ಯಡಿಯೂರಪ್ಪ ರಾಜ್ಯದ ಜನಪ್ರಿಯ ನಾಯಕ: ಅರುಣ್‌ ಸಿಂಗ್‌

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯದ ಬಹುದೊಡ್ಡ ಜನಪ್ರಿಯ ನಾಯಕ. ಬಿಜೆಪಿಯಲ್ಲಿ ಅವರನ್ನು ನಿರ್ಲಕ್ಷ್ಯ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ. 

bjp karnataka state incharge arun singh talks about bs yediyurappa at belagavi gvd

ಬೆಳಗಾವಿ (ಅ.18): ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯದ ಬಹುದೊಡ್ಡ ಜನಪ್ರಿಯ ನಾಯಕ. ಬಿಜೆಪಿಯಲ್ಲಿ ಅವರನ್ನು ನಿರ್ಲಕ್ಷ್ಯ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ನಿರ್ಲಕ್ಷ್ಯ ಮಾಡುತ್ತಿಲ್ಲ. ಅವರು ನಾಲ್ಕು ಬಾರಿ ಮುಖ್ಯಮಂತ್ರಿ ಆದವರು, ಅನೇಕ ಬಾರಿ ವಿಪಕ್ಷ ನಾಯಕರಾಗಿದ್ದವರು. ಜನ ಸಂಕಲ್ಪ ಯಾತ್ರೆಯಲ್ಲಿ ಅವರು ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ 150 ಸ್ಥಾನ ಪಡೆಯಲು ಶ್ರಮಿಸುತ್ತಿದ್ದಾರೆ ಎಂದರು.

ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿ, ಆದಷ್ಟು ಬೇಗ ಸಂಪುಟ ವಿಸ್ತರಣೆ ಆಗಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ ಎಂದರು. ಬಿಜೆಪಿಯಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಗುಂಪುಗಾರಿಕೆ ಏನೇ ಇದ್ದರೂ ಅದು ಕಾಂಗ್ರೆಸ್‌ನಲ್ಲಿ. ಗೋಕಾಕ್‌ ಶಾಸಕ ರಮೇಶ ಜಾರಕಿಹೊಳಿ ನನ್ನ ಸ್ನೇಹಿತರು. ಜನಪರ ಕಾಳಜಿ ಉಳ್ಳವರು. ಅವರೊಂದಿಗೆ ಭಾನುವಾರ ರಾತ್ರಿ ಚರ್ಚೆ ಮಾಡಿದ್ದೇನೆ. ಸಾಮಾನ್ಯವಾಗಿ ಎಲ್ಲರೊಂದಿಗೂ ನಾವು ಚರ್ಚಿಸುತ್ತೇವೆ. ಸಚಿವ ಕಾರಜೋಳ ಅವರು ಪಕ್ಷಕ್ಕೆ ಮಾರ್ಗದರ್ಶನ ಮಾಡುತ್ತಾರೆ. ಅವರೊಂದಿಗೂ ಚರ್ಚೆ ಮಾಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು, ಕಾಂಗ್ರೆಸ್‌ ಸೋಲಿಸಲು ರಮೇಶ ಜಾರಕಿಹೊಳಿಯವರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದರು.

ಬಸನಗೌಡ ಯತ್ನಾಳ್, ಅರವಿಂದ ಬೆಲ್ಲದ ಪಕ್ಷದ ನಾಯಕರಲ್ಲ: ಅರುಣ್‌ ಸಿಂಗ್‌

ಯತ್ನಾಳ್‌ ಬಿಜೆಪಿ ನಾಯಕ ಅಲ್ಲ: ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್‌ ಅವರು ಮತ್ತೆ ಕಿಡಿಕಾರಿದಾದರೆ. ಯತ್ನಾಳ್‌ ಬಿಜೆಪಿಯ ನಾಯಕರೂ ಅಲ್ಲ, ಕೋರ್‌ ಕಮೀಟಿ ಸದಸ್ಯರೂ ಅಲ್ಲ. ಅವರು ಪಕ್ಷದಿಂದ ಗೆದ್ದಿದ್ದಾರೆ ಅಷ್ಟೆ. ಈ ಹಿಂದೆ ಪಕ್ಷದಿಂದ ಹೊರಗೆ ಹೋಗಿದ್ದರು ಎಂದರು. ಯಾರೇ ಆದರೂ ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು. ಪಕ್ಷದ ಹಿರಿಯ ನಾಯಕರನ್ನು ಗೌರವಿಸಬೇಕು. ಪಕ್ಷಕ್ಕೆ ಮುಜುಗರವಾಗುವ ಹೇಳಿಕೆ ನೀಡಿರುವ ಯತ್ನಾಳ್‌ಗೆ ನೋಟಿಸ್‌ ನೀಡಲಾಗಿದೆ. ಈ ರೀತಿ ಹೇಳಿಕೆ ನೀಡದಂತೆ ಈಗಾಗಲೇ ವಾರ್ನಿಂಗ್‌ ಮಾಡಲಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಶಿಸ್ತುಪಾಲನಾ ಕಮೀಟಿ ಸೂಕ್ತ ನಿರ್ಧಾರ ಮಾಡಲಿದೆ. ಯಾರೂ ತಮ್ಮ ಸ್ವಾರ್ಥವನ್ನು ಇಟ್ಟುಕೊಂಡು ಮಾತನಾಡಬಾರದು. ಯತ್ನಾಳ್‌ ಅವರ ಹೇಳಿಕೆಯಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.

ಕಾಂಗ್ರೆಸ್‌ ಕಾರ್ಯಕರ್ತರ ಕುಟುಂಬಕ್ಕೂ ಬೇಕು ಮೋದಿ ಸರ್ಕಾರ: ಕಾಂಗ್ರೆಸ್‌ ಕಾರ್ಯಕರ್ತರ ಮನೆ-ಮನೆಗೆ ಹೋಗಿ ಯಾರು ಒಳ್ಳೆಯ ಆಡಳಿತ ನೀಡುತ್ತಾರೆಂದು ಅವರ ಕುಟುಂಬದವರಿಗೆ ಕೇಳಿದರೆ ಅವರೂ ಮೋದಿ ಹೆಸರು ಹೇಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಎಷ್ಟರ ಮಟ್ಟಿಗೆ ಜನರ ಮನಸ್ಸಿನಲ್ಲಿ ಬೇರೂರಿವೆ ಎಂಬುದು ತಿಳಿಯುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿದರು.

ದೇಶದಲ್ಲಿ ಒಮ್ಮೆ ಕಾಂಗ್ರೆಸ್‌, ಒಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವ ಟ್ರೆಂಡ್‌ ಈಗಿಲ್ಲ. ಗೋವಾದ ಸತತ ಮೂರು ಬಾರಿ ಬಿಜೆಪಿ ಆಡಳಿತ ಮಾಡುತ್ತಿದೆ. ಉತ್ತರ ಪ್ರದೇಶದಲ್ಲೂ ಎರಡು ಬಾರಿ, ಮಣಿಪುರ, ಉತ್ತರಾಖಂಡ ಹೀಗೆ ಹಲವು ರಾಜ್ಯಗಳಲ್ಲಿ ಬಿಜೆಪಿ ಮರು ಅಧಿಕಾರ ಸ್ಥಾಪಿಸುತ್ತಿದೆ. ದೇಶದ ಎಲ್ಲೆಡೆ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ನೆಲಕಚ್ಚುತ್ತಿದೆ ಎಂದ ಅವರು, ದೇಶದ ಕಟ್ಟಕಡೆಯ ವ್ಯಕ್ತಿಗೂ ನೇರವಾಗಿ ಕೇಂದ್ರ ಸರ್ಕಾರ ಎಲ್ಲ ಸೌಲಭ್ಯ ನೀಡುತ್ತಿದೆ. ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸೀಟು ಪಡೆಯುವುದು ಖಚಿತ. 150ರಲ್ಲಿ ಕಾಂಗ್ರೆಸ್‌ ವಶದಲ್ಲಿರುವ ಹುಬ್ಬಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರವನ್ನು ಸೇರಿಸುವ ನಿಟ್ಟಿನಲ್ಲಿ ಇಂದಿನಿಂದ ಕಾರ್ಯಕರ್ತರು ಹಗಲು, ರಾತ್ರಿ ಕೆಲಸ ಮಾಡುವಂತೆ, ವಂದೇ ಮಾತರಂ ಸಂಕಲ್ಪದಿಂದ ಪಕ್ಷದ ಕಾರ್ಯಗಳಲ್ಲಿ ತೊಡಗುವಂತೆ ಕರೆ ನೀಡಿದರು.

ಹುಬ್ಬಳ್ಳಿ, ಧಾರವಾಡಗಳಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ: ಅರುಣ್‌ ಸಿಂಗ್‌

ಕಾಂಗ್ರೆಸ್‌ ಜನರನ್ನು ಮರಳು ಮಾಡುವ ಕೆಲಸ ಮಾಡುತ್ತಿದೆ. ಕೋವಿಡ್‌ ವೇಳೆ ಕೇಂದ್ರ ಸರ್ಕಾರ ಉಚಿತ ಪಡಿತರ, ಉಚಿತ ಲಸಿಕೆ ನೀಡಿ ಜನರಿಗೆ ನೆರವಾಗಿದೆ. ಆಯುಷ್ಮಾನ್‌ ಭಾರತ ಕಾರ್ಡ್‌ ಮೂಲಕ ಎಲ್ಲರಿಗೆ ಆರೋಗ್ಯ ಭಾಗ್ಯ ನೀಡಲಾಗುತ್ತಿದೆ. ಜಲಜೀವನ ಮಿಷನ್‌ ಮೂಲಕ ಎಲ್ಲ ಮನೆಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಲಾಗುತ್ತಿದೆ. ಮೋದಿ ಹಾಗೂ ಬೊಮ್ಮಾಯಿ ಸರ್ಕಾರದ ಯೋಜನೆಯನ್ನು ಜನರಿಗೆ ತಿಳಿಸಿ ಈ ಮೂಲಕ ಕಾರ್ಯಕರ್ತರು ಪಕ್ಷವನ್ನು ಮತ್ತಷ್ಟು ಮುನ್ನಡೆಸಬೇಕು ಎಂದರು.

Latest Videos
Follow Us:
Download App:
  • android
  • ios