ಬಿಜೆಪಿ ಕೊಟ್ಟ ಮಾತು ಉಳಿಸಿಕೊಂಡಿದೆ: ವಿರೂಪಾಕ್ಷಪ್ಪ
ಕೊಟ್ಟ ಮಾತಿನಂತೆ ಬಿಜೆಪಿ ನಾಯಕರು ನಡೆದುಕೊಂಡಿರುವುದು ತಮ್ಮ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಸಂತಸ ತಂದಿದೆ: ವಿರೂಪಾಕ್ಷಪ್ಪ
ಸಿಂಧನೂರು(ನ.09): ತಮ್ಮನ್ನು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಪ್ತು ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಬಿಜೆಪಿ ಪಕ್ಷ ಕೊಟ್ಟಮಾತನ್ನು ಉಳಿಸಿಕೊಂಡಿದೆ ಎಂದು ನಿಗಮದ ನೂತನ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಹೇಳಿದರು.
ನಗರದ ಕನಕದಾಸ ವೃತ್ತದಲ್ಲಿ ಕನಕದಾಸರ ಮೂರ್ತಿಗೆ ಮಾಲಾರ್ಪಣೆ ಮಾಡಿದ ನಂತರ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ವೈ.ವಿಜಯೇಂದ್ರ ಅವರು ತಮ್ಮ ನಿವಾಸಕ್ಕೆ ಬಂದು ಮಾತುಕತೆ ನಡೆಸಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್ ಅವರು ನಿಗಮದ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿದ್ದರು. ಆರು ತಿಂಗಳ ಹಿಂದೆಯೇ ತಮ್ಮ ಹೆಸರು ಮೊದಲ ಸ್ಥಾನದಲ್ಲಿತ್ತು. ಕಾರಣಾಂತರದಿಂದ ವಿಳಂಬವಾಗಿದೆ. ಆದರೆ, ಕೊಟ್ಟ ಮಾತಿನಂತೆ ಬಿಜೆಪಿ ನಾಯಕರು ನಡೆದುಕೊಂಡಿರುವುದು ತಮ್ಮ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಸಂತಸ ತಂದಿದೆ. ಪಕ್ಷ ಸಂಘಟನೆಗೆ ಹೊಸ ಚೈತನ್ಯ ಮೂಡಿಸಿದೆ. ಹೀಗಾಗಿ ನಿಗಮದ ಆಯ್ಕೆ ಸಮಿತಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ರಾಯಚೂರು: ದೇವದುರ್ಗ ಗೆಲುವಿಗಾಗಿ ಜೆಡಿಎಸ್ ಹರಸಾಹಸ, ಶಾಸಕ ಶಿವನಗೌಡ ವಿರುದ್ಧ ಪ್ರತಿಭಟನೆ
13 ವರ್ಷಗಳ ಕಾಲ ತಮಗೆ ಯಾವುದೇ ಅಧಿಕಾರ ಇರಲಿಲ್ಲ. ಆದಾಗ್ಯೂ ಕಾರ್ಯಕರ್ತರು ಮತ್ತು ಅಭಿಮಾನಿಗಳು ತಮ್ಮ ಮೇಲೆ ವಿಶ್ವಾಸವಿಟ್ಟು ಜೊತೆಗಿದ್ದರು. ಆದರೆ, ರಾಜಕೀಯ ಏರುಪೇರಿನಿಂದ ಬೇರೆ ಬೇರೆ ಪಕ್ಷಕ್ಕೆ ತಾವು ಹೋಗಿರುವುದು ಬೆಂಬಲಿಗರಿಗೆ ಬೇಸರ ಮೂಡಿಸಿದೆ. ಪುನಃ ಬಿಜೆಪಿಗೆ ಬಂದಾಗ ಹಣ ಪಡೆದುಕೊಂಡಿದ್ದಾರೆ ಎಂಬ ಕಳಂಕ ನನ್ನ ಮೇಲೆ ಇತ್ತು. ಒಂದು ವೇಳೆ ನಿಗಮದ ಅಧ್ಯಕ್ಷ ಸ್ಥಾನ ಕೊಡದಿದ್ದರೆ ಆ ಆರೋಪ ಕಾರ್ಯಕರ್ತರ ಮನಸ್ಸಿನಲ್ಲಿರುತ್ತಿತ್ತು. ಆದರೆ, ಈಗ ನಿಗಮದ ಅಧ್ಯಕ್ಷ ಸ್ಥಾನ ಕೊಟ್ಟಿರುವುದರಿಂದ ತಮ್ಮ ಮೇಲಿನ ಕಳಂಕ ದೂರವಾಯಿತು. ಜೊತೆಗೆ ಪಕ್ಷದ ಮೇಲೆ ನಂಬಿಕೆಯೂ ಬಂದಿದೆ ಎಂದರು.
ನಾನು ಪ್ರಬಲ ಆಕಾಂಕ್ಷಿಯಾಗಿದ್ದು, ಟಿಕೆಟ್ ನೀಡುವ ಭರವಸೆಯಿದೆ. ನಾಡಗೌಡ ಅಭಿವೃದ್ಧಿ ಮಾಡಿದ್ದೀನಿ ಅಂತ ಹೇಳುತ್ತಿದ್ದಾರೆ. ಆ ಅಭಿವೃದ್ಧಿಗೆ ಅನುದಾನ ಕೊಡುತ್ತಿರುವ ಸರ್ಕಾರ ಬಿಜೆಪಿಯದ್ದು ಎಂಬುದನ್ನು ಮರೆಯಬಾರದು. ಗ್ರಾಮ ವಾಸ್ತವ್ಯ ಮಾಡುವ ನೈತಿಕತೆ ನಾಡಗೌಡರಿಗಿಲ್ಲ. ಹಂಪನಗೌಡ ಮತ್ತು ನಾಡಗೌಡ ಇಬ್ಬರು ಒಳ ಒಪ್ಪಂದ ಮಾಡಿಕೊಂಡಿ ರಾಜಕಾರಣ ಮಾಡುತ್ತಿದ್ದಾರೆ. ಅವರಿಬ್ಬರದ್ದು ಪವಿತ್ರ ಮೈತ್ರಿ ಆದರೂ ಜನರಿಗೆ ಅದು ಅಪವಿತ್ರ ಮೈತ್ರಿಯಾಗಿದೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಬಿಜೆಪಿ ಅಧ್ಯಕ್ಷ ಹನುಮೇಶ ಸಾಲಗುಂದಾ, ಮುಖಂಡರಾದ ಈರೇಶ ಇಲ್ಲೂರು ಸೇರಿದಂತೆ ಮತ್ತಿತರರ ಮುಖಂಡರು, ಕಾರ್ಯಕರ್ತರು ಇದ್ದರು.