Asianet Suvarna News Asianet Suvarna News

ಡಿಕೆಶಿ ಕೇಸ್‌: ಒಬ್ಬ ಭ್ರಷ್ಟ ಆರೋಪಿಯ ಪರ ಇಡೀ ಸಂಪುಟ ನಿಂತಿದೆ, ಸಿ.ಟಿ.ರವಿ

ಬೆದರಿಕೆ ರಾಜಕೀಯ ನಡೆದಿದೆ. ಜನತೆ ಏನು ಭಾವಿಸುತ್ತಾರೋ ಎಂಬುದನ್ನು ಯೋಚಿಸದೆ ಕೆಟ್ಟ ಪರಂಪರೆಗೆ ಸಚಿವ ಸಂಪುಟ ನಾಂದಿ ಹಾಡಿದೆ. ಈ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್‌ ಎನ್ನುವ ಪ್ರಶ್ನೆಗಿಂತ ತನಿಖೆ ರದ್ದು ಎಂದರೆ ನ್ಯಾಯಾಂಗ ವ್ಯವಸ್ಥೆಯನ್ನು ತಿರಸ್ಕರಿಸಿದಂತಾಗುತ್ತದೆ ಎಂದು ಟೀಕಾಪ್ರಹಾರ ನಡೆಸಿದ ಮಾಜಿ ಸಚಿವ ಸಿ.ಟಿ.ರವಿ

BJP Leader CT Ravi React to DCM DK Shivakumar Case Back grg
Author
First Published Nov 25, 2023, 10:23 AM IST

ಬೆಂಗಳೂರು(ನ.25):  ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿಯನ್ನು ಸಚಿವ ಸಂಪುಟ ಹಿಂಪಡೆದಿರುವುದು ಸಂವಿಧಾನ ವಿರೋಧಿ ಕ್ರಮವಾಗಿದ್ದು, ರಾಜ್ಯಪಾಲರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಒತ್ತಾಯಿಸಿದ್ದಾರೆ.

ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇಲ್ಲಿ ಬೆದರಿಕೆ ರಾಜಕೀಯ ನಡೆದಿದೆ. ಜನತೆ ಏನು ಭಾವಿಸುತ್ತಾರೋ ಎಂಬುದನ್ನು ಯೋಚಿಸದೆ ಕೆಟ್ಟ ಪರಂಪರೆಗೆ ಸಚಿವ ಸಂಪುಟ ನಾಂದಿ ಹಾಡಿದೆ. ಈ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್‌ ಎನ್ನುವ ಪ್ರಶ್ನೆಗಿಂತ ತನಿಖೆ ರದ್ದು ಎಂದರೆ ನ್ಯಾಯಾಂಗ ವ್ಯವಸ್ಥೆಯನ್ನು ತಿರಸ್ಕರಿಸಿದಂತಾಗುತ್ತದೆ ಎಂದು ಟೀಕಾಪ್ರಹಾರ ನಡೆಸಿದರು.
ಇದು ಅಲಿಬಾಬಾ ಔರ್‌ ಚಾಲೀಸ್‌ ಚೋರ್‌ ಎಂಬಂತಿದೆ. ಒಬ್ಬ ಭ್ರಷ್ಟ ಆರೋಪಿಯ ಸಮರ್ಥನೆಗೆ ಇಡೀ ಸಚಿವ ಸಂಪುಟ ನಿಂತಿರುವುದು ಕರ್ನಾಟಕದ ಘನತೆಗೆ ಕಪ್ಪು ಚುಕ್ಕೆ ಇಟ್ಟಂತೆ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಹೇಳಿದರು.

ಕ್ಯಾಬಿನೆಟ್ ಡಿಕೆಶಿ ಪಾದದಡಿ ಇದೆ: ಕುಮಾರಸ್ವಾಮಿ ಕಿಡಿ

ಸಿಬಿಐ ಪ್ರಾಥಮಿಕ ವರದಿಯನ್ನೂ ಕೊಟ್ಟಿದೆ. ಪ್ರಕರಣ ರದ್ದು ಮಾಡುವ ಅವರ ಕೇಳಿಕೆಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಮೂರು ತಿಂಗಳಲ್ಲಿ ಸಿಬಿಐ ಅಂತಿಮ ವರದಿ ಕೊಡಬೇಕಿತ್ತು. ಜನವರಿಯಲ್ಲಿ ಅಂತಿಮ ವರದಿ ನಿರೀಕ್ಷೆ ಇರುವಾಗ ಈ ಸಂವಿಧಾನ ವಿರೋಧಿ ನಿರ್ಧಾರ ಮಾಡಲಾಗಿದೆ. ಇದು ಸರ್ಕಾರದ ಸಂವಿಧಾನ ವಿರೋಧಿಯಾಗಿದೆ ಎಂದು ಟೀಕಿಸಿದ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಚುನಾವಣೆ ಅಕ್ರಮದ ಬಗ್ಗೆ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದಾಗ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಅಂಥ ಕೆಟ್ಟ ಪರಂಪರೆಗೆ ರಾಜ್ಯದ ಸಚಿವ ಸಂಪುಟ ಮುಂದಾಗಿದೆ. ಎಲ್ಲ ಭ್ರಷ್ಟರಿಗೂ ಮಾದರಿಯಾಗುವಂತಹ ನಿರ್ಧಾರ ಇದಾಗಿದೆ. ಇದು ಭಂಡತನದ ಪರಮಾವಧಿ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗಳು ಯಾರ ಮನವಿ ಮೇರೆಗೆ ಈ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ? ಇಲ್ಲಿ ಸಂವಿಧಾನ ಇದೆ, ರಾಕ್ಷಸ ನ್ಯಾಯ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಿತ್ತು. ನ್ಯಾಯಾಲಯದ ಮೇಲೆ ವಿಶ್ವಾಸ ಇಲ್ಲ ಎಂಬುದನ್ನು ದೃಢಪಡಿಸಲಾಗಿದೆ. ಸರ್ಕಾರವು ಸಂಪುಟವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ರವಿ ವಾಗ್ದಾಳಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರು, ಚಿದಾನಂದ ಗೌಡ, ಅ. ದೇವೇಗೌಡ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios