ಎಂಎಲ್‌ಸಿ ವಿಶ್ವನಾಥ್ ಹೇಳಿದರು.