Asianet Suvarna News Asianet Suvarna News

ಸಿಪಿ ಯೋಗಿಶ್ವರ್ ಮೌನ : ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಬಿಜೆಪಿಗೆ ತಾತ್ಕಾಲಿಕ ಬ್ರೇಕ್

ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲಪಡಿಸಲು ಬಿಜೆಪಿ ನಾಯಕರು ನಿರುತ್ಸಾಹ ತೋರುತ್ತಿದ್ದು,  ಸದ್ಯಕ್ಕೆ ಈ ಭಾಗದಲ್ಲಿ ಅಪರೇಷನ್‌ಕಮಲಕ್ಕೆ ತಾತ್ಕಾಲಿಕ ಬ್ರೇಕ್ ಸಿಕ್ಕಿದಂತಾಗಿದೆ. 

BJP Leader CP yogeshwar silent temporary brake to Operations BJP in old mysore region akb
Author
Bangalore, First Published Jul 11, 2022, 1:08 PM IST

ರವಿ ಶಿವರಾಮ್, ಏಷ್ಯಾ ನೆಟ್ ಸುವರ್ಣ ನ್ಯೂಸ್
ರಾಜ್ಯ ಬಿಜೆಪಿಯ ಬುಡ ಗಟ್ಟಿ ಇಲ್ಲದ ಜಾಗವಿದ್ರೆ ಅದು ಹಳೆ ಮೈಸೂರು ಭಾಗ. ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಬಳ್ಳಾಪುರ ಹಾಸನ‌ ಸೇರಿದಂತೆ ಒಟ್ಟಾರೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆಗೆ ಸ್ಥಳಿಯ ನಾಯಕತ್ವದ ಕೊರತೆ ಇದೆ. ಹೀಗಾಗಿ ಎರಡು ತಿಂಗಳ ಹಿಂದೆ ಬಿಜೆಪಿ ವರಿಷ್ಠ ಅಮಿತ್ ಶಾ ರಾಜ್ಯಕ್ಕೆ ಬಂದಾಗ ರಾಜ್ಯ ನಾಯಕರಿಗೆ ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲಪಡಿಸಲು ಸೂಚನೆ ನೀಡಿದ್ರು. ಅನ್ಯ ಪಕ್ಷದ ಸ್ಥಳೀಯ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಸಲಹೆ ನೀಡಿದ್ರು. ‌

ಅಮಿತ್ ಶಾ ಸೂಚನೆ ಮೇರೆಗೆ ರಾಜ್ಯ ಬಿಜೆಪಿ ನಾಯಕರು ಆರಂಭದಲ್ಲಿ ಉತ್ಸಾಹ ತೋರಿ ಚಿಕ್ಕಬಳ್ಳಾಪುರ, ಮಂಡ್ಯ, ಕೋಲಾರ ಭಾಗದಲ್ಲಿ ಒಂದಿಷ್ಟು ಪ್ರಮುಖ ಲೀಡರ್ ಗಳನ್ನ ಪಕ್ಷಕ್ಕೆ ಬರಮಾಡಿಕೊಂಡಿದ್ರು. ಮಂಡ್ಯದಲ್ಲಿ ಸಂಸದೆ ಸುಮಲತಾ, ಜಿಟಿ ದೇವೆಗೌಡ, ಮಂಡ್ಯ ಸ್ಥಳೀಯ ನಾಯಕ ಸಚ್ಚಿದಾನಂದ ಇವರೆಲ್ಲರೂ ಪಕ್ಷಕ್ಕೆ ಸೇರ್ತಾರೆ ಎನ್ನುವ ಮಾತುಗಳನ್ನು ಬಿಜೆಪಿ ನಾಯಕರು ಪರೋಕ್ಷವಾಗಿ ಹೇಳಿದ್ರು. ಆದ್ರೆ ಈಗ ಮೊದಲಿದ್ದ ಉತ್ಸಾಹ ಬಿಜೆಪಿ ನಾಯಕರಲ್ಲಿ‌ ಕಾಣುತ್ತಿಲ್ಲ. 

ಅಮಿತ್ ಶಾ ಸಮಾವೇಶ ಇನ್ನೂ ಮಾಡಿಲ್ಲ

ರಾಜ್ಯ ನಾಯಕರ ಮಾಹಿತಿ ಪ್ರಕಾರ ಮೇ ಕೊನೆವಾರದಲ್ಲೇ ಅಮಿತ್ ಶಾ (Amith shah) ಕಾರ್ಯಕ್ರಮ ಮಂಡ್ಯದಲ್ಲಿ (Mandya) ನಡೆಯಬೇಕಿತ್ತು. ಆ ಸಮಾವೇಶದಲ್ಲಿ ಸಂಸದೆ ಸುಮಲತಾ ಬಿಜೆಪಿ ಸೇರ್ತಾರೆ ಎನ್ನುವ ಮಾತುಗಳು ಜೋರಾಗಿ ಕೇಳಿ ಬಂದಿತ್ತು. ಅದಕ್ಕೂ ಮೊದಲು ಆ ಭಾಗದ ಸ್ಥಳೀಯ ನಾಯಕರನ್ನು ಪಕ್ಷಕ್ಕೆ‌ ಸೇರಿಸಿಕೊಳ್ಳಲು ಪಕ್ಷ ನಿರ್ಧರಿಸಿತ್ತು. ಆದ್ರೆ ಸುಮಲತಾ (Sumalata) ನಿಲುವು ಇನ್ನೂ ಸ್ಪಷ್ಟವಾಗಿಲ್ಲದ ಕಾರಣ ಅನ್ಯ ಪಕ್ಷದ ಕೆಲವು ಸ್ಥಳಿಯ ನಾಯಕರು ಇನ್ನೂ ಬಿಜೆಪಿ ಸೇರಲು ಮನಸ್ಸು ಮಾಡ್ತಿಲ್ಲ.

ರಾಮನಗರ: 2023ರ ಚುನಾವಣೆಗೆ ಈಗಿನಿಂದಲೇ ಸಿದ್ಧತೆ, ಪಕ್ಷ ಸಂಘಟನೆಗೆ ಮುಂದಾದ ಅನಿತಾ ಕುಮಾರಸ್ವಾಮಿ

ಇಂಡುವಾಳು ಸಚ್ಚಿದಾನಂದ ಇನ್ನೂ ಬಿಜೆಪಿ ಸೇರಿಲ್ಲ ಯಾಕೆ?

ಕೆ ಆರ್ ಪೇಟೆ, ಶ್ರೀರಂಗಪಟ್ಟಣ (SriRangapattana), ಮಂಡ್ಯ (Mandya) ಸಿಟಿ ಭಾಗದಲ್ಲಿ ಹಿಡಿತ ಹೊಂದಿರುವ ಅಂಬರೀಶ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಇಂಡುವಾಳು ಸಚ್ಚಿದಾನಂದ ಬಿಜೆಪಿ ಸೇರ್ತಾರೆ ಎಂದು ಈ ಹಿಂದೆ ಕಂದಾಯ ಸಚಿವ ಆರ್ ಅಶೋಕ್ (R Ashok) ನೇರವಾಗಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು. ಅಂದುಕೊಂಡಂತೆ ಆಗಿದ್ದರೆ ಸಚ್ಚಿದಾನಂದ ಕಳೆದ ತಿಂಗಳ(ಜೂನ್) 20 ರಂದೇ ಬಿಜೆಪಿ ಸೇರ್ಪಡೆ ಆಗಬೇಕಿತ್ತು. ಆದ್ರೆ ಅವರು ಇನ್ನು ಕಮಲ ಹಿಡಿದಿಲ್ಲ. ಕಾರಣ ಏನು ಎಂದು ಮಾಹಿತಿ ಸಂಗ್ರಹಿಸಿ ನೋಡಿದ್ರೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಇನ್ನೂ ಸಂಘಟನೆ ಬಲ ಇಲ್ಲ. ಸುಮಲತಾ ಯಾವ ನಿರ್ಧಾರ ಮಾಡ್ತಾರೋ ನೋಡೊಣ ಅಂತಿದ್ದಾರಂತೆ ಸಚ್ಚಿದಾನಂದ. ಪಕ್ಷ ಕೂಡ ಇನ್ನೂ ಯಾವುದೇ ಭರವಸೆ ನೀಡಿಲ್ಲ. ಏಕಾಏಕಿ ಬಿಜೆಪಿ ಸೇರಿ ಆಮೇಲೆ ಸಮಸ್ಯೆ ಆದ್ರೆ ತಮ್ಮ ರಾಜಕೀಯ ಭವಿಷ್ಯದ ಪ್ರಶ್ನೆ ಏನು ಎನ್ನುತ್ತಿದ್ದಾರಂತೆ ಇಂಡುವಾಳು ಸಚ್ಚಿದಾನಂದ (Induvalu Satchidananda) . 

ಬಿಜೆಪಿಯಲ್ಲಿ ಕ್ರೆಡಿಟ್ ವಾರ್- ಸಿಪಿ ಯೋಗಿಶ್ವರ್ ಸೈಲೆಂಟ್

ಹಳೆ ಮೈಸೂರು ಭಾಗದಲ್ಲಿ ನನಗೆ ಜವಾಬ್ದಾರಿ ಕೊಡಿ, ನಾನು ಪಕ್ಷ ಸಂಘಟನೆ ಮಾಡ್ತೇನೆ ಎಂದು ಮಾಜಿ ಸಚಿವ ಸಿಪಿ ಯೋಗಿಶ್ವರ್ ಪಕ್ಷದ ನಾಯಕರ ಮುಂದೆ ಅನೇಕ ಬಾರಿ ಕೇಳಿದ್ದಾರಂತೆ. ಆದ್ರೆ ಸಿಪಿ ಯೋಗಿಶ್ವರ್ ಗೆ ಪಕ್ಷ ಇದ್ದ ಸಚಿವ ಸ್ಥಾನವನ್ನು ಕಿತ್ತುಕೊಂಡಿತು.‌ ಆದ್ರೂ ಸಿಪಿ ಯೋಗಿಶ್ವರ್ ಹಳೆ ಮೈಸೂರು ಭಾಗದಲ್ಲಿ ಒಂದಿಷ್ಟು ಓಡಾಟ ಮಾಡಿ ಅನ್ಯ ಪಕ್ಷದ ಪ್ರಮುಖರ ಸಂಪರ್ಕ ಸಾಧಿಸಿ, ಒಂದಿಬ್ಬರು ನಾಯಕರನ್ನು ಬಿಜೆಪಿಗೆ ಸೇರಿಸಿದ್ರು. ಅದರಲ್ಲಿ ಪ್ರಮುಖವಾಗಿ ಜೆಡಿಎಸ್‌ನಿಂದ ಬಂದ ಅಶ್ವಿನಿ ಕೂಡ ಒಬ್ಬರು. ಆದ್ರೆ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ತಮ್ಮ ಕೆಲಸಕ್ಕೆ ರಾಜ್ಯ ಬಿಜೆಪಿ ಪ್ರಮುಖರು ಮನ್ನಣೆ ನೀಡಿಲ್ಲ ಎನ್ನುವ ಅಸಮಾಧಾನ ಯೋಗಿಶ್ವರ್‌ ಅವರಿಗೆ ಆಗಿದೆ ಎನ್ನುವ ಮಾತನ್ನು ಅವರ ಆಪ್ತ ವಲಯ ಹೇಳುತ್ತಿದೆ. ಕೆಲಸ ಮಾಡೋದು ಯಾರೊ ವೇದಿಕೆಯಲ್ಲಿ ಮೈಕ್ ಹಿಡಿದು ಭಾಷಣ ಮಾಡಿ ಕ್ರೆಡಿಟ್ ತಗೊಳ್ಳೋದು ಇನ್ಯಾರೊ. ಹಾಗಾಗಿ ನಾನು ಯಾಕೆ ಮೇಲೆ ಬಿದ್ದು ಓಡಾಟ ಮಾಡಿ ಇನ್ನೊಬ್ಬರಿಗೆ ಅದರ ಕ್ರೆಡಿಟ್ ನೀಡಲಿ ಎನ್ನುವ ಯೋಚನೆ ಸಿಪಿ ಯೋಗಿಶ್ವರ್‌ (C P Yogeshwar)ಅವರಿಗೆ ಬಂದಿದೆ ಎನ್ನುತ್ತಿವೆ ಮೂಲಗಳು. 

ಹಳೇ ಕಥೆ ಸಾಕು.. ಮುಂದೇನು ಮಾಡ್ಬೇಕು ಹೇಳಿ: ಮೊಯ್ಲಿ ಮಾತಿಗೆ ಕಾಂಗ್ರೆಸ್ ಕಾರ್ಯಕರ್ತರ ಅಡ್ಡಿ

ಜಿಟಿ ದೇವೇಗೌಡ ಬಿಜೆಪಿ ಸೇರುವ ಬಗ್ಗೆ ಖಚಿತತೆ ಇಲ್ಲ

ಮೂಲಗಳ ಮಾಹಿತಿ ಪ್ರಕಾರ ಜಿಟಿ ದೇವೇಗೌಡ (G T Devegowda) ಜೊತೆ ಬಿಜೆಪಿ ನಾಯಕರು ಈಗಾಗಲೇ ಮಾತುಕತೆ ನಡೆಸಿದ್ದಾರೆ. ಜಿಟಿಡಿ ತಮ್ಮ ಪುತ್ರ ಹರೀಶ್ ಗೌಡಗೆ ಹುಣುಸೂರಿನಿಂದ ಟಿಕೆಟ್ ನೀಡಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ ಅಂತೆ. ಅವರ ಬೇಡಿಕೆಯಂತೆ ಪಕ್ಷ ಅವರಿಗೆ ಓಕೆ ಎಂದಿದೆ ಎನ್ನುವ ಮಾಹಿತಿ ಇದೆ. ಆದ್ರೆ ಜಿಟಿಡಿ ಇನ್ನೂ ಬಿಜೆಪಿ ಸೇರುವ ನಿರ್ಧಾರ ಮಾಡಿಲ್ಲ. ಚುನಾವಣೆಗೆ ಇನ್ನೇನೂ ಏಳೆಂಟು ತಿಂಗಳು ಮಾತ್ರ ಬಾಕಿ ಇದೆ. ಆದ್ರೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆ ಮಾತ್ರ ಇನ್ನೂ ಕುಂಟುತ್ತಾ ಸಾಗಿದೆ.
 

Follow Us:
Download App:
  • android
  • ios