* ಎಚ್‌ಡಿಕೆ ಆರೆಸ್ಸೆಸ್‌ ಹೇಳಿಕೆಗೆ ಬಿಜೆಪಿ ನಾಯಕರ ಕಟು ತರಾಟೆ* ಆರೆಸ್ಸೆಸ್‌ ದೇಶ ಕಟ್ಟುವ ಸಂಸ್ಥೆ, ದೇವೇಗೌಡರೇ ಹೊಗಳಿದ್ದರು: ವಿಜಯೇಂದ್ರ* ಆರೆಸ್ಸೆಸ್‌ ಇಲ್ಲದಿದ್ದರೆ ಭಾರತ ಪಾಕಿಸ್ತಾನ ಆಗಿರುತ್ತಿತ್ತು: ಬಿಜೆಪಿಗರ ತಿರುಗೇಟು

ಬೆಂಗಳೂರು(ಆ.07): ದೇಶದಲ್ಲಿ 4 ಸಾವಿರಕ್ಕೂ ಅಧಿಕ ಐಎಎಸ್‌, ಐಪಿಎಸ್‌ ಅಧಿಕಾರಿಗಳು ಆರೆಸ್ಸೆಸ್‌ ಕಾರ್ಯಕರ್ತರಾಗಿದ್ದು, ದೇಶದ ಕಾರ್ಯಾಂಗದ ಮೇಲೆ ಆರೆಸ್ಸೆಸ್‌(RSS) ಹಿಡಿತ ಸಾಧಿಸಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಹೇಳಿಕೆಗೆ ಬಿಜೆಪಿ ನಾಯಕರಿಂದ(BJP Leaders) ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆರೆಸ್ಸೆಸ್‌ ಇಲ್ಲದಿದ್ದರೆ ಭಾರತ ಪಾಕಿಸ್ತಾನ(Pakistan) ಆಗಿರುತ್ತಿತ್ತು. ಆರೆಸ್ಸೆಸ್‌ ದೇಶ ಕಟ್ಟುವ ಸಂಸ್ಥೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ(Fprmer PM HD Devegowda) ಕೂಡ ಆರೆಸ್ಸೆಸ್‌ ಅನ್ನು ಪ್ರಶಂಸಿಸಿದ್ದರು ಎಂದು ಬಿಜೆಪಿ ನಾಯಕರು ತರಾಟೆ ತೆಗೆದುಕೊಂಡಿದ್ದಾರೆ.

ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌(nalin Kumar Kateel), ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಚಿವರಾದ ಕೆ.ಎಸ್‌.ಈಶ್ವರಪ್ಪ, ಆರ್‌.ಅಶೋಕ್‌, ಎಸ್‌.ಟಿ.ಸೋಮಶೇಖರ್‌, ಸುನಿಲ್‌ ಕುಮಾರ್‌, ಅಶ್ವತ್ಥನಾರಾಯಣ್‌, ಗೋವಿಂದ ಕಾರಜೋಳ, ಪ್ರಭು ಚವ್ಹಾಣ್‌ ಸೇರಿ ಹಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಮಾಲೆ ಕಣ್ಣಿನವರಿಗೆ ಊರೆಲ್ಲ ಹಳದಿಯಾಗಿ ಕಾಣುವ ಸ್ಥಿತಿ ಕುಮಾರಸ್ವಾಮಿ ಅವರದ್ದಾಗಿದೆ ಎಂದು ಕಟೀಲ್‌ ವ್ಯಂಗ್ಯವಾಡಿದರೆ, ಕೋವಿಡ್‌ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಸ್ವಯಂಸೇವಕರು ನಿರಂತರವಾಗಿ ಸೇವೆ ಸಲ್ಲಿಸಿದ್ದು, ಇದ್ಯಾವುದನ್ನೂ ತಿಳಿಯದ ಮೂರ್ಖರು ಈ ರೀತಿಯ ಆಪಾದನೆ ಮಾಡುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ. ಆರೆಸ್ಸೆಸ್‌ ಇಲ್ಲದಿದ್ದರೆ ಭಾರತ ಈಗ ಪಾಕಿಸ್ತಾನ ಆಗಿರುತ್ತಿತ್ತು ಎಂದು ಸಚಿವ ಪ್ರಭು ಚವ್ಹಾಣ್‌ ಕಿಡಿಕಾರಿದ್ದಾರೆ.

ಆರೆಸ್ಸೆಸ್‌(RSS) ಸಂಸ್ಕೃತಿ ಬಗ್ಗೆ ಗೊತ್ತಿಲ್ಲದವರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ, ಮುಂಬರುವ ಚುನಾವಣೆಗಳನ್ನು ಮುಂದಿಟ್ಟುಕೊಂಡು ಕುಮಾರಸ್ವಾಮಿ ಅವರು ಈ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಈಶ್ವರಪ್ಪ, ಕಾರಜೋಳ, ಎಸ್‌.ಟಿ.ಸೋಮಶೇಖರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೌಡರೇ ಹೊಗಳಿದ್ದರು

ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿ ದೇವೇಗೌಡರಿಂದ ಮಾಹಿತಿ ಪಡೆದುಕೊಳ್ಳಬಹುದಿತ್ತು. ಆರೆಸ್ಸೆಸ್ಸನ್ನು ಹೊಗಳಿದ ಹಿರಿಯ ಗೌಡರ ನುಡಿಗಳು, ಸಂಘದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

-ಬಿ.ವೈ.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ

ಯಾರು ಏನು ಹೇಳಿದ್ರು?

* ಆರ್‌ಎಸ್‌ಎಸ್‌ ಇಲ್ಲದಿದ್ದರೆ ಭಾರತ ಈಗ ಪಾಕಿಸ್ತಾನವಾಗುತ್ತಿತ್ತು. ಆರ್‌ಎಸ್‌ಎಸ್‌ ಏನು ಎಂಬುದು ಜನರಿಗೆ ಗೊತ್ತಿದೆ. ಆರ್‌ಎಸ್‌ಎಸ್‌ ಇರುವುದರಿಂದಲೇ ದೇಶ ಇದೆ. ಪಾಕಿಸ್ತಾನ, ತಾಲಿಬಾನ್‌ ಎಲ್ಲವೂ ಕಾಂಗ್ರೆಸ್‌ನವರೇ -ಪ್ರಭು ಚೌಹಾಣ್‌, ಪಶುಸಂಗೋಪನಾ ಸಚಿವ

* ಜಗತ್ತಿನಲ್ಲಿ ಇಂದು ಭಾರತ ಹೆಮ್ಮೆ ಪಡುವಂಥ ಸಾಧನೆ ಮಾಡಲು ಆರೆಸ್ಸೆಸ್‌ ಪ್ರಭಾವಿತ ಪ್ರಧಾನಿ ಮೋದಿ ಕಾರಣ. ಚುನಾವಣೆಗಳನ್ನು ಮುಂದಿಟ್ಟುಕೊಂಡು ಕುಮಾರಸ್ವಾಮಿ ಆರೆಸ್ಸೆಸ್‌ ಕುರಿತು ಈ ರೀತಿಯ ಹೇಳಿಕೆ ನೀಡಿರೋದು ಒಳ್ಳೆಯ ಬೆಳವಣಿಗೆ ಅಲ್ಲ, ರಾಜಕಾರಣಕ್ಕಾಗಿ ಕುಮಾರಸ್ವಾಮಿ ಆರೆಸ್ಸೆಸ್‌ ಬಗ್ಗೆ ಮಾತನಾಡೋದು ಸರಿಯಲ್ಲ. -ಕೆ.ಎಸ್‌.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

* ಆರೆಸ್ಸೆಸ್‌ ರಾಷ್ಟ್ರ ಕಟ್ಟುವ ಸಂಘಟನೆ. ಅದು ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆಯೇ ಹೊರತು ಅಧಿಕಾರವನ್ನಲ್ಲ. ಕಾಮಾಲೆ ಕಣ್ಣಿನಿಂದ ನೋಡುವ ಬದಲು ಕುಮಾರಸ್ವಾಮಿ ಅವರು ಒಂದು ವಾರ ಆರೆಸ್ಸೆಸ್‌ ಶಾಖೆಗೆ ಬಂದು ನೋಡಲಿ -ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಜ್ಯಾಧ್ಯಕ್ಷ

* ಕುಮಾರಸ್ವಾಮಿ ಅವರಿಗೆ ಎಲ್ಲೋ ಲೆಕ್ಕ ತಪ್ಪಾಗಿದೆ. 4 ಸಾವಿರ ಅಲ್ಲ, ಅದಕ್ಕೂ ಹೆಚ್ಚು ಮಂದಿ ಐಎಎಸ್‌, ಐಪಿಎಸ್‌ ಅಧಿಕಾರಿಗಳು ಆರೆಸ್ಸೆಸ್‌ ಕಾರ್ಯಕರ್ತರಾಗಿದ್ದಾರೆ. ಬರೇ ಐಎಎಸ್‌, ಐಪಿಎಸ್‌ ಹುದ್ದೆಗಳಲ್ಲಿ ಮಾತ್ರ ಅಲ್ಲ, ಗ್ರಾ.ಪಂ.ಪಿಡಿಒನಿಂದ ರಾಷ್ಟ್ರಪತಿವರೆಗೆ ಆರೆಸ್ಸೆಸ್‌ ಕಾರ್ಯಕರ್ತರು ಇದ್ದಾರೆ -ಸುನಿಲ್‌ ಕುಮಾರ್‌, ಇಂಧನ ಸಚಿವ

* ಸಂಘಪರಿವಾರದ ಹಿನ್ನೆಲೆಯುಳ್ಳವರು ಅಧಿಕಾರದಲ್ಲಿರಬಾರದು ಎಂದು ಏನಾದರೂ ನಿಯಮ ಇದೆಯಾ? ಇಡೀ ದೇಶದಲ್ಲಿ ಸಂಘ ಪರಿವಾರದವರು ಅಧಿಕಾರಕ್ಕೆ ಬರುತ್ತಿದ್ದಾರೆ.ದೇಶದಲ್ಲಿ ಮೋದಿ, ಸಿಎಂ, ನಾನು ಎಲ್ಲರೂ ಸಂಘ ಪರಿವಾರದ ಹಿನ್ನೆಲೆಯವರು -ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಉನ್ನತ ಶಿಕ್ಷಣ ಸಚಿವ

* ಆರ್‌ಎಸ್‌ಎಸ್‌ ಸಂಸ್ಕೃತಿ ಗೊತ್ತಿಲ್ಲದವರು ಪ್ರಚಾರಕ್ಕಾಗಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಆರೆಸ್ಸೆಸ್‌ನವರು ದೇಶಭಕ್ತರು. ಈ ಸಂಘಟನೆಯಲ್ಲಿರುವವರು ಯಾವತ್ತೂ ಕೆಟ್ಟಕೆಲಸ ಮಾಡಿಲ್ಲ. ಆರೆಸ್ಸೆಸ್‌ನಲ್ಲಿ ಜಾತಿ, ಧರ್ಮ, ಮತ, ಪಂಥ, ಬಡವ, ಶ್ರೀಮಂತ ಎಂಬುದಿಲ್ಲ - ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ

* ಕೇಂದ್ರ ಸರ್ಕಾರದ್ದು ನನಗೆ ಗೊತ್ತಿಲ್ಲ. ಆದರೆ, ರಾಜ್ಯ ಸರ್ಕಾರದ ಮೇಲೆ ಆರ್‌ಎಸ್‌ಎಸ್‌ ಯಾವುದೇ ರೀತಿಯ ಒತ್ತಡ ಹೇರಿಲ್ಲ. ಕುಮಾರಸ್ವಾಮಿ ಅವರಿಗೆ ಮಾಹಿತಿ ಕೊರತೆ ಇದೆ. ಚುನಾವಣೆಯ ದೃಷ್ಟಿಯಿಂದ ಅವರು ಈ ರೀತಿ ಹೇಳುತ್ತಿರಬಹುದು -ಎಸ್‌.ಟಿ.ಸೋಮಶೇಖರ್‌, ಸಚಿವ

* ಆರ್‌ಎಸ್‌ಎಸ್‌ ಕೋಟ್ಯಂತರ ಜನರಿಗೆ ದೇಶ ಸೇವೆ ಹಾಗೂ ಆಪತ್ತಿನ ಪರಿಸ್ಥಿತಿಯಲ್ಲಿ ಜನರಿಗೆ ಯಾವ ರೀತಿ ನೆರವಾಗಬೇಕು ಎಂಬ ಪಾಠ ಹೇಳಿಕೊಡುತ್ತದೆ.ಎಂದಿಗೂ ವಂಶಪಾರಂಪರ್ಯ ಅಥವಾ ಕುಟುಂಬ ರಾಜಕಾರಣ ಬೋಧಿಸುವುದಿಲ್ಲ -ಸಿ.ಸಿ. ಪಾಟೀಲ, ಲೋಕೋಪಯೋಗಿ ಸಚಿವ